Advertisement

ಅಂದು ಭಿಕ್ಷೆ ಬೇಡುತ್ತಿದ್ದವಳು ಈಗ ನ್ಯಾಯವಾದಿ! 50ಕ್ಕೂ ಅಧಿಕ ಕೇಸು ಗೆದ್ದ ಹಿರಿಮೆ ಈಕೆಯದ್ದು

06:50 PM Nov 27, 2020 | sudhir |

ಕರಾಚಿ: ಪಾಕಿಸ್ತಾನದ ಕರಾಚಿಯ ಟ್ರಾಫಿಕ್‌ ಸಿಗ್ನಲ್‌ನಲ್ಲಿ ಭಿಕ್ಷೆ ಬೇಡುತ್ತಿದ್ದ ತೃತೀಯ ಲಿಂಗಿ ಈಗ ಅಲ್ಲಿ ಕಾಣುತ್ತಿಲ್ಲ. ಆಕೆ ಈಗ ಸಾಮಾನ್ಯ ವ್ಯಕ್ತಿಯಲ್ಲ. ಕಾನೂನು ಪದವಿ ಪಡೆದು ಸಮರ್ಥವಾಗಿ ವಾದ ಮಂಡಿಸುವ ನ್ಯಾಯವಾದಿ. ಇಂಥ ಸಾಧನೆ ಮಾಡಿದ ತೃತೀಯ ಲಿಂಗಿಯ ಹೆಸರು ನಿಶಾ ರಾವ್‌ (28). ಅವರು ಆ ದೇಶದ ಮೊದಲ ತೃತೀಯ ಲಿಂಗಿ ನ್ಯಾಯವಾದಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

Advertisement

2018ರಲ್ಲಿ ಪಾಕಿಸ್ತಾನದ ಸಂಸತ್‌ನಲ್ಲಿ ತೃತೀಯ ಲಿಂಗಿಗಳ ಸಮುದಾಯದ ಹಕ್ಕುಗಳನ್ನು ರಕ್ಷಿಸುವ ಬಗೆಗಿನ ವಿಧೇಯಕ ಅನುಮೋದನೆಗೊಂಡಿತ್ತು. ಇದರಿಂದಾಗಿ ಅವರ ಜೀವನದ ದಿಕ್ಕೇ ಬದಲಾವಣೆಯಾಯಿತು. ಆರಂಭದಲ್ಲಿ ಅವರು ಕರಾಚಿಯ ರಸ್ತೆಗಳ ಸಿಗ್ನಲ್‌ನಲ್ಲಿ ಬೇಡುತ್ತಿದ್ದರು ಮತ್ತು ಪೊಲೀಸರಿಂದ, ಇತರರಿಂದ ದೌರ್ಜನ್ಯಕ್ಕೆ ಒಳಗಾಗುತ್ತಿದ್ದರು.

ಇಂಥ ದಿನಗಳಿಗೆ ಕೊನೆ ಹಾಡಬೇಕೆಂದು ನಿರ್ಧರಿಸಿದ ನಿಶಾ ರಾವ್‌, ಭಿಕ್ಷೆ ಬೇಡುವುದನ್ನು ಮುಂದುವರಿಸಿದರೂ, ಅದರಿಂದ ಸಿಕ್ಕಿದ ಹಣವನ್ನು ಕಾನೂನು ಅಧ್ಯಯನಕ್ಕೆ ವಿನಿಯೋಗಿಸಿದರು. ಪದವಿ ಪಡೆದುಕೊಂಡ ಬಳಿಕ ಕರಾಚಿ ಬಾರ್‌ ಎಸೋಸಿಯೇಷನ್‌ನಲ್ಲಿ ನೋಂದಣಿ ಮಾಡಿಸಿಕೊಂಡು, ನ್ಯಾಯವಾದಿಯಾದರು.

ಇದನ್ನೂ ಓದಿ:ಕೋವಿಡ್ 19ಗೆ ಲಸಿಕೆ ಲಭ್ಯವಾಗುವವರೆಗೆ ಕಠಿಣ ಕಾನೂನು ಜಾರಿಗೊಳಿಸಿ: ಕೇಂದ್ರಕ್ಕೆ ಸುಪ್ರೀಂ

Advertisement

ಅವರು ಇದುವರೆಗೆ 50 ಯಶಸ್ವಿ ಕೇಸುಗಳನ್ನು ನಿರ್ವಹಿಸಿದ್ದಾರೆ. “ದೇಶದ ಮೊದಲ ತೃತೀಯ ಲಿಂಗಿ ನ್ಯಾಯಮೂರ್ತಿಯಾಗಬೇಕೆಂದಿದ್ದೇನೆ. ನಮ್ಮ ಸಮುದಾಯದ ಮೊದಲ ವಕೀಲೆ’ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು “ರಾಯಿಟರ್ಸ್‌’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಲಾಹೋರ್‌ ಮೂಲದ ನಿಶಾ ರಾವ್, 18 ವಯಸ್ಸಿನ ಬಳಿಕ ತಮ್ಮ ಕುಟುಂಬದ ಜತೆಗಿನ ಬಾಂಧವ್ಯ ಕಡಿದುಕೊಂಡು ಕರಾಚಿಗೆ ಬಂದಿದ್ದರು. ಲೈಂಗಿಕ ಕಾರ್ಯಕರ್ತೆಯಾಗುವ ಅವಕಾಶ ತಿರಸ್ಕರಿಸಿದ ನಿಶಾ ರಾವ್‌ ಭಿಕ್ಷೆ ಬೇಡುತ್ತಾ ಹೊಸ ಜೀವನ ಕಂಡುಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next