Advertisement

Frog: ಕಪ್ಪೆಗಳು ಸಾರ್‌ ಕಪ್ಪೆಗಳು

01:40 PM Oct 15, 2023 | Team Udayavani |

ಪಶ್ಚಿಮ ಘಟ್ಟದಲ್ಲಿ ಕಾಣಸಿಗುವ ಕುಂಬಾರ ಕಪ್ಪೆ ಕುರಿತು ರಚಿಸಿರುವ ಕಪ್ಪೆರಾಗ-ಕುಂಬಾರನ ಹಾಡು ಎಂಬ ಕನ್ನಡ ಕಿರುಚಿತ್ರಕ್ಕೆ “ಗ್ರೀನ್‌ ಆಸ್ಕರ್‌’ ಎಂದೇ ಖ್ಯಾತಿ ಪಡೆದಿರುವ ಜ್ಯಾಕ್ಸನ್‌ ವೈಲ್ಡ್‌ ಮೀಡಿಯಾದ ಅತ್ಯುತ್ತಮ ಪ್ರಾಣಿ ವರ್ತನೆ ವಿಭಾಗದಲ್ಲಿ ಪ್ರಶಸ್ತಿ ಲಭಿಸಿದೆ. ಈ ಕಿರುಚಿತ್ರವು ಎಷ್ಟೋ ಜನರಲ್ಲಿ ಕಪ್ಪೆಗಳ ಸೋಜಿಗ ಜಗದ ಬಗ್ಗೆ ಕುತೂಹಲವನ್ನು ಹುಟ್ಟುಹಾಕುವಲ್ಲಿ ಯಶಸ್ವಿಯಾಗಿದೆ.

Advertisement

ಮುಂಗಾರು ಮಳೆಗೆ ಮುನ್ನುಡಿ ಬರೆಯುವುದೇ ಈ ಕಪ್ಪೆಗಳು, ಇವುಗಳ ಸ್ವರ ಸಂಗೀತ ಆಲಾಪನೆ ಕೇಳದ ದಿನಗಳೇ ಇಲ್ಲ. ಈ ಮೃದು, ಮುದ್ದು ಪ್ರಾಣಿ ದೀರ್ಘಾಯುಷಿಯಷ್ಟೇ ಅಲ್ಲ ಧನ್ಯ ಧ್ಯಾನ ಭಾವದಲ್ಲಿರುತ್ತದೆ. ಮುಂಗಾರು ಮಳೆ ಶುರುವಾಗುತಿದ್ದಂತೆ ಸದಾ ವಟರ್‌… ವಟರ್‌… ಸ್ವರ ಮಾಡುವುದು ಸರ್ವೇ ಸಾಮಾನ್ಯ. ಸಂಜೆ ಹೊತ್ತಿಗೆ ಇದು ತಾರಕಕ್ಕೇರುತ್ತವೆ. ಈ ಮಂಡೂಕ ಉಪನಿಷತ್ತು ಇಂದು ನಿನ್ನೆಯದಲ್ಲ. ಈ ಕಪ್ಪೆಗಳ ಸಾಮ್ರಾಜ್ಯ ಅನಾದಿ ಕಾಲದಿಂದ ನಡೆದು ಬಂದಿದೆ.

