Advertisement

ಸಾಮ್ನಾ ಮುಖ್ಯ ಸಂಪಾದಕ “ಠಾಕ್ರೆ”ಕುಟುಂಬದ ಮೊದಲ ಸಿಎಂ 

04:02 PM Dec 02, 2019 | Nagendra Trasi |

ಮುಂಬಯಿ, ನ. 27: ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ ರಾಜ್ಯ ರಾಜಕೀಯದಲ್ಲಿ ತನ್ನದೇ ಆದ ವರ್ಚಸ್ಸು ಹೊಂದಿದವರು. ಶಿವಸೇನೆ- ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿಕೂಟವಾದ ಮಹಾರಾಷ್ಟ್ರ ವಿಕಾಸ ಆಘಾಡಿಯ ನಾಯಕರಾಗಿ ಆಯ್ಕೆಯಾದ ಬಳಿಕ ಉದ್ಧವ್‌, ನೂತನ ಮುಖ್ಯಮಂತ್ರಿ ಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ.

Advertisement

ಉದ್ಧವ್‌ 19 ವರ್ಷಗಳಿಂದ ರಾಜಕೀಯದಲ್ಲಿ ತಮ್ಮ ತಂದೆಯ ಪರಂಪರೆ ನಿರ್ವಹಿಸುತ್ತಿದ್ದವರು. ಉದ್ಧವ್‌ ಇಲ್ಲಿಯವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸಿದವರಲ್ಲ ಹಾಗೂ ಸಾಂವಿಧಾನಿಕ ಹುದ್ದೆಗೂ ಆಯ್ಕೆಯಾಗಲಿಲ್ಲ. ಆದರೂ ರಾಜ್ಯದ ಜನರ ಪ್ರೀತಿಯನ್ನು ಗಳಿಸಿದವರು.

ಈ ಬಾರಿ ವರ್ಲಿ ಸ್ಥಾನದಿಂದ ಗೆದ್ದ ಉದ್ಧವ್‌ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರು ಇಡೀ ಠಾಕ್ರೆ ಕುಟುಂಬದಲ್ಲೇ ಚುನಾವಣ ರಾಜಕೀಯಕ್ಕೆ ಸ್ಪರ್ಧಿಸಿದ ಮೊದಲಿಗರು. ಉದ್ಧವ್‌ ಠಾಕ್ರೆ 2000ರ ವರೆಗೆ ರಾಜಕೀಯದಿಂದ ದೂರ ಇದ್ದರು. ಅದಕ್ಕೂ ಮೊದಲು ಅವರು ಶಿವಸೇನೆ ಮುಖವಾಣಿ ಸಾಮ್ನಾವನ್ನು ನೋಡಿಕೊಳ್ಳುತ್ತಿದ್ದರು. ಅವರು ಪತ್ರಿಕೆಯ ಸಂಸ್ಥಾಪಕರೂ ಹೌದು. ಬಾಲ್ಯದಿಂದಲೂ ಫೋಟೋಗ್ರಯಲ್ಲಿ ಆಸಕ್ತಿಯನ್ನು ಹೊಂದಿದ್ದ ಅವರು 2000ರಲ್ಲಿ ತಮ್ಮ ತಂದೆ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಕೀಯದಲ್ಲಿ ಸಕ್ರಿಯರಾದರು.

2002ರಲ್ಲಿ ಉದ್ಧವ್‌ ಠಾಕ್ರೆ ಅವರ ನಾಯಕತ್ವ ದಲ್ಲಿ ಶಿವಸೇನೆಯು ಬಿಎಂಸಿ ಚುನಾವಣೆಯಲ್ಲಿ ಸಾಧಿಸಿದ ಪ್ರಚಂಡ ಗೆಲುವು ಅವರ ರಾಜಕೀಯ ಜೀವನದ ಸಾಧ್ಯತೆಯನ್ನು ತೆರೆಯಿತು. 2003ರಲ್ಲಿ ಉದ್ಧವ್‌, ಶಿವಸೇನೆಯ ಕಾರ್ಯನಿರ್ವಾಹಕ ಅಧ್ಯಕ್ಷ ರಾದರು.

