ಜಡ್ಕಲ್ ನಿವಾಸಿಗಳಿಗೆ ಮತ್ತೆ ಪರಿಸರಸೂಕ್ಷ್ಮ ಪ್ರದೇಶದ ಅಧಿಸೂಚನೆಯ ಗುಮ್ಮ
ಕೊಲ್ಲೂರು: ಪಶ್ಚಿಮ ಘಟ್ಟ ತಪ್ಪಲಿನ ಪರಿಸರ ಸೂಕ್ಷ್ಮ ಪ್ರದೇಶಗಳ ಅಧಿಸೂಚನೆಯು ಆ ಭಾಗದ ಜನರಲ್ಲಿ ಆತಂಕವನ್ನು ಉಂಟುಮಾಡಿರುವ ಹಿನ್ನೆಲೆಯಲ್ಲಿ ಇದೀಗ ಜಡ್ಕಲ್ ಗ್ರಾಮದ ಸಿಂಗ್‌ಸಾಲ್ ಹಾಗೂ ತಲ್ಕಾಣ ಎಂಬಲ್ಲಿನ ನಿವಾಸಿಗಳಿಗೆ ನಿದ್ರೆ ಬಾರದ ರಾತ್ರಿಯಾಗಿ ಮೂಡಿಬಂದಿದ್ದು ಆ ಭಾಗದ ಮಂದಿ ಮತ್ತೆ ಭಯದ ಕರಿನೆರಳಲ್ಲಿ ಜೀವಿಸಬೇಕಾದ ಪರಿಸ್ಥಿತಿ ಬಂದೊದಗಿದೆ.
ಕುಂದಾಪುರ ಉಪವಿಭಾಗಾಧಿಕಾರಿ ಅವರು ನ್ಯಾಯಾಲಯದ ಸುತ್ತೋಲೆ ಹೊರಡಿಸಿದ ಆದೇಶದಲ್ಲಿ ಜಡ್ಕಲ್ ಗ್ರಾಮದ ಸರ್ವೆ ನಂಬ್ರ 67/3, 57/4, 79/1, 89/2 ಆರ್‌ಟಿಸಿ ಹೊಂದಿರುವ ಸುಮಾರು 8 ಎಕರೆ ವಿಸ್ತಿರ್ಣದ ಜಮೀನಿನಲ್ಲಿ ಕೃಷಿಯನ್ನು ಆಧಾರವಾಗಿ ಜೀವಿಸುತ್ತಿರುವ ಮಂದಿಗೆ ಕರ್ನಾಟಕ ಭೂಕಂದಾಯ ನಿಯಮಾವಳಿಗಳ ನಿಯಮ “108 ಕೆ’ ಉಲ್ಲಂಘನೆಯ ಬಗ್ಗೆ ಪ್ರಕರಣ ದಾಖಲಾಗಿದ್ದು ಈ ಪ್ರಕರಣದ ವಿಚಾರಣೆಗಾಗಿ 2017ರ ಎಪ್ರಿಲ್ 24 ರಂದು ಸಹಾಯಕ ಕಮಿಷನರ್ ಕಚೇರಿಯಲ್ಲಿ ತನಿಖೆ ನಡೆಸಲು ಹಾಜರಾಗಬೇಕೆನ್ನುವ ಆದೇಶವು ಅವರನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸಿದೆ.
