ಸಿಂಧನೂರು: ಇಲ್ಲಿನ ನಿವಾಸಿಗಳು ತಮ್ಮ ಮನೆಗೆ ನೀರು ಬರಬೇಕೆಂದು ಬಯಿಸಿದರೆ ತಾವೇ ಹಣ ಕೊಟ್ಟು ವಾಟರ್‌ಮನ್ ನಿಯೋಜಿಸಿಕೊಳ್ಳಬೇಕು. ತಿಂಗಳಿಗಿಷ್ಟು ಹಣ ಕೊಟ್ಟರಷ್ಟೇ ಇಲ್ಲಿನ ಜನ ನೀರು ಕುಡಿಯಬಹುದು. ಹೌದು, ತಾಲೂಕಿನ ಜಾಲಿಹಾಳ ಜಿ.ಪಂ ವ್ಯಾಪ್ತಿಯಲ್ಲಿ ಬರುವ ಗಾಂಧಿನಗರ ಗ್ರಾ.ಪಂ ಸುಪರ್ದಿಗೆ ಬರುವ ತಾಯಮ್ಮ ಕ್ಯಾಂಪ್ ಸಮೀಪದ ರಾಜೀವ್ ನಗರ ಕ್ಯಾಂಪ್‌ನಲ್ಲಿ ಇಂತಹ ಸ್ಥಿತಿ ನಿರ್ಮಾಣವಾಗಿದೆ.
ಕ್ಯಾಂಪ್‌ನಲ್ಲಿ ನಿರ್ಮಾಣವಾಗಿರುವ ಕೆರೆಯಿಂದ ಗ್ರಾಮಕ್ಕೆ ನೀರು ಪೂರೈಸಲು ಅವಕಾಶವಿದ್ದರೂ ಈ ಕೆಲಸ ಮಾಡುವ ವ್ಯಕ್ತಿಗೆ ಮನೆಗೆ 50 ರೂ.ನಂತೆ ಏಳು ತಿಂಗಳಿಗೆ 350 ರೂ.ವಂತೆಗೆ ಸಂಗ್ರಹಿಸಿ ತಮ್ಮ ದಾಹ ತೀರಿಸಿಕೊಂಡಿದ್ದಾರೆ. ಈ ಪ್ರಯತ್ನ ಹೊರೆಯಾದ ಹಿನ್ನೆಲೆಯಲ್ಲಿ ಅರ್ಧಕ್ಕೆ ಕೈ ಬಿಟ್ಟಿದ್ದು, ಇದೀಗ ಕಾಲುವೆ ನೀರೇ ಗತಿಯಾಗಿದೆ.
ಏನಿದು ಸಮಸ್ಯೆ?: ಈ ಮೊದಲು ತುರುವಿಹಾಳ ಮೂಲಕ ಬಹುಗ್ರಾಮಗಳಿಗೆ ನೀರು ಪೂರೈಸಲು ಹಾಕಿದ ಪೈಪ್‌ಲೈನ್ ಗೆ ಸಂಪರ್ಕ ಕಲ್ಪಿಸಿ ರಾಜೀವ್ ನಗರ ಕ್ಯಾಂಪ್‌ಗೆ ನೀರು ಕೊಡಲಾಗಿತ್ತು. ಇಲ್ಲಿನ 65 ಮನೆಗಳ 360 ಮತದಾರಿರುವ ಕುಟುಂಬಗಳಿಗೆ ಈ ಕ್ರಮ ಆಸರೆಯಾಗಿತ್ತು. ಬಹುಗ್ರಾಮ ಯೋಜನೆ ವ್ಯಾಪ್ತಿಗೆ ಕ್ಯಾಂಪ್ ಬರುವುದಿಲ್ಲವೆಂದು ಪಂಚಾಯಿತಿಯಿಂದ ನೀರಿನ ಪೂರೈಕೆ ಸ್ಥಗಿತಗೊಳಿಸಲಾಯಿತು.
