Advertisement

ಹಾಪ್‌ಕಾಮ್ಸ್‌ನಲ್ಲಿ ಹಣ್ಣು, ತರಕಾರಿ ಅಗ್ಗ

10:36 AM Aug 24, 2018 | |

ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಹಣ್ಣುಗಳು ದುಬಾರಿಯಾದ ಬೆನ್ನಲ್ಲೇ ಹಾಪ್‌ ಕಾಮ್ಸ್‌, ಹಣ್ಣು ಮತ್ತು ತರಕಾರಿಗಳನ್ನು ರಿಯಾಯಿತಿ ಬೆಲೆಗೆ ಮಾರಾಟ ಮಾಡುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹಾಪ್‌ಕಾಮ್ಸ್‌, ಹಣ್ಣು, ತರಕಾರಿಗಳನ್ನು ಶೇ.10ರ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿದೆ. ಅದರಂತೆ ಸಿಮ್ಲಾ ಸೇಬು 120 ರೂ., ಮೂಸಂಬಿ 50ರಿಂದ 60 ರೂ., ನಾಗಪುರ ಕಿತ್ತಳೆ 110 ರೂ., ದಾಳಿಂಬೆ 99 ರೂ., ಅನಾನಸ್‌ 54 ರೂ., ಸೀಬೆ 60 ರೂ.ಗೆ (ಎಲ್ಲದರ ದರ ಕೆ.ಜಿಗೆ) ಲಭ್ಯವಿರುತ್ತವೆ.

Advertisement

ಹಬ್ಬದ ಅಂಗವಾಗಿ ಕಳೆದ ಎರಡು ದಿನಗಳಿಂದ ವಿಶೇಷ ರಿಯಾಯಿತಿ ದರದಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡುತ್ತಿದ್ದು, ಎಂದಿಗಿಂತ ಹೆಚ್ಚು ವ್ಯಾಪಾರ, ವಹಿವಾಟು ನಡೆದಿದೆ. ಹಾಪ್‌ಕಾಮ್ಸ್‌ ವಹಿವಾಟಿನಲ್ಲಿ ಮಂಗಳವಾರ ಶೇ.30, ಬುಧವಾರ ಮತ್ತು ಗುರುವಾರ ಶೇ.40ರಷ್ಟು ಹೆಚ್ಚಳವಾಗಿದೆ. ಹಬ್ಬದ ಹಿಂದಿನ ದಿನವಾದ ಗುರುವಾರ, ಅಂದಾಜು 40 ಟನ್‌ಗಳಷ್ಟು ಹಣ್ಣು, ತರಕಾರಿ ಮಾರಾಟವಾಗಿವೆ ಎಂದು ಹಾಪ್‌ ಕಾಮ್ಸ್‌ ವ್ಯವಸ್ಥಾಪಕ ನಿರ್ದೇಶಕ ಪ್ರಸಾದ್‌ ತಿಳಿಸಿದರು.

ಹಾಪ್‌ಕಾಮ್ಸ್‌ಗೆ ತರಕಾರಿಗಳನ್ನು ಪೂರೈಸುವ ಬ್ಬರು ರೈತರು ಗುರುವಾರ ಶಾಂತಿನಗರದ ಹಾಪ್‌ಕಾಮ್ಸ್‌ ಮಳಿಗೆಯಲ್ಲಿ ಮಾರುಕಟ್ಟೆಗಿಂತ ಕಡಿಮೆ ದರದಲ್ಲಿ ಹೂವು ಹಾಗೂ ಬಾಳೆ ಕಂಬ ಮಾರಾಟ ಮಾಡಿದರು. ಒಂದು ಮಾರು ಸೇವಂತಿಗೆ ಬೆಲೆ 80 ರೂ. ಹಾಗೂ ಒಂದು ಜೋಡಿ ಬಾಳೆಕಂಬದ ಬೆಲೆ ಕೇವಲ 20 ರೂ. ಇತ್ತು. ಚನ್ನಪಟ್ಟಣದಿಂದ ಒಂದು ಸಾವಿರ ಬಾಳೆ ಕಂಬಗಳನ್ನು ತಂದಿದ್ದು, ಶುಕ್ರವಾರ ಬೆಳಗ್ಗೆವರೆಗೂ ಮಾರಾಟ ಮಾಡಲಾಗುವುದು ಎಂದು ವ್ಯಾಪಾರಿ ಕೃಷ್ಣ ತಿಳಿಸಿದ್ದಾರೆ

