Advertisement
ತುಮಕೂರು ರಸ್ತೆಯಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಬೆಳಗ್ಗೆ 11 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಅಮಿತ್ ಶಾ ಅವರು ಮಧ್ಯಾಹ್ನ 12ಕ್ಕೆ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಕಾಂಗ್ರೆಸ್ ತೊರೆದಿರುವ ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಮತ್ತು ಬಿಆರ್‌ಎಸ್ ಕಾಂಗ್ರೆಸ್‌ನ ಕುಡಚಿ ಶಾಸಕ ರಾಜೀವ್ ಅವರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
Related Articles
Advertisement
3 ಲಕ್ಷ ಮಂದಿ ಭಾಗಿ: ಉದ್ಘಾಟನಾ ಸಮಾರಂಭದಲ್ಲಿ ಬೆಂಗಳೂರು ಜಿಲ್ಲೆಯ 28 ವಿಧಾನಸಭಾ ಕ್ಷೇತ್ರಗಳ ಪ್ರತಿ ಬೂತ್‌ನಿಂದ ಆರು ಬೈಕ್‌ಗಳಲ್ಲಿ ತಲಾ ಇಬ್ಬರಂತೆ ಮತ್ತು ಇತರೆ 16 ಜಿಲ್ಲೆಗಳ 86 ವಿಧಾನಸಭಾ ಕ್ಷೇತ್ರಗಳ ಪ್ರತಿ ಬೂತ್‌ನಿಂದ ಮೂರು ಬೈಕ್‌ಗಳಲ್ಲಿ ತಲಾ ಇಬ್ಬರಂತೆ ಒಟ್ಟು ಒಂದು ಲಕ್ಷ ಬೈಕ್‌ಗಳಲ್ಲಿ 2 ಲಕ್ಷ ಯುವ ಮೋರ್ಚಾ ಕಾರ್ಯಕರ್ತರು ಆಗಮಿಸಲಿದ್ದಾರೆ. ಇವರೊಂದಿಗೆ ಇತರೆ ವಾಹನಗಳಲ್ಲಿ ಸುಮಾರು ಒಂದು ಲಕ್ಷ ಮಂದಿ ಪಾಲ್ಗೊಳ್ಳುತ್ತಿದ್ದು, ಒಟ್ಟಾರೆ ಸುಮಾರು 3 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.
ವೇದಿಕೆಯಲ್ಲಿ 300 ಗಣ್ಯರುಪರಿವರ್ತನಾ ಯಾತ್ರೆಯ ಉದ್ಘಾಟನಾ ಸಮಾರಂಭಕ್ಕೆ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಆವರಣದಲ್ಲಿ ಸುಮಾರು 300 ಮಂದಿ ಕುಳಿತುಕೊಳ್ಳಲು ಅವಕಾಶವಾಗುವ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು ಒಂದು ಲಕ್ಷ ಮಂದಿ ನಿಲ್ಲಲು ಶಾಮಿಯಾನಾ ಹಾಕಲಾಗಿದೆ. ಬೆಂಗಳೂರು ಸೇರಿದಂತೆ 17 ಜಿಲ್ಲೆಗಳಿಂದ ಕಾರ್ಯಕರ್ತರು ಆಗಮಿಸಲಿದ್ದು, ಈಗಾಗಲೇ ಜಿಲ್ಲಾವಾರು ಎಷ್ಟು ಮಂದಿ ಆಗಮಿಸುತ್ತಿದ್ದಾರೆ ಎಂಬ ಲೆಕ್ಕವನ್ನು ಸಂಬಂಧಿಸಿದವರಿಗೆ ನೀಡಲಾಗಿದೆ. ಬಂದವರೆಲ್ಲರಿಗೂ ವಸ್ತುಪ್ರದರ್ಶನ ಕೇಂದ್ರದ ಆವರಣದಲ್ಲೇ ಮಧ್ಯಾಹ್ನದ ಊಟ ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. 4 ಗಂಟೆಗಳ ಕಾರ್ಯಕ್ರಮ
ಯಾತ್ರೆಯ ಉದ್ಘಾಟನಾ ಕಾರ್ಯಕ್ರಮ ಒಟ್ಟು ನಾಲ್ಕು ಗಂಟೆ ಕಾಲ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಆರಂಭದಲ್ಲಿ ರಾಜ್ಯದ ನಾಯಕರು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 12 ಗಂಟೆಗೆ ಅಮಿತ್ ಶಾ ಅವರು ಆಗಮಿಸಲಿದ್ದು, ನಂತರ ಯಾತ್ರೆಯ ಉದ್ಘಾಟನೆ ಮತ್ತು ರಥ ಲೋಕಾರ್ಪಣೆಯಾಗಲಿದೆ. ಬಳಿಕ ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರು, ಬಿಜೆಪಿ ರಾಜ್ಯಾಧ್ಯಕ್ಷರು ಮಾತನಾಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ. ಕೊಡಗಿನಲ್ಲಿ ಒಂದೇ ಸಭೆ
