Advertisement

ಬೀದಿ ಬೀದಿಯಲ್ಲಿ ಬ್ಯಾಗ್ ಮಾರುತ್ತಿದ್ದ ವ್ಯಕ್ತಿ ಇಂದು 250 ಕೋಟಿ ರೂಪಾಯಿ ಕಂಪನಿ ಒಡೆಯ!

05:58 PM Oct 03, 2020 | Nagendra Trasi |

1992ರಲ್ಲಿ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಕುಖ್ಯಾತ ಷೇರು ಬ್ರೋಕರ್ ಹರ್ಷದ್ ಮೆಹ್ತಾ ಪ್ರಕರಣದ ಬಗ್ಗೆ ನೆನಪಿದೆಯಾ? ಹರ್ಷದ್ ಮೆಹ್ತಾನ ಬಹುಕೋಟಿ ರೂಪಾಯಿಯ ಷೇರು ಹಗರಣದಿಂದಾಗಿ ನೂರಾರು ಮಂದಿ ಹೂಡಿಕೆದಾರರು ಬೀದಿಪಾಲಾಗಿದ್ದರು. ಹೀಗೆ ಬದುಕು ಮೂರಾಬಟ್ಟೆಯಾದವರ ಸಾಲಿನಲ್ಲಿ ಜಾರ್ಖಂಡ್ ಮೂಲದ ಉದ್ಯಮಿ ಮುಲ್ ಚಾಂದ್ ಜೈನ್ ಕೂಡಾ ಒಬ್ಬರು. ಷೇರು ಹಗರಣದಿಂದ ಜೈನ್ ಎಲ್ಲಾ ಹಣವನ್ನು ಕಳೆದುಕೊಂಡು ಮುಂದೇನು ಮಾಡುವುದು ಎಂಬ ಚಿಂತೆಯಲ್ಲಿ ತೊಡಗಿದ್ದರು…

Advertisement

ಬೀದಿಯಲ್ಲಿ ಬ್ಯಾಗ್ ವ್ಯಾಪಾರ:

ಹೇಗಾದರೂ ಮಾಡಿ ಬದುಕಲೇ ಬೇಕು ಎಂಬ ಹಠಕ್ಕೆ ಬಿದ್ದ ಮುಲ್ ಚಾಂದ್ ಜೈನ್ ಮಗನನ್ನು ಬಲವಂತವಾಗಿ ಮುಂಬೈನ ಬೀದಿಯಲ್ಲಿ ಬ್ಯಾಗ್ ವ್ಯಾಪಾರ ಮಾಡಲು ಕಳುಹಿಸಿದ್ದರು. ಆರಂಭದಲ್ಲಿ ಮುಲ್ ಚಾಂದ್ ಕೂಡಾ ಬೀದಿಯಲ್ಲಿ ನಿಂತು ಬ್ಯಾಗ್ ವ್ಯಾಪಾರ ಮಾಡಿದ್ದರು. ಹೀಗೆ ದಿನ ಕಳೆಯುತ್ತಿದ್ದಂತೆಯೇ ಮುಲ್ ಚಾಂದ್ ಪುತ್ರ ತುಷಾರ್ ಜೈನ್ ಕೂಡಾ ದೃತಿಗೆಡಲಿಲ್ಲ. ಶಾಲಾ ಬ್ಯಾಗ್ ಸೇರಿದಂತೆ ವಿವಿಧ ರೀತಿಯ ಬ್ಯಾಗ್ ಮಾರುತ್ತಿದ್ದ ತುಷಾರ್ ಗೆ ಇದೇ ವ್ಯವಹಾರ ದೊಡ್ಡ ಮಟ್ಟದಲ್ಲಿ ಮಾಡಬೇಕು ಎಂಬ ಕನಸು ಕಾಣತೊಡಗಿದ್ದ.

ಕೊನೆಗೆ ತಂದೆ, ಮಗ ಸೇರಿಕೊಂಡು ರಸ್ತೆ ಬದಿಯ ವ್ಯಾಪಾರಕ್ಕೆ ದೊಡ್ಡ ಸ್ವರೂಪ ಕೊಡಲು ಮುಂದಾದ ಪರಿಣಾಮವೇ ಸ್ವತಃ ಬ್ಯಾಗ್ ತಯಾರಿಕೆ ಆರಂಭಿಸಿದ್ದರು. ನಂತರ ತಾವೇ ಇತರರಿಗೆ ಬ್ಯಾಗ್ ಸಪ್ಲೇ ಮಾಡಲು ಆರಂಭಿಸಿದ್ದರು ಮುಂಬೈನಿಂದ ಬ್ಯಾಗ್ ಗಳನ್ನು ಸೂರತ್ ಗೆ ತೆಗೆದುಕೊಂಡು ಹೋಗಿ ಚಿಲ್ಲರೆ ವ್ಯಾಪಾರಸ್ಥರಿಗೆ ತುಷಾರ್ ಜೈನ್ ಮಾರಾಟ ಮಾಡುತ್ತಿದ್ದರು. ನಂತರ ಸೂರತ್ ನಲ್ಲಿ ವ್ಯಾಪಾರ ನಡೆಸಿ 2002ರಲ್ಲಿ ಮುಂಬೈಗೆ ವಾಪಸ್ ಆಗಿದ್ದರು. ಆಗ ಇಡೀ ಭಾರತದಲ್ಲಿ ಮಾರುಕಟ್ಟೆ ವಿಸ್ತರಿಸುವ ಬಗ್ಗೆ ತುಷಾರ್ ಸಿದ್ಧತೆ ನಡೆಸಿದ್ದರು.

