“ನಾನಿಲ್ಲಿ ಎರಡು ಶೇಡ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಒಂದು ಭರತನಾಟ್ಯ ಡ್ಯಾನ್ಸರ್ ಆಗಿ, ಇನ್ನೊಂದು ಸತ್ತ ನಂತರ ಕಾಡುವ ದೆವ್ವವಾಗಿ …’
– “ಅಮವಾಸೆ’ ಚಿತ್ರದ ನಾಯಕಿ ಧರಣಿ ತುಂಬಾ ಜೋಶ್‌ನಿಂದ ಹೀಗೆ ಒಂದೇ ಉಸಿರಿನಲ್ಲಿ ಹೇಳಿಬಿಟ್ಟರು. ಪಕ್ಕದಲ್ಲಿ ಕುಳಿತಿದ್ದ ನಿರ್ದೇಶಕ ಪ್ರಶಾಂತ್‌ಗೆ ಸಿಟ್ಟು ಸರ್ರನೆ ಏರಿದಂತಾಯಿತು. ಮುಖ ಕೆಂಪಗಾಯ್ತು. ಒಳಗೊಳಗೆ ಏನೋ ಗೊಣಗಿಕೊಂಡರು. ಇಡೀ ಸಿನಿಮಾದ ಸಾರವನ್ನ ಬಿಟ್ಟುಕೊಟ್ಟರೇ ಹೇಗೆ ಎಂಬ ಟೆನ್ಸ್ ನ್‌ನೊಂದಿಗೆ ಬೆವರು ಕಿತ್ತುಕೊಂಡು ಬಂತು.
ಬಹುತೇಕ ಎಲ್ಲಾ ನಿರ್ದೇಶಕರು ತಮ್ಮ ಪತ್ರಿಕಾಗೋಷ್ಠಿಗಳಲ್ಲಿ ತಮ್ಮ ಸಿನಿಮಾದ ಗುಟ್ಟು ಬಿಟ್ಟು ಕೊಡುವುದಿಲ್ಲ. “ತೆರೆಮೇಲೆ ನೋಡಿ’, “ಆ ಅಂಶವನ್ನು ಬಿಟ್ಟುಕೊಡುವಂತಿಲ್ಲ’ ಹೀಗೆ ಹೇಳಿ ಸಸ್ಪೆನ್ಸ್ ಕಾಯ್ದಿರಿಸುತ್ತಾರೆ. ಇದೇ ರೀತಿ ತಮ್ಮ “ಅಮವಾಸೆ’ ಚಿತ್ರದ ಬಗ್ಗೆಯೂ ನಿರ್ದೇಶಕ ಪ್ರಶಾಂತ್ ಏನನ್ನು ಬಿಟ್ಟುಕೊಡದೇ “ಇದು ಫ್ರೆಂಡ್‌ಶಿಪ್ ಹಾಗೂ ಲವ್ ಸುತ್ತ ನಡೆಯುವ ಸಿನಿಮಾ. ಒಂದಷ್ಟು ಹಾರರ್ ಅಂಶವೂ ಚಿತ್ರದಲ್ಲಿ ಬಂದು ಹೋಗುತ್ತದೆ. ಅದು ಹೇಗೆ ಎಂಬುದನ್ನು ನೀವು ತೆರೆಮೇಲೆ ನೋಡಿ’ ಎಂದಿದ್ದರು. ಆದರೆ, ನಟಿ ಧರಣಿ ಇಡೀ ಸಿನಿಮಾ ಹೇಗೆ ಹಾರರ್ ಆಗುತ್ತದೆ, ಆ ಅಂಶ ಏನು ಎಂಬು ದನ್ನು ಬಿಟ್ಟು ಕೊಡುವ ಮೂಲಕ ನಿರ್ದೇ ಶಕರ ಟೆನÒನ್‌ಗೆ ಕಾರಣ ವಾಗಿದ್ದು ಸುಳ್ಳಲ್ಲ.
