Advertisement

29ರಿಂದ ಎರಡು ದಿನ ಉದ್ಯೋಗ ಮೇಳ

12:58 PM Sep 23, 2018 | |

ಬೆಂಗಳೂರು: ಮುಖ್ಯಮಂತ್ರಿಯವರ ಜನತಾ ದರ್ಶನದಲ್ಲಿ ಅರ್ಜಿಸಲ್ಲಿಸಿದವರೂ ಸೇರಿ ವಿವಿಧ ಪದವೀಧರರ ಅನುಕೂಲಕ್ಕಾಗಿ ಸೆ.29ರಿಂದ ಎರಡು ದಿನ ನಗರದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ವಿಜಯಶಂಕರ್‌ ಹೇಳಿದ್ದಾರೆ.

Advertisement

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವನಗುಡಿಯ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯುವ ಉದ್ಯೋಗ ಮೇಳಕ್ಕೆ  ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

ಸುಮಾರು 200 ಕಂಪನಿಗಳು ಮೇಳದಲ್ಲಿ ಪಾಲ್ಗೊಳ್ಳಲಿದ್ದು, 5 ಸಾವಿರ ಮಂದಿಗೆ ಉದ್ಯೋಗ ದೊರೆಯುವ ನಿರೀಕ್ಷೆ ಇದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6ರವರೆಗೆ ನಡೆಯುವ ಮೇಳದಲ್ಲಿ, ಎಸ್‌ಎಸ್‌ಎಲ್‌ಸಿ ಪಾಸಾದವರು ಹಾಗೂ  ಎಲ್ಲ ಪದವೀಧ‌ರರು ಭಾಗವಹಿಸಬಹುದು ಎಂದು ಹೇಳಿದರು.

ಮಹಿಳೆಯರಿಗೆ ಪ್ರತ್ಯೇಕ ಕೌಂಟರ್‌: ಉದ್ಯೋಗ ಮೇಳದಲ್ಲಿ ಸುಮಾರು 10ರಿಂದ 15 ಸಾವಿರ ಅಭ್ಯರ್ಥಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಮಹಿಳೆಯರು ಮತ್ತು ವಿಕಲಚೇತನರಿಗೆ ಪ್ರತ್ಯೇಕ ಕೌಂಟರ್‌ ತೆರೆಯುವ ಆಲೋಚನೆಯಿದೆ. ಮೇಳದಲ್ಲಿ ವಿಕಲಚೇತನರ ಬಗ್ಗೆ ವಿಶೇಷ ಕಾಳಜಿ ತೋರುವ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು.

ಮೇಳದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರಿಗೌಡ ಸೇರಿದಂತೆ ಹಲವು ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 

Advertisement

ಎಲ್ಲ ಜಿಲ್ಲೆಯವರು ಪಾಲ್ಗೊಳ್ಳಬಹುದು: ಉದ್ಯೋಗ ಮೇಳದಲ್ಲಿ ಇಂತಹ ಪ್ರದೇಶದವರು ಮಾತ್ರ ಪಾಲ್ಗೊಳ್ಳಬೇಕು ಎಂಬ ನಿರ್ಬಂಧವಿಲ್ಲ. ಬೆಳಗಾವಿ, ಬೀದರ್‌, ಶಿವಮೊಗ್ಗ, ರಾಮನಗರ, ಮಂಡ್ಯ, ಮೈಸೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಯವರೂ ಪಾಲ್ಗೊಳ್ಳಬಹುದು. ಪದವೀಧರರಿಗೆ ಉದ್ಯೋಗ ಕಲ್ಪಿಸುವುದು ಮೇಳದ ಮುಖ್ಯ ಆಶಯವಾಗಿದ್ದು, ಸಂದರ್ಶನಕ್ಕೆ ಹಾಜರಾಗುವ ಮೊದಲು, ಭಾಷಾ ಕೌಶಲ್ಯದ ಬಗ್ಗೆ ಅಭ್ಯರ್ಥಿಗಳಿಗೆ ಹೇಳಿಕೊಡಲಾಗುವುದು.

ಜನತಾ ದರ್ಶನದ ಅಭ್ಯರ್ಥಿಗಳು: ಈಗಾಲೇ ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಉದ್ಯೋಗಕ್ಕಾಗಿ 300 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಮೇಳದಲ್ಲಿ ಭಾಗವಹಿಸಲು ಸೂಚಿಸಲಾಗಿದೆ. ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳ ಅಭ್ಯರ್ಥಿಗಳು ಇದರಲ್ಲಿ ಸೇರಿದ್ದಾರೆ. ಸಂಜೆ 4ರಿಂದ 5 ಗಂಟೆ ವೇಳೆಗೆ ಸಂದರ್ಶನದಲ್ಲಿ ಆಯ್ಕೆಯಾದವರಿಗೆ ಸ್ಥಳದಲ್ಲೇ, ಆಫ‌ರ್‌ ಲೆಟರ್‌ ನೀಡುವ ಪ್ರಕ್ರಿಯೆ ಕೂಡ ನಡೆಯಲಿದೆ.

ನಗರ ಜಿ.ಪಂ ವ್ಯಾಪ್ತಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ತರವಿಗೆ ಶನಿವಾರ ಕಾರ್ಯಾಚರಣೆ ನಡೆಯಬೇಕಿತ್ತು. ಆದರೆ ಉದ್ಯೋಗ ಮೇಳ ಸಂಬಂಧ ಸಾಲು, ಸಾಲು ಸಭೆಗಳಿದ್ದ ಕಾರಣ ಸಾಧ್ಯವಾಗಲಿಲ್ಲ. ಸೋಮವಾರದಿಂದ ಒತ್ತುವರಿ ತೆರವು ಮುಂದುವರಿಯಲಿದೆ.
-ವಿಜಯಶಂಕರ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next