ನ. 10ರಂದು ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ನ. 8ರಂದು ಯಾತ್ರೆ ಮಡಿಕೇರಿಯಲ್ಲಿ ತಂಗಲು ಕೊಡಗು ಜಿಲ್ಲಾಡಳಿತ ಅವಕಾಶ ನೀಡದ ಕಾರಣ, ಜಿಲ್ಲೆಯ ಒಂದು ಕ್ಷೇತ್ರದಲ್ಲಿ ಮಾತ್ರ ಯಾತ್ರೆ ನಡೆಯಲಿದೆ. ಕೊಡಗು ಜಿಲ್ಲೆಯಲ್ಲಿ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳಿದ್ದು, ಈ ಹಿಂದೆ ನಿಗದಿಪಡಿಸಿದಂತೆ ನ. 8ರಂದು ಮಧ್ಯಾಹ್ನ 3 ಗಂಟೆಗೆ ಮಡಿಕೇರಿ/ಸೋಮವಾರಪೇಟೆ ಹಾಗೂ 6 ಗಂಟೆಗೆ ವಿರಾಜಪೇಟೆಯಲ್ಲಿ ಯಾತ್ರೆ ಮತ್ತು ಬಹಿರಂಗ ಸಭೆ ನಡೆದು ರಾತ್ರಿ ಮಡಿಕೇರಿಯಲ್ಲೇ ತಂಗಬೇಕಿತ್ತು. ಆದರೆ, ಜಿಲ್ಲಾಡಳಿತ ಕೆಲ ನಿರ್ಬಂಧ ಹೇರಿದ ಪರಿಣಾಮ ಸಂಜೆ ವಿರಾಜಪೇಟೆಯಲ್ಲಿ ನಡೆಯಬೇಕಿದ್ದ ಯಾತ್ರೆ ಮತ್ತು ಬಹಿರಂಗ ಸಭೆಯನ್ನು ರದ್ದುಗೊಳಿಸಲಾಗಿದೆ. ಮಡಿಕೇರಿಯಲ್ಲಿ ಸಭೆ ಮುಗಿಸಿದ ಬಳಿಕ ಯಾತ್ರೆ ನೇರವಾಗಿ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯಕ್ಕೆ ತೆರಳಿ ತಂಗಲಿದೆ. ಯಾತ್ರೆಯ ರಥ ಸಿದ್ಧ
ಪರಿವರ್ತನಾ ಯಾತ್ರೆಗೆ ಸಂಬಂಧಿಸಿದಂತೆ ಸುಮಾರು 90 ಲಕ್ಷ ರೂ. ವೆಚ್ಚದಲ್ಲಿ ರಥ ಸಿದ್ಧಪಡಿಸಲಾಗಿದ್ದು, ಯಾತ್ರೆಯ ಜತೆಗೆ ರಥಕ್ಕೂ ಅಮಿತ್ ಶಾ ಅವರು ಗುರುವಾರ ಹಸಿರು ನಿಶಾನೆ ತೋರಲಿದ್ದಾರೆ. ಟಾಟಾ ಸಂಸ್ಥೆಯ ವಾಹನವನ್ನು ಕೇಸರಿ ರಥದ ರೀತಿ ನಿರ್ಮಾಣ ಮಾಡಲಾಗಿದ್ದು, ಅದರಲ್ಲಿ ಪರಿವರ್ತನಾ ಯಾತ್ರೆ ಮತ್ತು ಕನ್ನಡಿಗರ ಭರವಸೆಯ ಸರ್ಕಾರಕ್ಕೆ ನಾವು ಬದ್ಧ ಎಂಬ ಘೋಷವಾಕ್ಯ ಬರೆಯಲಾಗಿದೆ. ಸುಮಾರು 12 ಜನ ನಿಂತುಕೊಳ್ಳಲು ಸಾಧ್ಯವಾಗುವ ವೇದಿಕೆ ನಿರ್ಮಿಸಲಾಗಿದ್ದು, ಸುಮಾರು 2000 ಮಂದಿಗೆ ಕೇಳಲು ಸಾಧ್ಯವಾಗುವ ಸಾಮರ್ಥ್ಯದ ಮೈಕ್ ಅಳವಡಿಸಲಾಗಿದೆ. ರಥ ಸಂಪೂರ್ಣ ಹವಾನಿಯಂತ್ರಿತವಾಗಿದ್ದು, ಒಂದು ತಿರುಗುವ ಕುರ್ಚಿ ಮತ್ತು ಮೇಜು ಅಳವಡಿಸಲಾಗಿದೆ. ವಿಶ್ರಾಂತಿ ಮತ್ತು ಮಾತುಕತೆಗಾಗಿ ಪ್ರತ್ಯೇಕ ಕೊಠಡಿ ಜತೆಗೆ ಶೌಚಾಲಯ ವ್ಯವಸ್ಥೆ ಇದೆ. ಒಟ್ಟು 70 ಮಂದಿ 19 ದಿನಗಳ ಅವಧಿಯಲ್ಲಿ ಈ ರಥ ಸಿದ್ಧಪಡಿಸಿದ್ದಾರೆ. ಇದಲ್ಲದೆ ಪರ್ಯಾಯವಾಗಿ ಮತ್ತೂಂದು ಸಾಮಾನ್ಯ ರಥವನ್ನೂ ನಿರ್ಮಿಸಲಾಗಿದೆ. ರಾಜ್ಯದಲ್ಲಿ ಬಿಜೆಪಿಯ ವಾಸ್ತವಿಕ ಸ್ಥಿತಿ ತಿಳಿದು ಶಕ್ತಿ ತುಂಬುವ ಸಲುವಾಗಿ ಗುರುವಾರದಿಂದ ಜ. 28ರವರೆಗೆ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪರಿವರ್ತನಾ ಯಾತ್ರೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಅಪೇಕ್ಷೆಯಂತೆ ರಾಜ್ಯವನ್ನು ಕಾಂಗ್ರೆಸ್ ಮುಕ್ತಗೊಳಿಸಲು ಸಂಕಲ್ಪ ತೊಟ್ಟು ಈ ಯಾತ್ರೆ ನಡೆಸುತ್ತಿದ್ದು, ಎಲ್ಲರೂ ಕೈಜೋಡಿಸಬೇಕು.
– ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