ಅದು ಬಿಟ್ಟರೆ “ಅಮ ವಾಸೆ’ ಒಂದು ಫ್ರೆಂಡ್‌ಶಿಪ್, ಲವ್ ಕುರಿತಾದ ಸಿನಿಮಾವಂತೆ. ಇಲ್ಲಿ “ಅಮವಾಸೆ’ ಎಂದು ಟೈಟಲ್ ಇಡಲು ಕಾರಣವೂ ಇದೆ. ಅದು ಚಿತ್ರದ ನಾಲ್ವರ ಹೆಸರು. ಅಮರ್, ಮಹೇಶ್, ವಾಸು ಹಾಗೂ ಸೇಂದಿ ಎನ್ನುವ ಹೆಸರಿನ ಮೊದಲ ಅಕ್ಷರಗಳನ್ನು ಸೇರಿಸಿ ಚಿತ್ರಕ್ಕೆ ಟೈಟಲ್ ಇಡಲಾಗಿದೆ. ಈ ಚಿತ್ರವನ್ನು ಜಗದೀಶ ಹಾಗೂ ಡಾ.ಚಂದ್ರಶೇಖರ್ ನಿರ್ಮಿಸಿದ್ದಾರೆ.
ಡಾ.ಚಂದ್ರಶೇಖರ್ ಮೈಸೂರಿನ ಆಸ್ಪತ್ರೆಯೊಂದರಲ್ಲಿ ಮಕ್ಕಳ ಸ್ಪೆಷಲಿಸ್ಟ್. ಹೊಸಬರ ತಂಡ ಬಂದು ಕಥೆ ಹೇಳಿ, ಸಹಾಯ ಮಾಡಿ ಎಂದು ಕೇಳಿ ಕೊಂಡರಂತೆ. ಹಾಗಾಗಿ, ಈ ಸಿನಿಮಾ ನಿರ್ಮಿಸಿದರಂತೆ. “ಕತೆ ಇಷ್ಟವಾಗಿ ಈ ಸಿನಿಮಾ ಮಾಡಿದೆ. ಇತ್ತೀಚೆಗೆ ಈ ಸಿನಿಮಾ ನೋಡಿದೆ. ಇನ್ನಷ್ಟು ಚೆನ್ನಾಗಿ ಮಾಡಬಹುದಿತ್ತು ಎನಿಸಿತು. ಮುಂದೆ ಸಿನಿಮಾ ಮಾಡುವುದಾದರೆ ಆ ಬಗ್ಗೆ ಯೋಚಿಸುತ್ತೇನೆ’ ಎಂದರು. ಚಿತ್ರದಲ್ಲಿ ಅವರು ಕೂಡಾ ನಟಿಸಿದ್ದು, ವೈದ್ಯರಾಗಿಯೇ ಕಾಣಿಸಿಕೊಂಡಿದ್ದಾರೆ. ಇನ್ನೊಬ್ಬ ನಿರ್ಮಾಪಕ ಜಗದೀಶ್, “ಈ ಚಿತ್ರ ಪ್ರೀತಿ, ಸ್ನೇಹ ಹಾಗೂ ಸಂಘರ್ಷದ ಸುತ್ತ ಸುತ್ತುತ್ತದೆ’ ಎಂದರು. ಅವರು ಕೂಡಾ ಚಿತ್ರದಲ್ಲಿ ನಟಿಸಿದ್ದಾರಂತೆ.
ಚಿತ್ರಕ್ಕೆ ಹರಿಬಾಬು ಅವರ ಸಂಗೀತವಿದೆ. ಚಿತ್ರದ ರೀ-ರೆಕಾರ್ಡಿಂಗ್ ಭಿನ್ನವಾಗಿದ್ದು, ಪ್ರೇಕ್ಷಕರಿಗೆ ಹೊಸ ಫೀಲ್ ನೀಡಲಿದೆಯಂತೆ. ಅಂದಹಾಗೆ, ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ರಾಜೀವ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನಿರ್ಮಾಪಕರಾದ ಕನಕಪುರ ಶ್ರೀನಿವಾಸ್ ಹಾಗೂ ಕರಿಸುಬ್ಬು ಬಿಡುಗಡೆ ಮಾಡಿ ಶುಭಕೋರಿದರು. ನವರತ್ನ ಪ್ರಸಾದ್ ಈ ಸಿನಿಮಾದ ವಿತರಕರು.