Advertisement

ಸುಮಾರು 16 ವರ್ಷಗಳ ಪರಿಶ್ರಮದ ನಂತರ 2012ರಲ್ಲಿ ತುಷಾರ್ ಜೈನ್ “ಹೈ ಸ್ಪಿರಿಟ್ ಕಮರ್ಷಿಯಲ್ ವೆಂಚರ್ಸ್” ಅನ್ನು ಹುಟ್ಟು ಹಾಕಿದ್ದರು!

ಈ ಕಂಪನಿ ಆರಂಭಿಸಿದ ಆರು ವರ್ಷಗಳಲ್ಲಿಯೇ 250 ಕೋಟಿ ರೂಪಾಯಿ ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದು ನಿಂತಿತ್ತು. ವೈವಿಧ್ಯತೆಯ ಬ್ಯಾಗ್ ಮಾರಾಟ ಹಾಗೂ ಬ್ಯಾಗೇಜ್ ವಹಿವಾಟಿನ ಮೂಲಕ ದೇಶದ ನಾಲ್ಕನೇ ಅತೀ ದೊಡ್ಡ ಬ್ಯಾಗ್ ತಯಾರಿಕೆ ಮತ್ತು ಮಾರಾಟ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಿನಂಪ್ರತಿ 30ರಿಂದ 35 ಸಾವಿರ ಬ್ಯಾಗ್ ಗಳನ್ನು ತಯಾರಿಸಲಾಗುತ್ತದೆಯಂತೆ,

ಮುಂಬೈನಲ್ಲಿ ಕೇಂದ್ರ ಕಚೇರಿ ಹೊಂದಿರುವ ಕಂಪನಿಯ ವಿವಿಧ ಪ್ರಾಂತೀಯ ಶಾಖೆಗಳು ಹತ್ತು ಸ್ಥಳಗಳಲ್ಲಿ ಇದೆ.  ಕಂಪನಿ ಕಳೆದ ವರ್ಷ ಬರೋಬ್ಬರಿ ಏಳು ಲಕ್ಷ ಬ್ಯಾಗ್ ಮಾರಾಟ ಮಾಡಿರುವುದಾಗಿ 41ವರ್ಷದ ತುಷಾರ್ ಜೈನ್ ತಿಳಿಸಿದ್ದಾರೆ. ಕಡಿಮೆ ಹೂಡಿಕೆ ಮೂಲಕ ಕಂಪನಿಯನ್ನು ಆರಂಭಿಸಲಾಗಿತ್ತು. ನಮ್ಮ ಆರ್ಥಿಕ ಸ್ಥಿತಿ ಕೂಡಾ ನಿಧಾನಕ್ಕೆ ಚೇತರಿಸಿಕೊಳ್ಳತೊಡಗಿತ್ತು. ಬ್ಯಾಂಕ್ ನ ನೆರವಿನಿಂದ ನಮ್ಮ ಉದ್ಯಮ ಗುರಿ ತಲುಪಿತ್ತು. ಭವಿಷ್ಯದಲ್ಲಿ ನಮ್ಮ ಕಂಪನಿ ಒಂದು ಸಾವಿರ ಕೋಟಿ ವಹಿವಾಟು ನಡೆಸಬೇಕೆಂಬ ಗುರಿ ಹೊಂದಿದೆಯಂತೆ.

ಹೈ ಸ್ಪಿರಿಟ್ ಕಮರ್ಷಿಯಲ್ ವೆಂಚರ್ಸ್ ಬ್ಯಾಗ್ ಬೆಲೆ 399 ರೂಪಾಯಿಯಿಂದ 799 ರೂಪಾಯಿವರೆಗೆ ಇದೆ. ಪ್ರಸ್ತುತ ಭಾರತದ ಬ್ಯಾಗ್ ಮತ್ತು ಲಗ್ಗೇಜ್ ಬ್ಯಾಗ್ ಮಾರುಕಟ್ಟೆ ವಹಿವಾಟು ಮೊತ್ತ 20 ಸಾವಿರ ಕೋಟಿ. ಆದರೆ ಚೀನಾದ ದೇಶೀಯ ಮಾರುಕಟ್ಟೆ ಒಂದು ಲಕ್ಷ ಕೋಟಿಗೂ ಅಧಿಕ ಮೊತ್ತದ ವಹಿವಾಟು ನಡೆಸುತ್ತದೆ. ರಫ್ತು ಮಾರುಕಟ್ಟೆಯಲ್ಲಿ 2 ಲಕ್ಷ ಕೋಟಿ ರೂಪಾಯಿಗೂ ಅಧಿಕ ವಹಿವಾಟು. ಈ ನಿಟ್ಟಿನಲ್ಲಿ ಭಾರತ ಚೀನಾದ ಮಾರುಕಟ್ಟೆಯ ಹಂತವನ್ನು ತಲುಪಲು ದೀರ್ಘಕಾಲಾವಧಿ ಅಗತ್ಯವಿದೆ ಎಂಬುದು ತುಷಾರ್ ಮೆಹ್ತಾ ಸಂದರ್ಶನವೊಂದರಲ್ಲಿ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next