ಕನಕಪುರ: ಸರ್ಕಾರಿ ಶಾಲೆಯಯಿಂದ ಮಕ್ಕಳು ಮತ್ತು ಪೋಷಕರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿವೆ ಎಂದು ಸಮಾಜ ಸೇವಕ ಗಣೇಶ್ ಹೇಳಿದರು. ನಗರದ ಬಾಣಂತಮಾರಮ್ಮ ಬಡಾವಣೆಯ ಬಾಣಂತ ಮಾರಮ್ಮ ಸರ್ಕಾರಿ ಶಾಲೆಯ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಸರ್ಕಾರಿ ಶಾಲೆಗಳು ಜ್ಞಾನದ ದೇಗಲುಗಳು. ಇಲ್ಲಿ ಕಲಿಯುತ್ತಿರುವ ಮಕ್ಕಳು ಧನ್ಯರು. ಸಾರ್ವಜನಿಕರಿಗೆ ಸರ್ಕಾರಿ ಶಾಲೆ ಎಂದು ತಾತ್ಸಾರ ಬೇಡ. ಸಮಾಜದಲ್ಲಿ ಸಾಧನೆ ಮಾಡಿದ ಮತ್ತು ಸರ್ಕಾರಿ ಸೇವೆಯಲ್ಲಿ ಶೇ.90ರಷ್ಟು ಮಂದಿ ಸರ್ಕಾರಿ ಶಾಲೆಯಲ್ಲಿ ಕಲಿತವರೇ ಇದ್ದಾರೆ ಎಂದರು.
ಬದುಕುವುದನ್ನು ಕಲಿಸುತ್ತದೆ ಸರ್ಕಾರಿ ಶಾಲೆ: ಖಾಸಗಿ ಶಾಲೆಯಲ್ಲಿ ಹೋಮ್‌ವರ್ಕ್ ಅಷ್ಟೇ ಮಕ್ಕಳ ನಿತ್ಯದ ದಿನಚರಿ. ಆದರೆ, ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಎಲ್ಲವನ್ನು ಕಲಿಸುವ ಶಿಕ್ಷಕರಿದ್ದಾರೆ. ಶಾಲೆ ಬಿಟ್ಟ ತಕ್ಷಣ ಸಾಮಾಜಿಕ ಪ್ರಪಂಚಕಕ್ಕೆ ತೆರಳಿ ಅಲ್ಲಿ ಸಮಾಜದ ಜ್ಞಾನ ಪಡೆದುಕೊಳ್ಳುತ್ತಾರೆ. ಖಾಸಗಿ ಶಾಲೆಯಲ್ಲಿ ಕಲಿತ ಮಕ್ಕಳಿಗೆ ತಮ್ಮ ಬಂಧುಗಳೊಂದಿಗೆ ಹೇಗೆ ಮಾತನಾಡಬೇಕು ಎನ್ನುವ ಅರಿವು ಇರುವುದಿಲ್ಲ. ಎಲ್ಲವನ್ನು ಕಲಿತು ಬದುಕುವುದನ್ನೇ ಕಲಿಯದಿದ್ದರೆ ಅದು ವಿದ್ಯೆ ಎನಿಸಲಾರದು. ಅದಕ್ಕಾಗಿ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಕಲಿಸಿ ಎಂದರು.
ಸರ್ಕಾರಿ ಶಾಲೆಗೆ ಸೌಲಭ್ಯ ಕಲ್ಪಿಸಿ: ಶಾಲಾಭಿವೃದ್ಧಿ ಸಮಿತಿ ಸದಸ್ಯ ನಾಗರಾಜು ಮಾತನಾಡಿ, ಸರ್ಕಾರಿ ಶಾಲೆ ಆರಂಭದ ದಿನದಲ್ಲಿ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದರು. ಇಂದು ಸಹ ನಗರದ ಅನೇಕ ಶಾಲೆಗಳ ಪೈಕಿ ಅತಿಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿರುವುದು ಸಂತಷ ತಂದಿದೆ. ಆದರೆ, ಸಮಾಜ ಸೇವಕರು ಸಹ ಇಂತಹ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯವ ಮೂಲಕ ಇಲ್ಲಿನ ಮೂಲ ಸೌಲಭ್ಯ ಕಲ್ಪಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ಮಲ್ಲೇಶ್‌ಗೆ ಕುಡಿಯುವ ನೀರು, ಕಟ್ಟಡಕ್ಕೆ ಬಣ್ಣದ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಸಲ್ಲಿಸಲಾಯಿತು. ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಲಾಯಿತು. ಈ ವೇಳೆಯಲ್ಲಿ ನಗರಸಭೆ ಸದಸ್ಯ ರಾಮಚಂದ್ರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಣಿ, ಉಪಾಧ್ಯಕ್ಷ ಸಾಧುಲ್ಲಾಖಾನ್, ಸದಸ್ಯರಾದ ಚಂದ್ರು, ಶಿವಲಿಂಗಯ್ಯ, ನಾಗೇಶ್, ನಾಗರಾಜು, ಮುಖ್ಯ ಶಿಕ್ಷಕ ರಾಮು ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಶಾಲೆಯ ಶಿಕ್ಷಕಿ ಶಿವಲೀಲ ವಾರ್ಷಿಕ ವರದಿ ಮಂಡಿಸಿದರು.