Advertisement

ಗಡಿನಾಡು ಚಿಂಚೋಳಿಯಲ್ಲಿ

02:40 PM Jan 21, 2018 | |

ಕಲಬುರಗಿ: ತಾಯಿ ಕನ್ನಡ ನಾಡು ನುಡಿ ಸೇವೆಗಿಂತ ಮತ್ತೂಂದಿಲ್ಲ. 10 ಜಾತ್ರೆ ಮಾಡಿದ್ದಕ್ಕಿಂತ ಒಂದು ಸಾಹಿತ್ಯ
ಸಮ್ಮೇಳನವೇ ಮೇಲು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಡಾ| ಚನ್ನವೀರ ಶಿವಾಚಾರ್ಯರು ನುಡಿದರು.
ಜಿಲ್ಲೆಯ ಗಡಿನಾಡು ಚಿಂಚೋಳಿ ಪಟ್ಟಣದಲ್ಲಿ ಹಿರಿಯ ಸಾಹಿತಿ ಡಾ| ವೀರಣ್ಣ ದಂಡೆ ಸರ್ವಾಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

Advertisement

ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿರುವ ಶ್ರೀಗಳು, ಕನ್ನಡ ಗ್ರಂಥ ಭಾಷೆಯಾಗಿರದೇ ಹೃದಯ ಭಾಷೆಯಾಗಲಿ. ಆಡಳಿತದ ಎಲ್ಲ ಹಂತದಲ್ಲಿ ಕನ್ನಡವಾಗಲಿ. ಕನ್ನಡದ ಅರಿವು  ಹಿಂದೆಂದಿಗಿಂತಲೂ ವ್ಯಾಪಕಗೊಳ್ಳಬೇಕಾಗಿದೆ ಎಂದು
ಹೇಳಿದರು. 2500 ಭಾಷೆಗಳಲ್ಲಿ ಸ್ವತಂತ್ರ ಲಿಪಿ ಹೊಂದಿರುವಲ್ಲಿ ಕನ್ನಡವೇ ಮೇಲು ಇದೆ. ವಿಶ್ವದ ಭಾಷೆ ಎನ್ನುವ ಇಂಗ್ಲಿಷ್‌ಗೂ ಸ್ವತಂತ್ರ ಲಿಪಿಯಿಲ್ಲ, ರೋಮನ್‌ ಭಾಷೆಯಿಂದ ಬಂದಿದೆ. ಅದೇ ರೀತಿ ಹಿಂದಿ ಭಾಷೆಯ ಲಿಪಿ
ದೇವನಾಗರದಿಂದ ಬಂದಿದೆ.

ಆದರೆ ಕನ್ನಡ ಭಾಷೆಗೆ ಸ್ವಂತ ಲಿಪಿಯಿದೆ. ವಿನೋಭಾ ಭಾವೆ ಅವರು ಕನ್ನಡ ಭಾಷೆ ಲಿಪಿಯು ವಿಶ್ವ ಭಾಷೆಗಳ ರಾಣಿ ಎಂದಿದ್ದಾರೆ. ಇದನ್ನು ನೋಡಿದರೆ ಕನ್ನಡ ಭಾಷೆ ಶ್ರೀಮಂತಿಕೆ ನಿರೂಪಿಸುತ್ತದೆ ಎಂದರು.

ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಅನಕ್ಷರಸ್ಥರು ಶ್ರೀಮಂತಗೊಳಿಸಿದ್ದಾರೆ. ರೈತನೊಬ್ಬ ಬಸವಾದಿ ಶರಣರ
ಇತಿಹಾಸವರನ್ನು ಸಾಹಿತ್ಯವಾಗಿ ವಿವರಿಸಿ ಹೇಳಬಲ್ಲ ಎನ್ನುವುದಾದರೆ ಕನ್ನಡದಲ್ಲಿ ಗಟ್ಟಿ ಸತ್ವವಿದೆ ಎನ್ನುವುದನ್ನು
ನಿರೂಪಿಸುತ್ತದೆ. ಒಮ್ಮೆ ಕವಿ ದ.ರಾ ಬೇಂದ್ರೆ ಸಾಯುವ ಕೊನೆ ಕ್ಷಣದ ಸಂದರ್ಭದಲ್ಲಿ ಅವರ ಮಿತ್ರರು, ಆಯ್ತಿತಪ್ಪ ನಿಂದು ಆಯಸ್ಸು ಮುಗಿಯಿತು ಎಂದು ಹೇಳಿದಾಗ, ಸಾವಿಗೆ ನಾನು ಹೆದರುವುದಿಲ್ಲ. “ನಾ ಇರೋತನಕ ಸಾವು ಬರಲ್ಲ-ಸಾವು ಬಂದಾಗ ನಾ ಇರಲ್ಲ’ ಎಂದಿದ್ದರಂತೆ. ಸಾಹಿತ್ಯದ ಈ ಒಂದು ಸಾಲಿನಲ್ಲಿಯೇ ಎಷ್ಟು ಅರ್ಥ ಅಡಗಿದೆ ಎನ್ನುವುದನ್ನು ನಾವು ಕಂಡುಕೊಳ್ಳಬಹುದಾಗಿದೆ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ| ಶರಣಪ್ರಕಾಶ ಪಾಟೀಲ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಕನ್ನಡದ ಮೊದಲ ಕೃತಿ ಹೊರ ಬಂದಿದ್ದು ಇದೇ ನಾಡು ಮಾನ್ಯಖೇಟ್‌ದಿಂದ. ಅದೇ ರೀತಿ ಶ್ರೀಮಂತವಾಗಿರುವ ಕನ್ನಡ ವಚನ ಸಾಹಿತ್ಯ ನೀಡಿರುವ ಬಸವಾದಿ ಶರಣರ ನಾಡು ಸಹ ಇದೇ ಕಲ್ಯಾಣ ನಾಡು. ಹೀಗೆ ಕನ್ನಡ ಭಾಷೆಗೆ ನಮ್ಮ ಭಾಗವೇ ದೊಡ್ಡ ಕೊಡುಗೆ ನೀಡಿದೆ ಎಂದರು.