ಬಳಿಕ ಸಮಸ್ಯೆಗೆ ಸಿಲುಕಿದ ಸ್ಥಳೀಯರು ತಾವೇ ನಿರ್ಮಿಸಿಕೊಂಡ ಕೆರೆಯ ಮೂಲಕ ಗ್ರಾಮಕ್ಕೆ ನೀರು ಪಡೆಯುವ ಪ್ರಯತ್ನ ಆರಂಭಿಸಿದರು. ಆದರೆ, ಇದಕ್ಕೆ ಗ್ರಾಪಂ ಸಹಕರಿಸದ ಹಿನ್ನೆಲೆಯಲ್ಲಿ ಮನೆ-ಮನೆಯಿಂದ ಹಣ ಸಂಗ್ರಹಿಸಿ ವ್ಯಕ್ತಿಯೊಬ್ಬರಿಗೆ ಸಂಬಳ ನೀಡಿ, ನೀರಿನ ಅಭಾವ ನೀಗಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
ಎಲ್ಲವೂ ಕೈ ಕೊಟ್ಟವು: ತಾಯಮ್ಮ ಕ್ಯಾಂಪ್ ವ್ಯಾಪ್ತಿಯಲ್ಲಿನ ಗ್ರಾ.ಪಂ ಸದಸ್ಯರನ್ನು ಹೊಂದಿದ ಇಲ್ಲಿನ ಕ್ಯಾಂಪ್ ಪಂಚಾಯಿತಿ ವ್ಯಾಪ್ತಿಗೆ ಸೇರಿಲ್ಲವೆಂಬ ವಾದ ಗ್ರಾಪಂನದು. ಸ್ಥಳೀಯರ ಹೋರಾಟಕ್ಕೆ ಧ್ವನಿಯಾದ ಗ್ರಾ.ಪಂ ಸದಸ್ಯ ಟಿ.ಯಲ್ಲಪ್ಪ, ಸಹಭಾಗಿತ್ವದಲ್ಲಿ ಕೆಲವು ಸಮಸ್ಯೆ ಪರಿಹರಿಸಿಕೊಳ್ಳುವ ಮಾರ್ಗ ತುಳಿದಿದ್ದಾರೆ. ತಾಯಮ್ಮ ಕ್ಯಾಂಪ್‌ನಲ್ಲಿ ನಿರ್ಮಿಸಲಾದ 22 ಲಕ್ಷ ರೂ. ವೆಚ್ಚದ ಅತ್ಯಾಧುನಿಕ ನೀರು ಶುದ್ಧೀಕರಣ ಘಟಕದಲ್ಲಿ ಯಂತ್ರಗಳೇ ಇಲ್ಲ. ಎರಡು ವರ್ಷ ಗತಿಸಿದರೂ ಅದರಿಂದ ನಯಾಪೈಸೆ ಪ್ರಯೋಜನವಾಗಿಲ್ಲ. ನೀರಿಗಾಗಿ ಏನೆಲ್ಲ ಹಣ ಖರ್ಚಾದರೂ ಉಪಯೋಗವಿಲ್ಲದಂತಾದ ಪರಿಣಾಮ ಗ್ರಾಮಸ್ಥರೇ ಹಣ ನೀಡಿ, ವಾಟರ್‌ಮನ್ ನೇಮಿಸಿಕೊಂಡು ತಮ್ಮ ಸಮಸ್ಯೆಗೆ ತಾವೇ ಪರಿಹಾರ ಮಾರ್ಗ ಕಂಡುಕೊಂಡಿದ್ದಾರೆ.
ಜಿಲ್ಲಾ ಪಂಚಾಯತ್ ಎಂಜಿನಿಯರ್‌ಗೆ ತರಾಟೆ
ರಾಜೀವ್ ನಗರ ಕ್ಯಾಂಪ್‌ನಲ್ಲಿ 25 ಲಕ್ಷ ರೂ. ವೆಚ್ಚದ 522 ಮೀಟರ್ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲು ತೆರಳಿದ ವೇಳೆ ಭಾನುವಾರ ಶಾಸಕ ವೆಂಕಟರಾವ್ ನಾಡಗೌಡ ಅವರಿಗೆ ಈ ವಿಷಯದ ಬಗ್ಗೆ ಗಮನ ಸೆಳೆದಾಗ, ಪೈಪ್‌ಲೈನ್ ಇದ್ದರೂ ಊರಿನ ಜನಕ್ಕೆ ಯಾಕೆ ಪೂರೈಸುತ್ತಿಲ್ಲ. ನಾನು ಕೇಳಿದಾಗ ಇಂತಹ ಸಮಸ್ಯೆಗಳನ್ನು ಯಾಕೆ ಹೇಳುವುದಿಲ್ಲ ಎಂದು ಜಿ.ಪಂ ಎಇಇ ಪಾಂಡುರಂಗ ಅವರನ್ನು ತರಾಟೆಗೆ ತೆಗೆದುಕೊಂಡು ಪ್ರಸಂಗವೂ ನಡೆಯಿತು.
ಗ್ರಾಮಕ್ಕೆ ನೀರು ಬೇಕೆಂದು ಎಲ್ಲರಿಗೂ ಹೇಳಿ ಬೇಸತ್ತಿದ್ದೇವೆ. ಯಾರೂ ಧ್ವನಿಯಾಗಿಲ್ಲ. ತುರುವಿಹಾಳ ಮಾರ್ಗದ ಪೈಪ್‌ಲೈನ್‌ನಿಂದ ಬರುತ್ತಿದ್ದ ನೀರನ್ನು ನಿಲ್ಲಿಸಿದ್ದಾರೆ. ಈಗ ನಾವೇ ಹಣ ಕೊಟ್ಟು ವಾಟರ್‌ಮನ್ ನಿಯೋಜಿಸಿಕೊಂಡು ಸಮಸ್ಯೆ ಪರಿಹರಿಸಿಕೊಳ್ಳುತ್ತಿದ್ದೇವೆ.
ಗೌಡಪ್ಪ ಜಾಲಿಹಾಳ,
ದೊಡ್ಡಪ್ಪ ಜುಮಲಾಪುರ,
ಸ್ಥಳೀಯರು
*ಯಮನಪ್ಪಪವಾರ