ಹೊಸದಿಲ್ಲಿ: ‘ಚುರುಕಾದ ಕ್ರಿಕೆಟ್ ಮೆದುಳು’ ಹೊಂದಿರುವ ಸೌರವ್ ಗಂಗೂಲಿ ಐಸಿಸಿ ಅಗ್ರಪಟ್ಟಕ್ಕೆ ಅತ್ಯಂತ ಸೂಕ್ತವಾದ ಅಭ್ಯರ್ಥಿ ಆಗಬಲ್ಲರು ಎಂಬುದಾಗಿ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ಅಭಿಪ್ರಾಯಪಟ್ಟಿದ್ದಾರೆ.
‘ನಾನು ದಾದಾ ಅವರ ಅಪ್ಪಟ ಅಭಿಮಾನಿ. ಕೇವಲ ಅವರ ಕ್ರಿಕೆಟ್ ಸಾಧನೆಯನ್ನು ಗುರುತಿಸಿ ಅಭಿಮಾನ ವ್ಯಕ್ತಪಡಿಸುತ್ತಿಲ್ಲ, ಅವರ ಆಡಳಿತ ನೋಟವೂ ನನ್ನನ್ನು ಸೆಳೆದಿದೆ. ಇದಕ್ಕೆ ಬಿಸಿಸಿಐ ಅಧ್ಯಕ್ಷತೆಯೇ ಸಾಕ್ಷಿ.ಗಂಗೂಲಿ ಖಂಡಿತವಾಗಿಯೂ ಐಸಿಸಿ ಸ್ವರೂಪವನ್ನು ಬದಲಿಸಬಲ್ಲರು. ವಿಶ್ವ ಕ್ರಿಕೆಟ್ ಆಡಳಿತ ಮಂಡಳಿಗೆ ಅವರು ಅತ್ಯಂತ ಸೂಕ್ತ ಅಭ್ಯರ್ಥಿ ಎಂಬುದು ನನ್ನ ಅನಿಸಿಕೆ’ ಎಂಬುದಾಗಿ ಸಂಗಕ್ಕರ ಹೇಳಿದರು.
‘ಅವರ ಕ್ರೀಡಾ ಹಿತಾಸಕ್ತಿ ಹೃದಯದಲ್ಲಿ ಅಡಗಿದೆ.ಇಂಥವರು ಯಾವುದೇ ಕ್ರಿಕೆಟ್ ಮಂಡಳಿಯ ಮುಖ್ಯಸ್ಥರಾದರೂ ದಿಟ್ಟ ಹಾಗೂ ಉತ್ತಮ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತಾರೆ.ಯಾವ ಕ್ರಿಕೆಟ್ ರಾಷ್ಟ್ರಗಳ ಬಗ್ಗೆಯೂ ತಾರತಮ್ಯ ಮಾಡುವುದಿಲ್ಲ. ಕ್ರಿಕೆಟಿನ ಏಳಿಗೆಯೇ ಇವರ ಏಕೈಕ ಗುರಿ ಆಗಿರುತ್ತದೆ’ ಎಂದು ಲಂಕಾ ಕ್ರಿಕೆಟಿಗ ಪ್ರಶಂಸಿಸಿದರು.
‘ಬಿಸಿಸಿಐ ಅಧ್ಯಕ್ಷರಾಗುವ ಮೊದಲೇ ನಾನು ಗಂಗೂಲಿ ಅವರ ಕಾರ್ಯವಿಧಾನವನ್ನು ಗಮಿಸಿದ್ದೆ. ಎಂಸಿಸಿ ಕ್ರಿಕೆಟ್ ಕಮಿಟಿಯಲ್ಲಿರುವಾಗ ಅವರು ಕ್ರಿಕೆಟಿಗರ ಬಾಂಧವ್ಯವನ್ನು ಬೆಸೆದ ರೀತಿ ಅಮೋಘವಾಗಿತ್ತು’ ಎಂದರು.
ಭಾರತದವರೇ ಆದ ಶಶಾಂಕ್ ಮನೋಹರ್ ಈಗಾಗಗಲೇ ಐಸಿಸಿ ಅಧ್ಯಕ್ಷತೆಯ ಅವಧಿಯನ್ನು ಪೂರ್ತಿಗೊಳಿಸಿದ್ದು, ಈ ಸ್ಥಾನಕ್ಕೆ ನೂತನ ಆಯ್ಕೆ ನಡೆಯಬೇಕಿದೆ.