Advertisement

ಥರ ಥರ ಇವನೊಂಥರ

09:56 AM Mar 07, 2020 | mahesh |

ಒಬ್ಬೊಬ್ಬರ ವ್ಯಕ್ತಿತ್ವ ಒಂದೊಂದು ಥರ ಇರುತ್ತದೆ. ಅದೇ ಕಾರಣದಿಂದ ಅನೇಕರು ನಾನೊಂಥರ ಎನ್ನುವುದನ್ನು ನೀವು ಕೇಳಿರುತ್ತೀರಿ. ಈಗ ಚಿತ್ರತಂಡವೊಂದು ಅದನ್ನೇ ತಮ್ಮ ಟೈಟಲ್‌ನ್ನಾಗಿಸಿ ಸಿನಿಮಾ ಮಾಡಿ ಮುಗಿಸಿದೆ. ಅದು “ನಾನೊಂಥರ’. ಹೀಗೊಂದು ಸಿನಿಮಾ ಸದ್ದಿಲ್ಲದೇ ಚಿತ್ರೀಕರಣ ಮಾಡಿದ್ದು, ಚಿತ್ರ ಈ ತಿಂಗಳಲ್ಲೇ ತೆರೆಗೆ ಬರಲಿದೆ. ವೃತ್ತಿಯಲ್ಲಿ ವೈದೈಯಾಗಿರುವ ಜಾಕ್ಲಿನ್‌ ಫ್ರಾನ್ಸಿಸ್‌ ಈ ಸಿನಿಮಾದ ನಿರ್ಮಾಪಕರು. ರಮೇಶ್‌ ಕಗ್ಗಲ್‌ ನಿರ್ದೇಶಕರು. ಈ ಚಿತ್ರದಲ್ಲಿ ನಾಯಕರಾಗಿ ನಟಿಸಿರುವ ತಾರಕ್‌ ಶೇಖರಪ್ಪ ಕೂಡ ವೃತ್ತಿಯಲ್ಲಿ ವೈದ್ಯರು.

Advertisement

ಎಲ್ಲಾ ಓಕೆ, “ನಾನೊಂಥರ’ ಎಂದರೇನು ಎಂದು ನೀವು ಕೇಳಬಹುದು. ನಿರ್ದೇಶಕ ರಮೇಶ್‌ ಹೇಳುವಂತೆ, ಚಿತ್ರದ ನಾಯಕ ಅವನಿಗೆ ಬೇಕಾದಂತೆ ಬದುಕುತ್ತಿರುತ್ತಾನೆ. ಕುಡಿಬೇಕು ಎಂದಾಗ ಕುಡೀತಾನೆ, ಪ್ರೀತಿಸಬೇಕು ಎಂದಾಗ ಪ್ರೀತಿಸುತ್ತಾನೆ…. ಹೀಗೆ ತನಗೆ ಏನು ಅನಿಸುತ್ತದೆ ಅದನ್ನು ಮಾಡುತ್ತಾನೆ. ಆತನ ವ್ಯಕ್ತಿತ್ವವೇ ಒಂಥರಾ ಇರೋದರಿಂದ ಸಿನಿಮಾಕ್ಕೆ “ನಾನೊಂಥರ’ ಎಂಬ ಟೈಟಲ್‌ ಇಡಲಾಗಿದೆ. ಇಲ್ಲಿ ನಾಯಕ ಏನೋ ಅಂದುಕೊಂಡರೆ ಆತನ ಜೀವನದಲ್ಲಿ ಬರುವ ಟ್ವಿಸ್ಟ್‌ಗಳು ಆತನನ್ನು ಇನ್ನೊಂದು ಹಾದಿಗೆ ಸಾಗುವಂತೆ ಮಾಡುತ್ತದೆ ಎಂದು ಚಿತ್ರದ ಬಗ್ಗೆ ವಿವರ ನೀಡಿದರು ರಮೇಶ್‌. ಈ ಚಿತ್ರವನ್ನು ನಿರ್ಮಿಸಿರುವ ಜಾಕ್ಲಿನ್‌ ಫ್ರಾನ್ಸಿಸ್‌ ಅವರು “ಧ್ರುವತಾರೆ’ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರಂತೆ. ಈಗ ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಬಂದಿದ್ದಾರೆ. ವೈದ್ಯೆಯಾಗಿರುವ ಅವರು ಈಗ ಸಿನಿಮಾ ನಿರ್ಮಾಣ ಮಾಡಲು ಕಾರಣ ಚಿತ್ರದ ಕಥೆ. “ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ತುಂಬಾ ಹೊಸತನದಿಂದ ಕೂಡಿದೆ. ಹಾಗಾಗಿ, ನಿರ್ಮಾಣಕ್ಕೆ ಮುಂದಾದೆ. ಸಿನಿಮಾ ಅಂದುಕೊಂಡಂತೆ ಬಂದಿದೆ’ ಎನ್ನುವುದು ಅವರ ಮಾತು.

ನಾಯಕ ತಾರಕ್‌ ಈ ಹಿಂದೆ ಒಂದೆರಡು ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ “ನಾನೊಂಥರ’ ಚಿತ್ರದಲ್ಲಿ ಎರಡು ಶೇಡ್‌ನ‌ ಪಾತ್ರ ಸಿಕ್ಕಿದೆಯಂತೆ. “ಇದೊಂದು ಪೂರ್ಣ ಪ್ರಮಾಣದ ಪ್ಯಾಕೇಜ್‌ ಸಿನಿಮಾ. ಕಥೆ ಇಷ್ಟವಾಗಿ ನಿರ್ಮಾಪಕರಿಗೆ ಹೇಳಿಸಿದೆವು. ಅವರು ಕೂಡಾ ಖುಷಿಯಿಂದ ಒಪ್ಪಿಕೊಂಡರು. ಚಿತ್ರದಲ್ಲೊಂದು ಸಂದೇಶವಿದೆ’ ಎಂದರು. ನಾಯಕಿ ರಕ್ಷಿಕಾ ಇಲ್ಲಿ ಸಂಪ್ರದಾಯಸ್ಥ ಕುಟುಂಬದ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕನ ಜೀವನದಲ್ಲಿ ಆಕೆ ಎಂಟ್ರಿಕೊಟ್ಟ ನಂತರ ಏನಾಗುತ್ತದೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ. ನಿರ್ಮಾಪಕರ ಪುತ್ರ ಜೈಸನ್‌ ಕೂಡಾ ನಟಿಸಿದ್ದು, ನಾಯಕನ ಸಹೋದರನಾಗಿ ಬಣ್ಣ ಹಚ್ಚಿದ್ದಾರೆ. ಉಳಿದಂತೆ ದೇವರಾಜ್‌, ಪ್ರಶಾಂತ್‌, ರಾಕ್‌ಲೈನ್‌ ಸುಧಾಕರ್‌ ನಟಿಸಿದ್ದಾರೆ. ಚಿತ್ರಕ್ಕೆ ಸುನಿಲ್‌ ಸ್ಯಾಮಿಲ್‌ ಸಂಗೀತವಿದೆ.

Advertisement

Udayavani is now on Telegram. Click here to join our channel and stay updated with the latest news.

Next