ಮುನ್ನಾ ದಿನ ಕಡೇ ಹಂತದ ತಯಾರಿ 
ಬೆಂಗಳೂರು: ಒಂದು ವಾರದ ಹಿಂದಿನಿಂದಲೇ ವರಮಹಾಲಕ್ಷ್ಮಿ ಹಬ್ಬದ ತಯಾರಿ ಆರಂಭಿಸಿರುವ ರಾಜಧಾನಿಯ ಮಹಿಳೆಯರು ಹಬ್ಬದ ಮುನ್ನಾ ದಿನ ಅಂತಿಮ ಹಂತದ ಸಿದ್ಧತೆ ನಡೆಸಿದರು. ಕೆಲ ಮನೆಗಳಲ್ಲಿ ಗುರುವಾರ ಸಂಜೆಯೇ ಲಕ್ಷ್ಮಿ ಮುಖವಾಡ ಇರಿಸಿ ಸೀರೆ ಉಡಿಸಲಾಗಿದ್ದು,
ಶುಕ್ರವಾರ ಅಲಂಕಾರ ಮಾಡಲಿದ್ದಾರೆ.

ಲಕ್ಷ್ಮಿ ಪೂಜೆಗೂ ಮುನ್ನ ವಿನಾಯಕ ಹಾಗೂ ಯಮುನಾ ಪೂಜೆ ಮಾಡುವ ಸಂಪ್ರದಾಯ ನಡೆಸಿಕೊಂಡು ಬಂದಿರುವವರು, ಅರಿಶಿಣದಲ್ಲಿ ಗಣಪತಿ ಮೂರ್ತಿ ತಯಾರಿಸಿ ಪೂಜೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಲಕ್ಷ್ಮಿಗೆ ಉಡಿಸಲೆಂದೇ ಮಾರುಕಟ್ಟೆಯಿಂದ ತರಹೇವಾರಿ ಸೀರೆಗಳನ್ನು ಮಹಿಳೆಯರು ಖರೀದಿಸಿದ್ದಾರೆ. ಅದರಲ್ಲೂ ಲಕ್ಷ್ಮಿಗೆ ಪ್ರಿಯವಾದ ಹಸಿರು ಬಣ್ಣದ ಸೀರೆಯನ್ನೇ ಹೆಚ್ಚಾಗಿ ಖರೀದಿಸುವುದರಿಂದ ದೊಡ್ಡ ಅಂಚಿನ ಹಸಿರು ಬಣ್ಣದ ಸೀರೆಗೆ ಎಲ್ಲಿಲ್ಲದ ಬೇಡಿಕೆ ಇದೆ.

Advertisement

ನೈವೇದ್ಯಕ್ಕೆ ತಿನಿಸು: ಲಕ್ಷ್ಮಿಯನ್ನು ಕೂರಿಸುವ ಮನೆಗಳಲ್ಲಿ ಕಳೆದ ಒಂದು ವಾರದಿಂದಲೇ ನೈವೇದ್ಯಕ್ಕೆ ಅಗತ್ಯವಿರುವ ರವೆ ಉಂಡೆ, ಖರ್ಜಿಕಾಯಿ, ಮಂಡಕ್ಕಿ ಉಂಡೆ ಸೇರಿದಂತೆ ಸಿಹಿ ತಿಂಡಿಗಳನ್ನು ಸಿದ್ಧಪಡಿಸ ಲಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಸಂಜೆ ವೇಳೆ ಮುತ್ತೈದೆಯರಿಗೆ ಅರಿಶಿಣ, ಕುಂಕಮದ ಜತೆಗೆ ಬಳೆ, ರವಿಕೆ ಬಟ್ಟೆ ನೀಡುವ ಸಂಪ್ರದಾಯವೂ ಇದೆ.

