ತಿರುವನಂತಪುರಂ: ಕೇರಳದ ಸಿಪಿಐ (ಎಂ) ನೇತೃತ್ವದ ಸರ್ಕಾರದ ವಿರುದ್ಧ ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ವಾಗ್ದಾಳಿ ನಡೆಸಿದ್ದು, ಕೇರಳ ರಾಜ್ಯ ಭಯೋತ್ಪಾದಕರ ಮತ್ತು ಸಮಾಜಘಾತುಕ ಶಕ್ತಿಗಳ ಆಶ್ರಯ ತಾಣವಾಗುತ್ತಿದೆ. ಇದರೊಂದಿಗೆ ಕೋಮು ದಳ್ಳುರಿ ಹೆಚ್ಚಳವಾಗುತ್ತಿರುವುದಾಗಿ ಆರೋಪಿಸಿದರು.
ಇದನ್ನೂ ಓದಿ:ಗೆಹ್ಲೋಟ್- ಪೈಲಟ್ ಜಗಳದಿಂದ ಖರ್ಗೆಗೆ ಲಾಭ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ?
ಕೇರಳದ ಥೈಕಾಡ್ ನಲ್ಲಿ ಬಿಜೆಪಿಯ ನೂತನ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ನಡ್ಡಾ ಅವರು, ಕೇರಳದ ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಶಾಮೀಲಾಗಿದೆ. ಒಂದು ರಾಜ್ಯದ ಮುಖ್ಯಮಂತ್ರಿ ಕಚೇರಿ ಕೂಡಾ ಭ್ರಷ್ಟಾಚಾರದಲ್ಲಿ ತೊಡಗಿರುವಾಗ, ಇದು ಆಡಳಿತದ ದುರದೃಷ್ಟ. ಈ ಮೂಲಕ ಎಲ್ ಡಿಎಫ್ ಸರ್ಕಾರ ಕೇರಳವನ್ನು ಅಧಃಪತನಕ್ಕೆ ಕೊಂಡೊಯ್ಯುತ್ತಿದೆ ಎಂದು ಕಿಡಿಕಾರಿರುವುದಾಗಿ ವರದಿ ತಿಳಿಸಿದೆ.
ಕೇರಳ ರಾಜ್ಯ ಉಗ್ರರ ಆಶ್ರಯತಾಣವಾಗುವ ಮೂಲಕ ಇಲ್ಲಿನ ಜನರು ಸುರಕ್ಷಿತವಾಗಿ ಉಳಿದಿಲ್ಲ. ಸಾಮಾನ್ಯ ನಾಗರಿಕನಿಗೂ ರಕ್ಷಣೆ ಸಿಗದಂತಾಗಿದೆ. ರಾಜ್ಯದಲ್ಲಿ ಕೋಮು ಗಲಭೆ ಹೆಚ್ಚಳವಾಗುತ್ತಿದೆ. ಎಲ್ ಡಿಎಫ್ ಸರ್ಕಾರ ಆರೋಪಿಗಳಿಗೆ ಬೆಂಬಲ ನೀಡುವ ತಂತ್ರಗಾರಿಕೆಗೆ ಜನರು ಪಾಠ ಕಲಿಸಬೇಕಾಗಿದೆ ಎಂದರು.
ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಪಕ್ಷವಾಗಿದೆ. ಅಷ್ಟೇ ಅಲ್ಲ ಸಿದ್ಧಾಂತವನ್ನು ಹೊಂದಿರುವ ಪಕ್ಷವಾಗಿದ್ದು, ಬೃಹತ್ ಪ್ರಮಾಣದ ಬೆಂಬಲಿಗರನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜದ ಪ್ರತಿಯೊಂದು ವರ್ಗದ ಅಭಿವೃದ್ಧಿಗಾಗಿ ದುಡಿಯುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ಬಿಜೆಪಿಯ ಭಾಗವಾಗಿರುವುದು ನಮ್ಮ ಅದೃಷ್ಟವಾಗಿದೆ ಎಂದು ನಡ್ಡಾ ಹೇಳಿದರು.