ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಡೆಸುತ್ತಿರುವ ದಾಳಿಯನ್ನು ಕಟುವಾಗಿ ಟೀಕಿಸಿರುವ ಕೇಂದ್ರ ಸಚಿವ ಮುಖ್‌ತಾರ್ ಅಬ್ಟಾಸ್ ನಕ್ವಿ ಅವರು ರಾಹುಲ್ ಗಾಂಧಿಯನ್ನು ಅವರ ತರ್ಕ ರಹಿತ, ಅರ್ಥಹೀನ ಹೇಳಿಕೆಗಳಿಗಾಗಿ “ಗಪ್ಪು” ಎಂದು ಕರೆದಿದ್ದಾರೆ. ಗಪ್ಪು ಎಂದರೆ ಗಾಸಿಪ್ ಮಾಡುವವ ಎಂದು ನಕ್‌ವಿ ಹೇಳಿದ್ದಾರೆ.
“ರಾಹುಲ್ ಗಾಂಧಿ ಅವರದ್ದು ಪಪ್ಪು ವಿನಿಂದ ಗಪ್ಪು ವರೆಗಿನ ಪಯಣ; ಈತ ಕೇವಲ ಸುಳ್ಳಿನ ಆಧಾರದಲ್ಲಿ ತರ್ಕ, ವಿವೇಚನೆ ಯಾವುದೂ ಇಲ್ಲದ ಹೇಳಿಕೆಗಳನ್ನು ನೀಡುವ ಮನುಷ್ಯ; ಹಗರಣಗಳ ಮಾಸ್ಟರ್ ಮೈಂಡ್‌ಗಳಿಗೆ ಎಲ್ಲೆಡೆಯೂ ಕೇವಲ ಹಗರಣಗಳೇ ಕಂಡು ಬರುತ್ತವೆ; ಅವರಿಗೆ ದೇಶದ ಅಭಿವೃದ್ಧಿ , ಪ್ರಗತಿ, ಸುಶಾಸನ ಯಾವುದೂ ಕಾಣುವುದಿಲ್ಲ ‘ ಎಂದು ನಕ್ವಿ ಲೇವಡಿ ಮಾಡಿದ್ದಾರೆ.
ರಫೇಲ್ ಡೀಲ್ ಕುರಿತಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟ ನಡೆಯುತ್ತಿರುವ ನಡುವೆಯೇ ಕೇಂದ್ರ ಅಲ್ಪ ಸಂಖ್ಯಾಕ ವ್ಯವಹಾರಗಳ ಸಚಿವರಾಗಿರುವ ನಕ್ವಿ ಈ ಹೇಳಿಕೆ ನೀಡಿದ್ದಾರೆ.
ಇದಕ್ಕೆ ಮೊದಲು ಕೇಂದ್ರ ಹಣಕಾಸು ಸಚಿವ ಅರುಣ್ ಜೇತ್ಲಿ ಅವರು ರಫೇಲ್ ಡೀಲ್ ಕುರಿತಾಗಿ ಕಾಂಗ್ರೆಸ್ ನಡೆಸುತ್ತಿರುವ ಸುಳ್ಳು ಪ್ರಚಾರಾಭಿಯಾನವನ್ನು ಅನಾವರಣಗೊಳಿಸುವ ಸಲುವಾಗಿ ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಸುದೀರ್ಘ 15 ಪ್ರಶ್ನೆಗಳನ್ನು ಎಸೆದಿದ್ದರು.
ರಫೇಲ್ ಡೀಲ್ ನಲ್ಲಿ 16,000 ಕೋಟಿ ರೂ.ಗಳ, ಬೊಫೋರ್ಸ್ ಮೀರಿದ, ಹಗರಣ ಅಡಗಿದೆ ಎಂದು ಕಾಂಗ್ರೆಸ್ ಮೋದಿ ಸರಕಾರದ ವಿರುದ್ಧ ಆರೋಪಿಸುತ್ತಲೇ ಬಂದಿದ್ದು ದಿನದಿಂದ ದಿನಕ್ಕೆ ಮೋದಿ ಸರಕಾರದ ವಿರುದ್ಧದ ತನ್ನ ದಾಳಿಯನ್ನು ತೀವ್ರಗೊಳಿಸುತ್ತಿದೆ.
ಜೇತ್ಲಿ ಅವರ ಆರೋಪಗಳಿಗೆ ಉತ್ತರವಾಗಿ ರಾಹುಲ್ ಗಾಂಧಿ ಅವರು “ಕೇಂದ್ರ ಸರಕಾರಕ್ಕೆ ರಫೇಲ್ ಡೀಲ್ ತನಿಖೆಗಾಗಿ ಜಂಟಿ ಸಂಸದೀಯ ಸಮಿತಿಯನ್ನು ರೂಪಿಸುವುದಕ್ಕೆ ನಾವು 24 ತಾಸುಗಳ ಗಡುವು ನೀಡುತ್ತಿದ್ದೇವೆ’ ಎಂದು ರಾಹುಲ್ ಹೇಳಿದ್ದರು.