Advertisement

ಮೆಗಾ ವಿಜ್ಞಾನ ವಸ್ತು ಪ್ರದರ್ಶನ 29ರಿಂದ

12:39 AM Jul 25, 2019 | Lakshmi GovindaRaj |

ಬೆಂಗಳೂರು: ಭಾರತದಲ್ಲಿ ಇದೇ ಮೊದಲ ಬಾರಿ, ಜು.29ರಿಂದ ಸೆ.28ರವರೆಗೆ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ “ವಿಜ್ಞಾನ ಸಮಾಗಮ್‌’ ಮೆಗಾ ವಿಜ್ಞಾನ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ವಸ್ತು ಸಂಗ್ರಹಾಲಯದ ನಿರ್ದೇಶಕ ಮದನ್‌ ಗೋಪಾಲ್‌ ತಿಳಿಸಿದರು.

Advertisement

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ವಸ್ತು ಸಂಗ್ರಹಾಲಯ ಹಾಗೂ ಕೇಂದ್ರೀಯ ಸಂಸ್ಕೃತಿ ಸಚಿವಾಲಯದ ಸಹಯೋಗದಲ್ಲಿ “ವಿಜ್ಞಾನ್‌ ಸಮಾಗಮ್‌’ ಕಾರ್ಯಕ್ರಮ ನಡೆಯಲಿದೆ.

ಭಾರತ ಸೇರಿದಂತೆ ಯುರೋಪಿನ 15 ರಾಷ್ಟ್ರಗಳು, ವಿವಿಧ ದೇಶಗಳ 12 ವಿಜ್ಞಾನ ಸಂಸ್ಥೆಗಳು, 250 ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಬ್ರಹ್ಮಾಂಡದ ಉಗಮ ಮತ್ತು ಅದರ ಬೆಳವಣಿಗೆಯ ಬಗ್ಗೆ ಹಲವು ವರ್ಷಗಳಿಂದ ಸಂಶೋಧನೆಗಳು ನಡೆಯುತ್ತಿವೆ. ಈ ಸಂಶೋಧನೆಗೆ ಭಾರತ ತನ್ನದೇ ಆದ ಕೊಡುಗೆ ನೀಡಿದೆ. ಇದರ ಬಗ್ಗೆ ಚರ್ಚೆ ಮತ್ತು ಅದಕ್ಕೆ ಬಳಸಲಾಗಿರುವ ತಂತ್ರಜ್ಞಾನ, ಸವಾಲು ಸೇರಿದಂತೆ ಹಲವು ವಿಷಯಗಳ ಬಗ್ಗೆ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಗುವುದು ಎಂದರು.

ಭಾರತದ ಸಾಧನೆ ಪರಿಚಯಿಸುವ ಉದ್ದೇಶ: ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುವುದು ಮತ್ತು ಭಾರತದ ಸಾಧನೆಯ ಪರಿಚಯ ಮಾಡಿಕೊಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಹೀಗಾಗಿ, ಪ್ರದರ್ಶನದ ಜತೆಗೆ ಶಾಲಾ ಮಕ್ಕಳು ಮತ್ತು ವಿದ್ಯಾರ್ಥಿಗಳ ಕುತೂಹಲ ಮತ್ತು ಗ್ರಹಣ ಹೆಚ್ಚಿಸಲು ರಸಪ್ರಶ್ನೆ, ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶ: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಆವರಣದಲ್ಲಿ ವಿಜ್ಞಾನ ಸಮಾಗಮ್‌ ನಡೆಯಲಿದ್ದು, ಸಂಗ್ರಹಾಲಯದ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಂಡ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರಲಿದೆ. ಸಾರ್ವಜನಿಕರು ಸಂಗ್ರಹಾಲಯದ ಪ್ರವೇಶ ಶುಲ್ಕ 75 ರೂ. ಪಾವತಿಸಿ, ಈ ಕಾರ್ಯಕ್ರಮವನ್ನೂ ವೀಕ್ಷಿಸಬಹುದಾಗಿದೆ.

Advertisement

ಶನಿವಾರ, ಭಾನುವಾರ ಮತ್ತು ರಜಾದಿನಗಳು ಸೇರಿದಂತೆ ಎಲ್ಲಾ ದಿನ ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ವಸ್ತು ಪ್ರದರ್ಶನ ಇರಲಿದೆ. ಹೆಚ್ಚಿನ ಮಾಹಿತಿಗೆ www.vigyansamagam.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Advertisement

Udayavani is now on Telegram. Click here to join our channel and stay updated with the latest news.

Next