ಬೈಂದೂರು ವಿಶೇಷ ತಹಶೀಲ್ದಾರರ ಆದೇಶದ ಪ್ರತಿಯಲ್ಲಿ ದಿ| ಲಚ್ಚು ನಾಯ್ಕ ಅವರ ಕುಟುಂಬದ ಸುಂದರಿ, ಯೋಗೇಂದ್ರ, ಸುರೇಂದ್ರ, ಗೋಪಾಲಕೃಷ್ಣ, ನಾಗೇಂದ್ರ ಮೊದಲಾದವರಿಗೆ ಹೊರಡಿಸಲಾದ ಆದೇಶವು ಕಸ್ತೂರಿ ರಂಗನ್ ವರದಿಯ ಮುಂದಿನ ಭಾಗವಾಗಿ ನಮ್ಮ ಭೂಮಿಯು ಮತ್ತೆ ಅರಣ್ಯ ಇಲಾಖೆಯ ಸ್ವಾಧೀನಕ್ಕೆ ಹೋಗುವುದೇ ಎಂಬ ಭೀತಿಯನ್ನುಂಟುಮಾಡಿದೆ. ನೂರಾರು ವರ್ಷಗಳಿಂದ ಆ ಭಾಗದಲ್ಲಿ ವಾಸವಾಗಿದ್ದು ನಿವಾಸವನ್ನು ಕಟ್ಟಿ ನೆಲೆಸಿರುವ ಈ ಮಂದಿಗೆ ಉಪ ಕಮಿಷನರ್ ಅವರ ಕಚೇರಿಯ ಆದೇಶವು ದಿಗಿಲು ಬಡಿದಂತಾಗಿದೆ. ಕ್ರಮಬದ್ಧವಾಗಿ ಸರಕಾರದ ಸುತ್ತೋಲೆಗೆ ಅನು ಗುಣವಾಗಿ ಅಕ್ರಮ-ಸಕ್ರಮದಲ್ಲಿ ದಾಖಲೆ ಸಮೇತ ಬಹಳಷ್ಟು ವರುಷಗಳಿಂದ ಈ ಒಂದು ಅರಣ್ಯ ಪ್ರದೇಶದ ಅಂಚಿನಲ್ಲಿ ಮರಾಠಿ ಸಮುದಾಯದವರು ವಾಸವಾಗಿರುತ್ತಾರೆ. ಆರ್ಥಿಕವಾಗಿ ಬಡತನ ರೇಖೆಗಿಂತ ಕೆಳಗಿರುವ ಈ ಮಂದಿ ತೆಂಗು, ಕಂಗು ಹಾಗೂ ಭತ್ತದ ಪೈರನ್ನು ಬೆಳೆಸಿ ಜೀವನೋಪಾಯಕ್ಕೆ ನಿಲುಕುವ ಆರ್ಥಿಕ ವ್ಯವಸ್ಥೆಯೊಡನೆ ಜೀವಿಸುತ್ತಿದ್ದರು.
ಆ ಭಾಗದಲ್ಲಿ ಕಠಿನ ಪರಿಶ್ರಮದಿಂದ ಕೃಷಿ ಭೂಮಿಯನ್ನೇ ಆಧಾರವಾಗಿಟ್ಟುಕೊಂಡು ಬದುಕಿ ನುದ್ದಕ್ಕೂ ನಾನಾ ಕಷ್ಟಕಾರ್ಪಣ್ಯಗಳೊಡನೆ ಜೀವಿಸು ತ್ತಿರುವ ಈ ಮಂದಿಗೆ ಜಿಲ್ಲಾಡಳಿತವು ಹೊರಡಿಸಿದ ಆದೇಶವು ದಿಗ್ಭ್ರಮೆಗೊಳಿಸಿದೆ. ಅವಿದ್ಯಾವಂತರಾಗಿರುವ ಈ ಮಂದಿಯ ಬದುಕಿನೊಡನೆ ಸರಸವಾಡುವುದು ಯಾವುದೇ ಇಲಾಖೆಗೆ ಶೋಭೆ ತರುವಂತದ್ದಲ್ಲ ಎಂದು ಆ ಭಾಗದ ಸಮಾಜ ಸೇವಕ ಭಾಸ್ಕರ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ.
ಇದ್ದಬಿದ್ದ ಭೂಮಿಯಲ್ಲಿ ನೇಗಿಲ ಯೋಗಿಯಾಗಿ ಹಗಲಿರುಳೆಂಬ ವಿಚಾರವನ್ನು ಪರಿಗಣಿಸದೇ ಉದ್ದಾ ನುದ್ದಕ್ಕೂ ಶ್ರಮಪಟ್ಟು ಬೆವರು ಸುರಿಸಿ ಬದುಕುತ್ತಿರುವ ಮುಗ್ಧ ಬಡ ಜನರ ಬದುಕಿನ ಮೇಲೆ ಬರೆ ಎಳೆಯಲು ಹೊರಟಿರುವ ಇಲಾಖೆಯು ಒಂದೊಮ್ಮೆ ಪರಿಸರ ಸೂಕ್ಷ್ಮ ಪ್ರದೇಶದ ಅಧಿಸೂಚನೆಯಂತೆ ಕ್ರಮ ಕೈಗೊಳ್ಳಲು ಮುಂದಾದಲ್ಲಿ ಇಲ್ಲಿನ ಅನೇಕ ಕುಟುಂಬ ಗಳು ಬೀದಿ ಪಾಲಾಗುವ ಭೀತಿ ಇದೆ.