Advertisement

ತಾಯಿ ವಾತ್ಸಲ್ಯಕ್ಕಿಂತ ಬೇರೆ ಇಲ್ಲ-ಮಾತೃಭಾಷೆಗಿಂತ ಮಿಗಿಲಾಗಿದ್ದಿಲ್ಲ. ಗಡಿನಾಡು ಚಿಂಚೋಳಿಯಲ್ಲಿ ತೆಲುಗು ಪ್ರಭಾವ ಜಾಸ್ತಿ ಇತ್ತು. ಈಗ ಕಡಿಮೆಯಾಗಿದ್ದು, ಕನ್ನಡ ವಾತಾವರಣ ನಿರ್ಮಾಣಗೊಂಡಿದೆ ಎಂದು ಹರ್ಷ
ವ್ಯಕ್ತಪಡಿಸಿದರು.

ಬೀದರ ಸಂಸದ ಭಗವಂತ ಖೂಬಾ ಮಾತನಾಡಿ, 2015ರಲ್ಲಿ ಕೇಂದ್ರ ಸರ್ಕಾರ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡಿದೆ. ಹೀಗಾಗಿ ಕನ್ನಡ ಭಾಷೆ ಅಭಿವೃದ್ಧಿಗೆ ಎಲ್ಲರೂ ಒಗ್ಗಟ್ಟಿನಿಂದ ಕೈ ಜೋಡಿಸಬೇಕು ಎಂದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾಧ್ಯಕ್ಷ ವೀರಭದ್ರ ಸಿಂಪಿ ಮಾತನಾಡಿ, ಕನ್ನಡ ಭಾಷೆ, ತತ್ವಪದ, ವಚನ ಲೋಕಕ್ಕೆ ಪ್ರಥಮಯಾದಿಯಾಗಿ ಈ ಭಾಗ ದೊಡ್ಡ ಕೊಡುಗೆ ನೀಡಿದೆ.

ಆದ್ದರಿಂದ ಗಟ್ಟಿ ನೆಲದ ಸಾಹಿತ್ಯ ಶ್ರೀಮಂತಿಕೆಗೊಳಿಸಲು ಯುವಕರೆಲ್ಲರೂ ಕಠಿಣ ನಿಲುವು ತಳೆಯಬೇಕಿದೆ. ಸಿನೇಮಾ
ಹಾಡುಗಳಿಗೆ ಕುಣಿಯುವ ಬದಲು ನಮ್ಮಪ್ಪ-ನಮ್ಮ ಮುತ್ಯಾ ಹಾಡಿರುವ ಹಾಡಿಗೆ ಕುಣಿಯುವುದನ್ನು ರೂಢಿಸಿಕೊಳ್ಳಿ
ಎಂದು ಕರೆ ನೀಡಿದರು. ಚಿಂಚೋಳಿ ಶಾಸಕ ಡಾ| ಉಮೇಶ ಜಾಧವ್‌ ಆಶಯ ನುಡಿಗಳನ್ನಾಡಿ, ಪಟ್ಟಣದಲ್ಲಿ ಪ್ರಥಮ ಬಾರಿಗೆ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಸಂತಸ ತಂದಿದೆ. ಕನ್ನಡ ನಾಡು-ನುಡಿ ಸೇವೆಗೆ ಬದ್ಧ ಎಂದು ಹೇಳಿದರು. ತಾಲೂಕು ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಪಾಲಾಮೂರ ಸ್ವಾಗತಿಸಿದರು. ಗೌರವ ಕೋಶಾಧ್ಯಕ್ಷ ಬಸವರಾಜ ಐನೋಳಿ ನಿರೂಪಿಸಿದರು.

