Advertisement
ಯೋಚಿಸಿ ಸ್ನೇಹ ಬೆಳೆಸಿಸ್ನೇಹಕ್ಕೆ ವಯಸ್ಸಿನ ಮಿತಿಯಿಲ್ಲ. ಅದು ಹುಟ್ಟಿದ ಮಗುವಿನಿಂದ ಹಿಡಿದು ಕೇವಲ ಒಂದೆರಡು ತಾಸು ಪಕ್ಕದಲ್ಲಿ ಕುಳಿತು ಪ್ರಯಾಣ ಮಾಡುವ ಅಪರಿಚಿತರೊಡನೆಯೂ ಚಿಗುರೊಡೆಯಬಹುದು. ಆದರೆ, ಹುಟ್ಟುವ ಎಲ್ಲರ ಸ್ನೇಹವೂ ಪರಿಶುದ್ಧವಾಗಿರುತ್ತದೆ, ಲೈಫ್ಟೈಮ್ ಗ್ಯಾರಂಟಿ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಸ್ನೇಹದಿಂದ ಬದುಕನ್ನು ಕಟ್ಟಿಕೊಂಡವರಿದ್ದಾರೆ. ಅದೇ ಸ್ನೇಹದಿಂದ ಸರ್ವಸ್ವವನ್ನೂ ಕಳೆದುಕೊಂಡವರಿದ್ದಾರೆ. ಇದಕ್ಕೆಲ್ಲಾ ಮುಖ್ಯ ಕಾರಣ ಸ್ನೇಹಿತರ ಆಯ್ಕೆ. ಗೆಳೆತನ ಬೆಸೆಯುವಾಗ ಅತ್ಯಂತ ಸೂಕ್ಷ್ಮವಾಗಿ ಗಮನಿಸಬೇಕಾಗಿರುವುದು ಉತ್ತಮ ನಡತೆ, ಮಾತು, ಸಚ್ಚಾರಿತ್ರ್ಯ, ಒಳ್ಳೆಯ ಮನಸ್ಸು, ವಿಚಾರಶೀಲತೆ, ಸಹಕಾರ ಮನೋಭಾವ.
ಸ್ನೇಹವೆಂದರೆ ಕೇವಲ ಸಂಬಂಧವಲ್ಲ. ಅದೊಂದು ಭಾವ. ಪರಸ್ಪರ ಒಬ್ಬರಿಗೊಬ್ಬರು ಚಾರಿತ್ರ್ಯ ನಿರ್ಮಾಣ ಮಾಡಿಕೊಳ್ಳುವುದಕ್ಕಿರುವ ಅದ್ಭುತ ವೇದಿಕೆ. ಇಲ್ಲಿ ಕಾಳಜಿ ಬಹುಮುಖ್ಯ. ಈ ಕಾಳಜಿಗೆ ಹೆತ್ತವರು ತೋರುವ ಕಾಳಜಿಗಿಂತಲೂ ಒಂದು ಪಾಲು ಹೆಚ್ಚು ತೂಕವಿರುತ್ತದೆ ಎಂದರೆ ತಪ್ಪೇನಿಲ್ಲ. ನಿಮ್ಮ ಸ್ನೇಹಿತನಿಗೆ ಯಾವುದಾದರೂ ದುಶ್ಚಟಗಳಿವೆಯೇ, ಹಾಗಾದರೆ ಒಬ್ಬ ಒಳ್ಳೆಯ ಸ್ನೇಹಿತನ ಸ್ಥಾನದಲ್ಲಿ ನಿಂತುಕೊಂಡು ಅವನಿಗೆ ತಿಳಿಹೇಳಿ. ಎಷ್ಟೋ ಬಾರಿ ತಮ್ಮ ತಂದೆ-ತಾಯಿ ಮಾತನ್ನೂ ಕೇಳದವರೂ ಸ್ನೇಹಿತರ ಕಾಳಜಿಯ ಮಾತುಗಳಿಗೆ ಕಿವಿಗೊಟ್ಟು ಬದಲಾದವರಿದ್ದಾರೆ. ಆದರೆ, ಒಂದೇ ಸಮನೆ ಒತ್ತಾಯ ಮಾಡಬೇಡಿ, ನಿಂದಿಸಬೇಡಿ. ಅದರಿಂದ ನಿಮ್ಮ ಸ್ನೇಹಕ್ಕೆ ಎಳ್ಳುನೀರು ಬಿಡುವ ಸಾಧ್ಯತೆಗಳೇ ಹೆಚ್ಚು. ಕಾಲಾವಕಾಶ ನೀಡಿ, ಅವರ ಅಭ್ಯಾಸಗಳಿಂದಾಗುವ ಅಪಾಯಗಳ ಬಗೆಗೆ ಮನಮುಟ್ಟುವಂತೆ ಹೇಳಿ ಹಂತ ಹಂತವಾಗಿ ಸರಿದಾರಿಗೆ ತನ್ನಿ. ಅಸೂಯೆ ಬೇಡ
ಸ್ನೇಹವೆಂದರೆ ಜೊತೆಯಾಗಿ, ಹಿತವಾಗಿ ಜೀಕುವ ಜೋಕಾಲಿಯೇ ವಿನಃ ನಾ ಮೇಲು, ನೀ ಕೀಳು ಎನ್ನುವ ಅಸ್ಪರ್ಶ ಆಚರಣೆಯಲ್ಲ. ಇಲ್ಲಿ ಗೌರವ, ಅಂತಸ್ತು, ಪ್ರತಿಷ್ಠೆ, ಅಧಿಕಾರ ಎಲ್ಲವೂ ನಗಣ್ಯ. ಹೀಗಿರುವಾಗ ಗೆಳೆಯರ ಅಭ್ಯುದಯ ನೋಡಿ ಅಸೂಹೆಪಡುವ ಮನೋಭಾವ ಸಲ್ಲದು. ಹಾಗೆಯೇ ಅಂತಸ್ತಿನ ಅಮಲಿನಿಂದ ಸ್ನೇಹಿತರನ್ನು ಕಡೆಗಣಿಸುವುದೂ ಕೂಡದು. ನಿಜವಾದ ಸ್ನೇಹಿತನೋರ್ವನಿದ್ದರೆ ಬಹುದೊಡ್ಡ ಆಸ್ತಿ ಇದ್ದಂತೆ ಎನ್ನುವುದನ್ನು ಅರಿತು ಒಬ್ಬರಿಗೊಬ್ಬರ ಶ್ರೇಯೋಭಿವೃದ್ಧಿಗೆ ಪ್ರೋತ್ಸಾಹಿಸಿಕೊಂಡು ಮುನ್ನಡೆದರೆ ಮಾತ್ರ ಅದು ಕೊನೆಯವರೆಗೂ ಉಳಿಯಲು ಸಾಧ್ಯ.
Related Articles
ಪ್ರಥಮ ಬಿ. ಎಡ್.
ಎಸ್. ಡಿ. ಎಂ. ಬಿಎಡ್ ಕಾಲೇಜು, ಉಜಿರೆ
Advertisement