ಲಾಲ್‌ಬಾಗ್‌ನಲ್ಲಿ ವಿಶೇಷ ಮಳಿಗೆ ಕಳೆದ ಎರಡು ದಿನಗಳಿಂದ ಲಾಲ್‌ಬಾಗ್‌ನ ಗಾಜಿನ ಮನೆ ಬಳಿ ಹಾಪ್‌ಕಾಮ್ಸ್‌ನ ವಿಶೇಷ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಈ ಮಳಿಗೆಗಳು ಶುಕ್ರವಾರ ಬೆಳಗ್ಗೆ 10 ಗಂಟೆವರೆಗೂ ತೆರೆದಿರುತ್ತವೆ. ಹಣ್ಣು, ತರಕಾರಿ ಜತೆಗೆ ಅಡುಗೆ ಎಣ್ಣೆ ಹಾಗೂ ಸಿರಿಧಾನ್ಯಗಳು ಇಲ್ಲಿ ದೊರೆಯುತ್ತವೆ. 

ಕೊನೆಗೂ ಸಿಗದ ಕೆಎಸ್‌ಐಸಿ ಸೀರೆ ವರಮಹಾಲಕ್ಷ್ಮಿ ಹಬ್ಬದ ವೇಳೆ 4,500 ರೂ.ಗೆ ಒಂದು ಮೈಸೂರು ಸಿಲ್ಕ್ ಸೀರೆ ಮಾರಾಟ ಮಾಡುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್‌ಐಸಿ)ದ ಉದ್ದೇಶಕ್ಕೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ನೀತಿ ಸಂಹಿತೆ ಅಡ್ಡಿಯಾಗಿದೆ. ಜತೆಗೆ ಮೈಸೂರಿನಲ್ಲಿರುವ ಸಿಲ್ಕ್ ಸೀರೆ ತಯಾರಿಕಾ ಕಾರ್ಖಾನೆಯ ನೌಕರರು ವಿರೋಧ ವ್ಯಕ್ತಪಡಿಸಿದ್ದಾರೆ. 7,800 ರೂ. ಬೆಲೆಯ ಸೀರೆಯನ್ನು 4,500 ರೂ.ಗೆ ಮಾರಾಟ ಮಾಡುವುದರಿಂದ ಕಾರ್ಖಾನೆಗೆ ಕೋಟ್ಯಂತರ ರೂ. ನಷ್ಟವಾಗಲಿದೆ. ಆ ಪರಿಹಾರವನ್ನು ಸರ್ಕಾರ ಭರಿಸುವುದಾದರೆ 7,800 ರೂ. ಬೆಲೆಯ ಸೀರೆಯನ್ನು 4,500 ರೂ. ರಿಯಾಯಿತಿ ಬೆಲೆಗೆ ಮಾರಾಟ ಮಾಡಬಹುದು ಎಂದು ತಿಳಿಸಿದ್ದಾರೆ. ಹೀಗಾಗಿ ವರಮಹಾಲಕ್ಷ್ಮಿ ಹಬ್ಬಕ್ಕೆ ಕೆಎಸ್‌ಐಸಿ ಸೀರೆ ಸಿಗಲೇ ಇಲ್ಲ

ಮಲ್ಲಿಗೆಗೆ 800 ರೂ. ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳ ಬೆಲೆ ಗುರುವಾರ ಮತ್ತಷ್ಟು ಏರಿಕೆಯಾಗಿತ್ತು. 500 ರೂ. ಇದ್ದ ಮಲ್ಲಿಗೆ ಹೂವಿನ ಬೆಲೆ 800 ರೂ.ಗೆ ಏರಿಕೆಯಾಗಿತ್ತು. ಬೆಳಗ್ಗೆ 6 ರಿಂದ 8 ಗಂಟೆವರೆಗೆ 2,500 ರೂ ಇದ್ದ ಕನಕಾಂಬರ ಹೂಗಳ ಬೆಲೆ ಮಧ್ಯಾಹ್ನದ ವೇಳೆಗೆ 2,000 ರೂ.ಗೆ ಇಳಿದಿತ್ತು. ಸುಗಂಧರಾಜ ಹಾರದ ಬೆಲೆ 200 ರಿಂಧ 250 ರೂ,.ಗೆ ಏರಿಕೆಯಾದರೆ, ಬಟನ್‌ ರೋಸ್‌, ಕಾಕಡ, ಮಲ್ಲೆ ಹಾಗೂ ಕಣಗಲೆ ಬೆಲೆ 300 ರೂ.ನಿಂದ 600 ರೂ.ಗೆ ಏರಿಕೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next