ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲು ಸಿದ್ಧತೆ ನಡೆಸಿರುವ ಬಿಬಿಎಂಪಿ, ಸೋಮವಾರದಿಂದ (ಅ.29) ಹಂತ ಹಂತವಾಗಿ ಕಾರ್ಯಾಚರಣೆ ನಡೆಸಲು ಸಜ್ಜಾಗಿದೆ.
ಸುಮಾರು ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಪುನಾರಾಂಭಿಸಲು ಪಾಲಿಕೆ ವ್ಯವಸ್ಥೆ ಮಾಡಿಕೊಂಡಿದೆ. ಅದರಂತೆ ಸೋಮವಾರದಿಂದ ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಪಾಲಿಕೆ ಅಧಿಕಾರಿಗಳು ಕಾಲುವೆ ಒತ್ತುವರಿ ಸ್ಥಳಕ್ಕೆ ಭೇಟಿ ನೀಡಲಿದ್ದು, ಸ್ಥಳದಲ್ಲಿಯೇ ಒತ್ತುವರಿ ಭಾಗವನ್ನು ಗುರುತಿಸಿ ತೆರವು ಕಾರ್ಯವನ್ನು ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಸರ್ವೆ ನಡೆಸಿದ ಕಂದಾಯ ಇಲಾಖೆಯ ಭೂಮಾಪನ ಅಧಿಕಾರಿಗಳು 450 ಪ್ರಕರಣಗಳಲ್ಲಿ ರಾಜಕಾಲುವೆ ಒತ್ತುವರಿಯಾಗಿರುವ ಬಗ್ಗೆ ಪಾಲಿಕೆ ವರದಿ ನೀಡಿತ್ತು. ಅದರಂತೆ ತೆರವು ಕಾರ್ಯಾಚರಣೆ ನಡೆಸಲು ಅಧಿಕಾರಿಗಳು ಮುಂದಾಗಿದ್ದು, ಮೊದಲ ಹಂತದಲ್ಲಿ ಒತ್ತುವರಿಯಾಗಿರುವ ಭಾಗದಲ್ಲಿನ ಖಾಲಿ ನಿವೇಶನ, ಕಾಂಪೌಂಡ್ ತೆರವು ಹಾಗೂ ಕಾಲುವೆ ಮುಚ್ಚಿರುವ ಭಾಗಗಳಲ್ಲಿ ಕಾರ್ಯಾಚರಣೆ ಆರಂಭಿಸಲು ತೀರ್ಮಾನಿಸಿದ್ದಾರೆ.
ವಾರಕ್ಕೆ 50 ಪ್ರಕರಣಗಳಲ್ಲಿ ತೆರವು: ನಗರದಲ್ಲಿ ಒಟ್ಟು 450 ಪ್ರಕರಣಗಳಲ್ಲಿ ಒತ್ತುವರಿಯಾಗಿದ್ದು, ವಾರಕ್ಕೆ 50 ಪ್ರಕರಣಗಳಲ್ಲಿ ತೆರವು ಕಾರ್ಯಾಚರಣೆ ನಡೆಸಲು ರೂಪುರೇಷೆ ಸಿದ್ಧಪಡಿಸಿದೆ. ಅದರಂತೆ ಸೋಮವಾರದಿಂದ ನಾಲ್ಕು ವಲಯಗಳಲ್ಲಿ ಕಾರ್ಯಾಚರಣೆ ಆರಂಭವಾಗಲಿದ್ದು, ವಾರಕ್ಕೆ 50 ಪ್ರಕರಣಗಳ ತೆರವಿನಂತೆ 9 ವಾರಗಳಲ್ಲಿ ಎಲ್ಲ 450 ಪ್ರಕರಣಗಳಲ್ಲಿ ಒತ್ತುವರಿ ತೆರವುಗೊಳಿಸಲು ಪಾಲಿಕೆ ಚಿಂತಿಸಿದೆ.
ಮಳೆ ಸುರಿದಾಗ ಅನಾಹುತ ಸಂಭವಿಸಬಹುದಾದ ಪ್ರದೇಶಗಳಲ್ಲಿ ಕೂಡಲೇ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು. ವಾರಕ್ಕೆ 50 ಪ್ರಕರಣಗಳಂತೆ ತೆರವು ಕಾರ್ಯಾಚರಣೆ ನಡೆಸಲಾಗುವುದು.
-ಪ್ರಹ್ಲಾದ್, ಮುಖ್ಯ ಎಂಜಿನಿಯರ್, ಬೃಹತ್ ಮಳೆನೀರು ಕಾಲುವೆ