“ಕಲ್ಲಿನೊಳಗೆ ಇರುವ ಕಪ್ಪೆಗೆ ಅಲ್ಲೇ ಉದಕ ಕೊಡುವ…’ ಎಂದು ದಾಸರು ಹೇಳಿರುವ ಮಾತು ನಮಗೆಲ್ಲಾ ಪರಿಚಿತ. ಅಮರಶಿಲ್ಪಿ ಜಕಣಾಚಾರಿ ತಾನು ಕೆತ್ತಿದ್ದ ಒಂದು ಶಿಲಾ ವಿಗ್ರಹದ ಗರ್ಭದಲ್ಲಿ ಒಂದು ಕಪ್ಪೆಹುದುಗಿದ್ದುದರಿಂದ ಆ ವಿಗ್ರಹ ನಿಷಿದ್ಧವೆಂದು ಅವನ ಮಗನೇ ಆಗಿದ್ದ ಡಂಕಣಾಚಾರಿ ತಂದೆಯ ಮಾನಹಾನಿ ಮಾಡಿದ ವಿಷಯ ನೆನಪಾಗದಿರದು. ಅದಕ್ಕೆ ಇಂದಿನ ಬೇಲೂರಿನಲ್ಲಿರುವ ಕಪ್ಪೆ ಚೆನ್ನಿಗರಾಯನ ವಿಗ್ರಹ ಒಂದು ಉಜ್ವಲ ಸಾಕ್ಷಿ. ಆಗಿನ ಕಾಲದಿಂದ ಹಿಡಿದು, ಕೆಲವು ವರ್ಷಗಳ ಹಿಂದೆ ಕರ್ನಾಟಕದ ಧ್ವಜ, ಪಕ್ಷಿ, ಪ್ರಾಣಿ ಲಾಂಛನದಂತೆ ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ “ಮಲಬಾರ್‌ ಟ್ರೀ ಟೋಡ್‌’ ಎಂಬ ಅಪರೂಪದ, ಅಳಿವಿನ ಅಂಚಿನಲ್ಲಿರುವ ಪ್ರಭೇದದ ಕಪ್ಪೆಯನ್ನು “ರಾಜ್ಯ ಕಪ್ಪೆ’ಯನ್ನಾಗಿ ಘೋಷಣೆ ಮಾಡಬೇಕೆಂದು ತಜ್ಞರು ಒತ್ತಾಯ ಮಾಡುವವರೆಗೂ ಕಪ್ಪೆಗಳು ಒಂದಲ್ಲೊಂದು ವಿಶೇಷ ಕಾರಣಕ್ಕೆ ಸುದ್ದಿಯಾಗುತ್ತಲೇ ಬಂದಿವೆ.

ಜಗತ್ತಿನಲ್ಲಿ ಕಪ್ಪೆಗಳ 8,400 ಪ್ರಬೇಧಗಳನ್ನು ಗುರುತಿಸಲಾಗಿದೆ. ಈ ಪೈಕಿ ಭಾರತದಲ್ಲೇ 412 ಪ್ರಭೇದಗಳು ಕಂಡುಬಂದಿವೆ. ಆದರೆ ದೇಶದಲ್ಲಿನ ಸುಮಾರು ಶೇ. 80ರಷ್ಟು ಕಪ್ಪೆಗಳು ಅಳಿವಿನ ಅಂಚಿನಲ್ಲಿವೆ ಮತ್ತು ಕೆಲವು ಪ್ರಭೇದಗಳು ಈಗಾಗಲೇ ಮಾನವನ ಆಕ್ರಮಣದಿಂದ ಉಂಟಾಗುವ ಸಮಸ್ಯೆಗಳ ಪರಿಣಾಮ, ಅವುಗಳ ಆವಾಸಸ್ಥಾನವನ್ನು ಕಿತ್ತುಕೊಂಡಿರುವುದರಿಂದ ಕಣ್ಮರೆಯಾಗಿವೆ ಎಂದು ಉಭಯಚರ ವಿಜ್ಞಾನಿಗಳು ವಿಷಾದ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮನುಷ್ಯರಿಗೆ ಎಳ್ಳಷ್ಟೂ ತೊಂದರೆ ಕೊಡದೆ ಮೇಘರಾಜನ ಗಾನಲೀಲೆಗೆ, ಜಿಗಿದು ವಟರು ಗುಟ್ಟುವ ಉಭಯವಾಸಿಗಳ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಆವಶ್ಯಕತೆಯಿದೆ.

-  ಸ್ವಾಮಿ ಶಶಾಂಕ್‌ ಟಿ. ಎಚ್‌. ಎಂ. ಆಳ್ವಾಸ್‌ ಕಾಲೇಜು ಮೂಡುಬಿದಿರೆ

Advertisement
Advertisement

Udayavani is now on Telegram. Click here to join our channel and stay updated with the latest news.

Next