ಗಂಗಾವತಿ: ತಾಲೂಕಿನ ಸೂರ್ಯನಾಯಕನ ತಾಂಡ ಕೆರೆಯಲ್ಲಿ ಗ್ರಾಮಸ್ಥರು ಕಪ್ಪೆಗಳ ಮದುವೆ ಮಾಡಿದರು. ಗ್ರಾಮಸ್ಥರು ಸಾಂಪ್ರದಾಯದಂತೆ ಕಪ್ಪೆಗಳನ್ನ ಕೆರೆಯಲ್ಲಿ ಹಿಡಿದು ಅವುಗಳಿಗೆ ಅಲಂಕರಿಸಿ ಮದುವೆ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಶರಣಮ್ಮ ಮಾತನಾಡಿ, ಪ್ರಕೃತಿಯ ಮುನಿಸಿನಿಂದ ಮಳೆ ಮಾಯವಾಗಿದೆ. ಹೆಚ್ಚಿನ ಬಿಸಿಲು ಜಳದಿಂದ ಜೀವಿ ಸಂಕುಲ ಬಳಲುತ್ತಿದ್ದು ನಂಬಿಕೆ ಸಂಪ್ರದಾಯದಂತೆ ಕಪ್ಪೆಗಳನ್ನ ಹಿಡಿದು ಮದುವೆ ಮಾಡಿದರೆ ಮಳೆಯಾಗುತ್ತದೆ ಎಂಬ ಅಭಿಪ್ರಾಯ ಕೇಳಿ ಬಂದಿದ್ದರಿಂದ ಗ್ರಾಮಸ್ಥರು ಸೇರಿ ಗ್ರಾಮದ ಎಲ್ಲಾ ದೇವಸ್ಥಾನದಲ್ಲಿ ಮೊದಲು ಪೂಜೆ ಮಾಡಲಾಯಿತು.
ಎಲ್ಲಾ ಮನೆಗಳಲ್ಲಿ ಸಿಹಿ ತಯಾರಿಸಿ ಎಲ್ಲಾ ಜನಾಂಗದವರು ಸೇರಿ ಗ್ರಾಮದ ಕೆರೆಯ ಕಪ್ಪೆಗಳನ್ನು ಹಿಡಿದು ಮದುವೆ ಮಾಡಲಾಗಿದೆ. ಇದರ ಅರ್ಥ ಪ್ರಕೃತಿಯನ್ನು ಹೊರತುಪಡಿಸಿ ಮನುಷ್ಯರು ಇಲ್ಲ, ಪ್ರಕೃತಿಯ ಜೊತೆಗೆ ಮನುಷ್ಯರು ಬದುಕಬೇಕು. ಆದ್ದರಿಂದ ಗಿಡಮರಗಳನ್ನು ಕಡಿಯದೆ, ಕಲ್ಲು ಬಂಡೆಗಳನ್ನು ಒಡೆಯದೆ ಜೀವಿ ಸಂಕುಲ ಸಂರಕ್ಷಣೆ ಮಾಡಿದರೆ ಪರಿಸರ ಸಮತೋಲನವಾಗಿರುತ್ತದೆ. ಇದರಿಂದ ಪ್ರಕೃತಿ ಒಲಿದು ಮಳೆಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಸಸಿನೆಟ್ಟು ಬೆಳೆಸಿ ಪ್ರತಿ ಗ್ರಾಮಕ್ಕೆ ಒಂದು ವನ ಮಾದರಿಯಾಗಬೇಕೆಂದರು.
ಈ ಸಂದರ್ಭದಲ್ಲಿ ಬಸಾಪಟ್ಟಣ ಹಾಗೂ ಸೂರ್ಯನಾಯಕನ ತಾಂಡದ ನಿವಾಸಿಗಳು ಸೇರಿದಂತೆ ಶರಣಮ್ಮ, ಈರಮ್ಮ ಹಳ್ಳಿ, ಶಿವಮ್ಮ ಗಂಜಾಳ, ಹನುಮಮ್ಮ, ವಾಣಿ, ಅನುಶ್ರೀ, ಶ್ರೀದೇವಿ ಮತ್ತು ಶಿವಮ್ಮ ಇದ್ದರು.
ಇದನ್ನೂ ಓದಿ: Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