ಬಾಳ್‌ ಠಾಕ್ರೆ ಅನಂತರ ಶಿವಸೇನೆಯ ಉತ್ತರಾಧಿಕಾರಿ ಯಾರು ಎಂಬ ವಿಷಯದಲ್ಲಿ ತಮ್ಮ ಸೋದರ ಸಂಬಂಧಿ ರಾಜ್‌ ಠಾಕ್ರೆ ಅವರೊಂದಿಗೆ ಹೋರಾಡ ಬೇಕಾಯಿತು. ಪಕ್ಷದಲ್ಲಿ ಒಂದು ಬಣದ ವಿರೋಧವನ್ನೂ ಎದುರಿಸಬೇಕಾಯಿತು.

Advertisement

2006ರಲ್ಲಿ ರಾಜ್‌ ಠಾಕ್ರೆ ಶಿವಸೇನೆಯಿಂದ ಹೊರ ಬಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ  (ಎಂಎನ್‌ಎಸ್‌) ರಚಿಸಿದರು. ಹಂತ ಹಂತವಾಗಿ ಬೆಳೆದವರು ಶಿವಸೇನೆಯಲ್ಲಿ ಹಂತ ಹಂತವಾಗಿ ಮೇಲೆ ನಿಯಂತ್ರಣ ಸಾಧಿಸಿದ  ಉದ್ಧವ್‌ ರಾಜ್‌ ಠಾಕ್ರೆ, 2013ರಲ್ಲಿ ತಮ್ಮ ತಂದೆಯ ಬಳಿಕ ಪಕ್ಷದಲ್ಲಿ ಸಂಪೂರ್ಣವಾಗಿ ಬೆಳೆದರು. ಈಗ ಶಿವಸೇನೆಯಲ್ಲಿ ಉದ್ಧವ್‌ ಅವರಿಗೆ ಪರ್ಯಾಯ ನಾಯಕರಿಲ್ಲ. ತಮ್ಮ ಉತ್ತರಾಧಿಕಾರಿಯನ್ನಾಗಿ ಅವರು ಮಗ ಆದಿತ್ಯ ಠಾಕ್ರೆ ಅವರನ್ನು ಬೆಳೆಸುತ್ತಿದ್ದಾರೆ. ರಾಜ್ಯ ಚುನಾವಣೆಯ ಆರಂಭದಲ್ಲಿ ಶಿವಸೈನಿಕರು ಆದಿತ್ಯ ಠಾಕ್ರೆ ಅವರನ್ನು
ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿ ಎಂದೂ ಬಿಂಬಿಸಿದ್ದರು.

ಉದ್ಧವ್‌ ವೈಯಕ್ತಿಕ ವಿವರ
ವಯಸ್ಸು : 59 ವರ್ಷ
ಜನ್ಮ ದಿನಾಂಕ: ಜುಲೈ 27, 1960(ಮುಂಬಯಿ)
ತಂದೆಯ ಹೆಸರು: ಬಾಳ್‌ ಠಾಕ್ರೆ
ತಾಯಿಯ ಹೆಸರು: ಮೀನಾ ಠಾಕ್ರೆ
ಒಡಹುಟ್ಟಿದವರು: ಬಿಂದುಮಾಧವ್‌ ಠಾಕ್ರೆ, ಜೈದೇವ್‌ ಠಾಕ್ರೆ, ರಾಜ್‌ ಠಾಕ್ರೆ (ಸೋದರ ಸಂಬಂಧಿ)
ಪತ್ನಿ: ರಶ್ಮಿ ಠಾಕ್ರೆ
ಮಕ್ಕಳು: ಆದಿತ್ಯ ಠಾಕ್ರೆ ಮತ್ತು ತೇಜಸ್‌ ಠಾಕ್ರೆ
ನಿವಾಸ: ಮಾತೋಶ್ರೀ
ವೃತ್ತಿ: ಸಾಮ್ನಾ (ಮರಾಠಿ ಪತ್ರಿಕೆ) ಮುಖ್ಯ ಸಂಪಾದಕ
ರಾಜಕೀಯ ಸ್ಥಾನ: ಶಿವಸೇನೆ ಅಧ್ಯಕ್ಷ
ವಿದ್ಯಾಭ್ಯಾಸ: ಬಾಲಮೋಹನ ವಿದ್ಯಾ ಮಂದಿರ, ಸರ್‌ ಜೆಜೆ ಇನ್ಸ್ಟಿಟ್ಯೂಟ್‌ ಆಫ್‌ ಅಪ್ಲೈಡ್‌ ಆರ್ಟ್‌ನಲ್ಲಿ ಪದವಿ.

Advertisement

Udayavani is now on Telegram. Click here to join our channel and stay updated with the latest news.

Next