Advertisement

ಅಧ್ಯಾತ್ಮಿಕ ಜ್ಞಾನದಿಂದ ಜೀವನ ಸಾರ್ಥಕ: ಶಿವಕುಮಾರ ಶ್ರೀ

01:12 PM Apr 23, 2019 | pallavi |

ಗದಗ: ಬಸವಾದಿ ಶರಣರು ದೇವರನ್ನು ತಲುಪುವ ಸತ್ಯ-ಶುದ್ಧ ಭಕ್ತಿಯ ಮಾರ್ಗವನ್ನು ತೋರಿಸಿದ್ದಾರೆ. ಮಾನವ ಜನ್ಮವು ಶ್ರೇಷ್ಠವಾಗಿದ್ದು, ಕೇವಲ ಭೌತಿಕ ಸಿರಿಸಂಪತ್ತುಗಳನ್ನು ಗಳಿಸಲು ಮೀಸಲಾಗಿರಿಸದೇ ಅಧ್ಯಾತ್ಮಿಕ ಜ್ಞಾನದ ಮೂಲಕ ಸಾರ್ಥಕಗೊಳಿಸಬೇಕು ಎಂದು ಬೀದರ ಚಿದಂಬರಾಶ್ರಮದ ಡಾ| ಶಿವಕುಮಾರ ಸ್ವಾಮೀಜಿ ಹೇಳಿದರು.

Advertisement

ನಗರದ ಜ| ತೋಂಟದಾರ್ಯ ಜಾತ್ರಾಮಹೋತ್ಸವದ ಲಘುರಥೋತ್ಸವದ ನಂತರ ಜರುಗಿದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಬದುಕಿನುದ್ದಕ್ಕೂ ಶರಣ ಸಂಸ್ಕೃತಿಯ ಪ್ರಸಾರಕ್ಕಾಗಿ ಶ್ರಮಿಸಿದ ಲಿಂಗೈಕ್ಯರಾದ ಡಾ| ಸಿದ್ಧಲಿಂಗ ಸ್ವಾಮಿಗಳ ಬದುಕು ಎಲ್ಲ ಸ್ವಾಮೀಜಿಗಳಿಗೆ ಅನುಕರಣೀಯವಾಗಿದೆ. ಅವರ ವೈಚಾರಿಕ ಸಿದ್ಧಾಂತದ ಅಡಿಯಲ್ಲಿ ಶ್ರೀಮಠದ ಕೀರ್ತಿಯು ಉತ್ತುಂಗಕ್ಕೆ ತಲುಪಿದೆ. ಈಗ ಅವರ ಸ್ಥಾನವನ್ನು ವಹಿಸಿಕೊಂಡಿರುವ ಡಾ| ತೋಂಟದ ಸಿದ್ಧರಾಮ ಶ್ರೀಗಳ ನೇತೃತ್ವದಲ್ಲಿ ಪರಂಪರೆಯು ಇನ್ನಷ್ಟು ಬೆಳೆಯಲಿದೆ ಎಂದರು.

ಸಮ್ಮುಖ ವಹಿಸಿದ್ದ ಬಸವಬೆಳವಿಯ ಶರಣಬಸವ ದೇವರು ಮಾತನಾಡಿ, ಶ್ರೀಮಠದ ಮೂಲ ಪುರುಷರಾದ ತೋಂಟದ ಸಿದ್ಧಲಿಂಗೇಶ್ವರರ ಪ್ರತಿರೂಪವಾಗಿದ್ದ ಲಿಂ.ಡಾ. ತೋಂಟದ ಸಿದ್ಧಲಿಂಗ ಶ್ರೀಗಳು ಕಾವಿ ಬಟ್ಟೆಯ ಮಹತ್ವವನ್ನು ಹೆಚ್ಚಿಸಿದ ಮಹಾನ್‌ ಸಂತರು. ನೊಂದವರ ಕಣ್ಣೀರು ಒರೆಸುವುದೇ ನಿಜವಾದ ದೇವರ ಪೂಜೆ ಎಂದು ನಂಬಿದ್ದ ಶ್ರೀಗಳು, ಕಷ್ಟದಲ್ಲಿದ್ದವರ ಪಾಲಿಗೆ ಅಕ್ಷರಶಃ ಕಾಮಧೇನು, ಕಲ್ಪವೃಕ್ಷವಾಗಿದ್ದರು. ಅವರ ಮಾರ್ಗದರ್ಶನದಲ್ಲಿ ವ್ಯಕ್ತಿತ್ವ ರೂಪಿಸಿಕೊಂಡ ಹಲವಾರು ಸ್ವಾಮೀಜಿಗಳಲ್ಲಿ ನಾವೂ ಒಬ್ಬರಾಗಿದ್ದು, ನಮ್ಮ ಸೌಭಾಗ್ಯ ಎಂದರು.

ಗೋಕಾಕ್‌ನ ಶೂನ್ಯ ಸಂಪಾದನಾ ಪೀಠದ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಲಿಂಗೈಕ್ಯ ಶ್ರೀಗಳ ಕನ್ನಡಪ್ರೇಮ, ಬಸವತತ್ವ ನಿಷ್ಠೆ, ಸಾಮಾಜಿಕ ಕಾಳಜಿ, ನೇರ-ನಿಷ್ಠುರತೆ ಎಲ್ಲರಿಗೂ ಮಾದರಿ ಎಂದರು.

Advertisement

ಇದೇ ವೇಳೆ ವರ್ಷದ ಶ್ರೇಷ್ಠ ಕನ್ನಡಿಗ ಪ್ರಶಸ್ತಿ ಪುರಸ್ಕೃತ ಮನೋವೈದ್ಯ ಡಾ| ಆನಂದ ಪಾಂಡುರಂಗಿ, ಬೆಲ್ಲದಬಾಗೇವಾಡಿಯ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ಅವರನ್ನು ಸಂಮಾನಿಸಲಾಯಿತು.

ಬಾನಂದೂರು ಕೆಂಪಯ್ಯನವರು ಹಾಗೂ ಸಂಗಡಿಗರಿಂದ ತತ್ವಪದಗಳ ಗಾಯನ ಜರುಗಿತು.

ನವಲಗುಂದ ಗವಿಮಠದ ಬಸವಲಿಂಗ ಸ್ವಾಮೀಜಿ, ಶಿರೋಳ-ಚಿಂಚಣಿಯ ಅಲ್ಲಮಪ್ರಭು ಸ್ವಾಮೀಜಿ, ಆಲಮೇಲದ ಜಗದೇವ ಮಲ್ಲಿಬೊಮ್ಮ ಸ್ವಾಮೀಜಿ ಇದ್ದರು.

ಜಾತ್ರಾ ಸಮಿತಿ ಅಧ್ಯಕ್ಷ ಡಾ| ಎಂ.ಬಿ. ನಿಂಬಣ್ಣವರ ಸ್ವಾಗತಿಸಿದರು. ವಿವೇಕಾನಂದಗೌಡ ಪಾಟೀಲ ನಿರೂಪಿಸಿದರು. ಡಾ| ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next