ಬೆಂಗಳೂರು: ಅರ್ಧಕ್ಕೆ ಸ್ಥಗಿತಗೊಂಡಿರುವ ರಾಜಕಾಲುವೆ ತೆರವು ಕಾರ್ಯಾಚರಣೆಯನ್ನು ಮುಂದಿನ ವಾರದಿಂದ ಆರಂಭಿಸಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಬಿ.ಎಂ.ವಿಜಯಶಂಕರ್ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೆರವು ಕಾರ್ಯಾಚರಣೆಗೆ ಅಗತ್ಯ ಇರುವ ಪೂರ್ವ ಸಿದ್ಧತೆಗಳನ್ನು ಜಿಲ್ಲಾಡಳಿತ ಈಗಾಗಲೇ ಮಾಡಿಕೊಂಡಿದ್ದು, ಮಂದಿನ ವಾರದಿಂದ ರಾಜಕಾಲುವೆ ತೆರವು ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ಹೇಳಿದರು.
ತೆರವು ಕಾರ್ಯಾಚರಣೆಗಾಗಿ ಸ್ಥಳಗಳ ಗುರುತು ಕಾರ್ಯವನ್ನು ಜಿಲ್ಲಾಡಳಿತ ಪೂರ್ಣಗೊಳಿಸಲಾಗಿದೆ. ಆದರೆ, ಗುರುತು ಮಾಡಿರುವ ಜಾಗವನ್ನು ಸ್ಥಳೀಯರು ನಾಶಪಡಿಸುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಕಾರ್ಯಚರಣೆ ಪೂರ್ಣಗೊಳಿಸುವವರೆಗೂ ಭೂ ಮಾಪಕರು ಸ್ಥಳದಲ್ಲಿಯೇ ಮೊಕ್ಕಂ ಹೂಡಲಿದ್ದಾರೆ ಎಂದು ವಿವರಿಸಿದರು.
ಒತ್ತುವರಿ ಕೆರೆಗಳ ತೆರವು ಕಾರ್ಯ: ಒತ್ತುವರಿಯಾಗಿರುವ ಕೆರೆಗಳ ತೆರವು ಕಾರ್ಯಾಚರಣೆಯನ್ನು ಕೂಡ ಆರಂಭಿಸಲಾಗುವುದು. ಈ ಕಾರಣಕ್ಕಾಗಿಯೇ ಈಗಾಗಲೇ ಬಿಬಿಎಂಪಿ, ಬಿಡಿಎ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿದಂತೆ ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಯಾ ಇಲಾಖೆಯ ಅಧಿಕಾರಿಗಳ ಜತೆ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ವಿಜಯಶಂಕರ್ ಸ್ಪಷ್ಟಪಡಿಸಿದರು.
ತಾವು ಜಿಗಣಿಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡಿದ ಸಂದರ್ಭದಲ್ಲಿ ಹಲವು ಕೆರೆಗಳು ಕಲುಷಿತಗೊಂಡಿರುವುದು ಹಾಗೂ ಕೆರೆಗಳು ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ. ಕೆರೆಗಳ ಒತ್ತುವರಿಯಾಗಿರುವ ತಮ್ಮ ಬಳಿ ಮಾಹಿತಿ ಇದ್ದು ನಿಖರವಾಗಿ ಪತ್ತೆ ಮಾಡುವ ಸಂಬಂಧ ಸಮನ್ವಯ ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದರು.
ಕೆರೆ ಉಳಿವಿಕೆಗೆ ಬೆಂಗಳೂರು ಜಿಲ್ಲಾಡಳಿತ ತನ್ನದೇ ಆದ ಕ್ರಮಗಳನ್ನು ಕೈಗೊಳ್ಳಲಿದ್ದು, ಒತ್ತುವರಿದಾರರ ವಿರುದ್ಧ ಮುಲಾಜಿಲ್ಲದೆ ಕ್ರಮಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಈಗಾಗಲೇ ಎರಡು ಬಾರಿ ಸಭೆಯನ್ನು ಸಹ ನಡೆಸಲಾಗಿದೆ ಅಲ್ಲದೆ ಕೆರೆ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆಯೂ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದು ಹೇಳಿದರು.