ಮೈಸೂರು: ಮೈಸೂರು ರೇಸ್‌ಕ್ಲಬ್‌ನಿಂದ ಪ್ರಸಕ್ತ ಋತುವಿನ ರೇಸ್ ಪಂದ್ಯಾವಳಿಗಳು ಆ.25ರಿಂದ ಸೆ.22ರವರೆಗೆ 16 ದಿನಗಳ ಕಾಲ ನಡೆಯಲಿದೆ ಎಂದು ಮೈಸೂರು ರೇಸ್ ಕ್ಲಬ್ ಅಧ್ಯಕ್ಷ ಹನುಮಾನ್ ಪ್ರಸಾದ್ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಋತುವಿನಲ್ಲಿ ನಡೆಯುವ ದಿ ಮೈಸೂರು-1000 ಗಿನ್ನಿಸ್ ಕುದುರೆ ರೇಸ್ ಪಂದ್ಯಾವಳಿಯನ್ನು ಕರ್ನಾಟಕ ರೇಸ್ ಹಾರ್ಸ್ ಓನರ್ಸ್ ಅಸೋಸಿಯೇಷನ್ ಪ್ರಾಯೋಜಿಸಲಿದೆ. ಪಂದ್ಯಾವಳಿಯಲ್ಲಿ ಒಟ್ಟು 120 ಪಂದ್ಯ ನಡೆಯಲಿದ್ದು, 425 ಕುದುರೆಗಳು ಬಾಗವಹಿಸಲಿವೆ.
ಪಂದ್ಯಾವಳಿಯಲ್ಲಿ ಸ್ಥಳೀಯ ಕುದುರೆಗಳೊಂದಿಗೆ ಹೊರಗಿನಿಂದ 400ಕ್ಕೂ ಹೆಚ್ಚು ಕುದುರೆಗಳು ಆಗಮಿಸಲಿದ್ದು, ಪಂದ್ಯಾವಳಿಯಲ್ಲಿ ಗೆಲ್ಲುವ ಕುದುರೆಗಳಿಗೆ ಒಟ್ಟಾರೆ 5.96 ಕೋಟಿ ರೂ. ಮೊತ್ತದ ಬಹುಮಾನ ನೀಡಲಾಗುವುದು. ನಿರ್ದಿಷ್ಟ ಸ್ಥಳದಲ್ಲಿ ರೇಸ್ ನೋಡಲು ಬಯಸುವ ಸಾರ್ವಜನಿಕರಿಗೆ ಇದೇ ಮೊದಲ ಬಾರಿಗೆ ಉಚಿತ ವೀಕ್ಷಣೆಗೆ ಅವಕಾಶ ಕಲ್ಪಿಸುತ್ತಿದ್ದು, ಪ್ರೇಕ್ಷಕರ ಅನುಕೂಲಕ್ಕಾಗಿ ರೇಸ್ ಕ್ಲಬ್ ಒಳಗೆ ದೊಡ್ಡಪರದೆ, ಟಿವಿಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.
ಪಂದ್ಯಾವಳಿಯ ವಿವರ: ಪ್ರಸಕ್ತ ಋತುವಿನ ಪಂದ್ಯಾವಳಿಯಲ್ಲಿ 3 ವರ್ಷದ ಕುದುರೆಗಳಿಗೆ ಆ.25 ರಂದು ದಿ.ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸ್ಮಾರಕ ಮಿಲಿಯನ್ ಟ್ರೋಫಿ, 4 ವರ್ಷ ಮೇಲ್ಪಟ್ಟ ಕುದುರೆಗಳಿಗೆ ಸೆ.1ರಂದು ಕೃಷ್ಣರಾಜ ಒಡೆಯರ್ ಸ್ಮಾರಕ ಟ್ರೋಫಿ ಪಂದ್ಯ, ಬಳಿಕ ಸೆ.14ರಂದು ಮಹಾರಾಜ್ ಕಪ್ ಪಂದ್ಯ, ಸೆ.15ರಂದು ಕರ್ನಾಟಕ ರೇಸ್ ಹಾರ್ಸ್ ಓನರ್ಸ್ ಅಸೋಸಿಯೇಷನ್ ಪಂದ್ಯ, ಸೆ.28ರಂದು ಜಯಚಾಮರಾಜ ಒಡೆಯರ್ ಗಾಲ್ಫ್ ಕ್ಲಬ್ ಮೈಸೂರು 2000 ಗಿನ್ನಿಸ್ ಪಂದ್ಯ,
-ಅ.6ರಂದು ಮೈಸೂರು ದಸರಾ ಸ್ಪ್ರಿಂಟ್ ಚಾಂಪಿಯನ್ಸ್ ಪಂದ್ಯ, ಅ.16ರಂದು ಗವರ್ನರ್ಸ್ ಕಪ್ ಪಂದ್ಯಗಳು ನಡೆಯಲಿದೆ. ಜತೆಗೆ ಅ.22ರಂದು ದಿ ಮೈಸೂರು ಡರ್ಬಿ ಪಂದ್ಯಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಪದಾಧಿಕಾರಿಗಳಾದ ಕೆ.ಜಿ.ಅನಂತರಾಜೇ ಅರಸ್, ಜಿ.ಕೆ.ಬಾಲಕೃಷ್ಣನ್, ಎನ್.ನಿತ್ಯಾನಂದರಾವ್, ಪಿ.ಉಮಾಶಂಕರ್, ರಾಮನ್ ಇನ್ನಿತರರು ಹಾಜರಿದ್ದರು.
3 ತಿಂಗಳಿಗೆ ನವೀಕರಣ
ರಾಜ್ಯ ಸರ್ಕಾರ ಮೈಸೂರು ರೇಸ್‌ಕ್ಲಬ್‌ನಲ್ಲಿ ರೇಸ್ ನಡೆಸಲು ಅನುಮತಿ ನೀಡಿದ್ದು, 3 ತಿಂಗಳಿಗೊಮ್ಮೆ ಅನುಮತಿ ನವೀಕರಣ ಮಾಡಿಕೊಳ್ಳುವಂತೆ ಷರತ್ತು ವಿಧಿಸಿದೆ. ಸರ್ಕಾರದ ಈ ಆದೇಶವನ್ನು ರೇಸ್ ಕ್ಲಬ್ ಪಾಲಿಸಿಕೊಂಡು ಬರುತ್ತಿದ್ದು, ಕ್ಲಬ್‌ನಲ್ಲಿ ರೇಸ್ ಜತೆಗೆ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಕ್ಲಬ್‌ನಿಂದ ವಿವಿಧ ಸಂಘ-ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಬಂಡೀಪುರದಲ್ಲಿ ಸೌರಶಕ್ತಿ ವ್ಯವಸ್ಥೆಯ ನೀರಿನ ಟ್ಯಾಂಕ್ ಅಳವಡಿಸಲು ಕ್ಲಬ್‌ನಿಂದ 8 ಲಕ್ಷ ರೂ. ನೀಡಲಾಗುವುದು ಎಂದು ಕ್ಲಬ್ ಅಧ್ಯಕ್ಷ ಹನುವಾನ್ ಪ್ರಸಾದ್ ತಿಳಿಸಿದರು.