ಪುಸ್ತಕ ಬಿಡುಗಡೆ: ಸಮ್ಮೇಳನದಲ್ಲಿ ಬಿಸಿಲು ನಾಡಿನ ಹಸಿರು, ಮೈಲಾರಲಿಂಗ ವಚನ ಸಂಕಲನ, ಉಮಾಚಲ ಕಾವ್ಯ ಕವನ ಸಂಕಲನ ಕೃತಿಗಳು ಬಿಡುಗಡೆಗೊಂಡವು. ಸಮ್ಮೇಳನಾಧ್ಯಕ್ಷ ಡಾ| ವೀರಣ್ಣ ದಂಡೆ, ನಿಕಟಪೂರ್ವ ಅಧ್ಯಕ್ಷ ಸಿದ್ಧರಾಮ ಪೊಲೀಸ್‌ ಪಾಟೀಲ, ಪುರಸಭೆ ಅಧ್ಯಕ್ಷೆ ಇಂದುಮತಿ ದೇಗಲಮಡಿ, ಉಪಾಧ್ಯಕ್ಷೆ ಫರಜಾನ್‌ ಬೇಗಂ, ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಉಪಾಧ್ಯಕ್ಷ ರುದ್ರಶೆಟ್ಟಿ ಪಡಶೆಟ್ಟಿ, ಬಿಇಒ ದತ್ತಪ್ಪ ತಳವಾರ, ಕಸಾಪ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಹಾಜರಿದ್ದರು.

ಕಲಬುರಗಿ ಜಿಲ್ಲೆಯ ಗಡಿ ತ್ರಿಭಾಷಾ ಸಂಗಮ
ಚಿಂಚೋಳಿ (ಸೂಗಯ್ಯ ಹಿರೇಮಠ ವೇದಿಕೆ):
ಕಲಬುರಗಿ ಗಡಿ ತೆಲುಗನ್ನಡ, ಮರಾಠಿ ಹಾಗೂ ಕನ್ನಡ ಸೇರಿ ತ್ರಿಭಾಷಾ ಸಂಗಮವಾಗಿದೆ ಎಂದು ಪತ್ರಕರ್ತ ಶೇಷಮೂರ್ತಿ ಅವಧಾನಿ ಹೇಳಿದರು.

ಗಡಿನಾಡ ಸೌಹಾರ್ದತೆಯ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಡಿಯಲ್ಲಿ ಇರುವ ಸರ್ವಧರ್ಮದ
ಗುಡಿಗಳು, ಪ್ರಾರ್ಥನಾ ಸ್ಥಳಗಳು ಸಕಲ ಜಾತಿ, ಜನ ಸಮುದಾಯದ ಆಚರಣೆಗಳು ತಲೆತಲಾಂತರಿಂದ ನಡೆದುಕೊಂಡು ಬರುತ್ತಿದ್ದು, ಇವೆಲ್ಲವೂ ಗಡಿಯಲ್ಲಿ ಸಾಮರಸ್ಯವನ್ನು ಕಟ್ಟಿಕೊಡುತ್ತಿವೆ ಎಂದರು.

ಗಡಿಭಾಗದಲ್ಲಿನ ತೆಲಗು, ಮರಾಠಿ ಭಾಷಿಕರ ಕನ್ನಡ ಪ್ರೇಮ ಇಂತಹ ಸಮ್ಮೇಳನಗಳಿಂದ ಇನ್ನಷ್ಟು ಗಟ್ಟಿಗೊಳ್ಳುತ್ತಾ
ಹೋಗುತ್ತದೆ ಎಂದು ಹೇಳಿದರು. ಇತ್ತೀಚೆಯ ವರ್ಷಗಳಲ್ಲಿ ಗಡಿಯಲ್ಲಿನ ಅಭಿವೃದ್ಧಿ ಹಿನ್ನಡೆ ಹಲವು ಸವåಸ್ಯೆಗಳನ್ನು
ಹುಟ್ಟು ಹಾಕುತ್ತಿವೆ. ಹೆಣ್ಣು ಶಿಶುಗಳ ಮಾರಾಟ, ಅಕ್ರಮ ಬಂದೂಕು ಸಾಗಾಣಿಕೆ, ಗುಜ್ಜರ ಕೀ ಶಾದಿಯಂತ ಕರಾಳ ದಂಧೆಗಳು ಗಡಿಯಲ್ಲಿ ನಡೆಯುತ್ತಿವೆ. ಇಂತಹ ಬೆಳವಣಿಗೆಗಳನು ಈಗಿನಿಂದಲೇ ಗಮನಿಸಿ ಅವುಗಳು ಬೆಳೆಯದಂತೆ ಮೂಗುದಾರ ಹಾಕುವ ಅನಿವಾರ್ಯತೆ ಇದೆ ಎಂದು ಪ್ರತಿಪಾದಿಸಿದರು.

ಕನ್ನಡ ಶಾಲೆ ಆರಂಭಿಸಿರಿ: ಪ್ರೊ| ಸವಿತಾ ನಾಶಿ ಮಾತನಾಡಿ, ಗಡಿಯಲ್ಲಿ ಹೆಚ್ಚು ಕನ್ನಡ ಶಾಲೆಗಳನ್ನು ಆರಂಭಿಸಿ, ಕನ್ನಡ ವಾತಾವರಣ ಮೂಡಿಸುವ ಅಗತ್ಯವಿದೆ. ಸೇಡಂ, ಚಿಂಚೋಳಿ ಗಡಿಯಲ್ಲಿ ತಲೆ ಎತ್ತುತ್ತಿರುವ ಸಿಮೆಂಟ್‌ ಕಂಪನಿಗಳಲ್ಲಿ ಗಡಿ ಜನರಿಗೆ, ಭೂಮಿ ಕಳೆದುಕೊಂಡವರಿಗೆ ಉದ್ಯೋಗ ದೊರಕುವಂತಾಗಬೇಕು. ಅಂತರ ಗಡಿ ವಿವಾಹಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಗಡಿ ರಾಜಕೀಯ: ಗಡಿ ರಾಜಕೀಯದ ಸ್ಥಿತಿಗತಿ ಬಗ್ಗೆ ಮಾತನಾಡಿದ ಡಾ| ಎಸ್‌. ಎಚ್‌. ಹೊಸಮನಿ ಕಲಂ 371ನೇ ಕಲಂ ಜಾರಿಗೆ ಮಾಜಿ ಸಚಿವ ವೈಜನಾಥ ಪಾಟೀಲ ಕೈಗೊಂಡ ಹೋರಾಟವನ್ನು ಶ್ಲಾಘಿಸಿದರು. ಗಡಿ ಸೌಹಾರ್ದತೆ ಕಾಪಾಡಲು ರಾಜಕೀಯ ಕೊಡುಗೆ ಅವಶ್ಯಕ ಎಂದರು.

ಪ್ರಮಾಣ ಪತ್ರ ಬ್ಯಾಡಾ: ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ| ಎಸ್‌. ಎನ್‌ ಹಿರೇಮಠ, ಶತ ಶತಮಾನಗಳಿಗೆ ಗಡಿ ಸಾಮರಸ್ಯ ಹಲವು ರೂಪಗಳಲ್ಲಿ ಗಟ್ಟಿಯಾಗಿದೆ. ಇದಕ್ಕೆ ಯಾರದ್ದೂ ಪ್ರಮಾಣ ಪತ್ರ ಬೇಕಿಲ್ಲ. 12ನೇ ಶತಮಾನದ ಶರಣರಿಂದ ಹಿಡಿದು ಇಂದಿನವರೆಗೆ ಸಾಮರಸ್ಯ ಗಟ್ಟಿಗೊಳ್ಳುತ್ತಾ ಸಾಗಿದೆ. ನಾವೆಲ್ಲರೂ ನಮ್ಮ
ಅಹಂ ಬಿಟ್ಟು ಹೊರಬಂದು ಗಡಿಯಲ್ಲಿ ಕನ್ನಡತನ, ಸಾಮರಸ್ಯ ಗಟ್ಟಿಗೊಳ್ಳುವಂತೆ ಮಾಡಬೇಕು ಎಂದು ಹೇಳಿದರು. ಜಿಪಂ ಸದಸ್ಯ ರಾಮಲಿಂಗಾರೆಡ್ಡಿ ದೇಶಮುಖ, ಶಿವಕುಮಾರ, ಅನಿಲಕುಮಾರ ಇದ್ದರು.

ಸಿ.ಎಸ್‌. ಮಾಲಿಪಾಟೀಲ ಸ್ವಾಗತಿಸಿದರು, ಅಮೃತಪ್ಪ ಕೆರೆಳ್ಳಿ ನಿರೂಪಿಸಿದರು, ದೇವಾನಂದ ಸಾವಳಗಿ ವಂದಿಸಿದರು. ಇದಕ್ಕೂ ಮುನ್ನ ನಡೆದ ಸಮ್ಮೇಳನಾಧ್ಯಕ್ಷರ ಬದುಕು ಬರಹ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ|ಕಲ್ಯಾಣರಾವ್‌ ಪಾಟೀಲ ಸಮ್ಮೇಳನ ಅಧ್ಯಕ್ಷರ ಬದುಕು ಬರಹ ಕುರಿತಂತೆ ಮಾತನಾಡಿದರು.

„ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next