Advertisement

ಸ್ನೇಹ, ಒಡನಾಟಕ್ಕೆ ಎಂದೂ ಸಾವಿಲ್ಲ: ಶ್ರೀದೇವಿ ಸಿ. ರಾವ್‌

07:47 PM Jan 13, 2021 | Team Udayavani |

ಮುಂಬಯಿ: ಚಂದ್ರಶೇಖರ ರಾವ್‌ ಮೆಮೋರಿಯಲ್‌ ಟ್ರಸ್ಟ್‌ ಮತ್ತು ಮುಂಬಯಿ ಚುಕ್ಕಿ ಸಂಕುಲದ ಲೇಖಕ ಕಲಾವಿದರ ಬಳಗದ ಸಹಯೋಗದೊಂದಿಗೆ ಶನಿವಾರ ಸಂಜೆ ಭಾಂಡೂಪ್‌ ಪಶ್ಚಿಮದಲ್ಲಿ ದಿ| ಚಂದ್ರಶೇಖರ ರಾವ್‌ ಜನ್ಮದಿನ ಸಂಸ್ಮರಣೆ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.

Advertisement

ಸಂಸ್ಥೆಯ ಟ್ರಸ್ಟಿ ಶ್ರೀದೇವಿ ಚಂದ್ರಶೇಖರ ರಾವ್‌ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಕಾರ್ಯಕ್ರಮದಲ್ಲಿ ಅತಿಥಿ ಅಭ್ಯಾಗತರಾಗಿದ್ದ ಕವಿ, ಕಥೆಗಾರ ಡಾ| ಕೆ. ಗೋವಿಂದ ಭಟ್‌ ಅವರು ಟ್ರಸ್ಟ್‌ನ ಕಾರ್ಯಕ್ರಮಗಳ ಸವಿನೆನಪುಗಳ ಫೋಟೋ ಆಲ್ಬಮ್‌ ಬಿಡುಗಡೆಗೊಳಿಸಿ ಮಾತನಾಡಿ, ಕವಿತೆ ಬರೆಯುವ ತುಡಿತ, ಸೆಳೆತ ಇರುವ ಹೊಸಬರು ಅಂತರ್ಜಾಲ ಆಯೋಜಿಸುವ ಕಾವ್ಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಬೇಕು.

ಈಗ ಅಂತಹ ವಿಫುಲ ಅವಕಾಶಗಳು ಸಿಗುತ್ತಿವೆ. ಚಂದ್ರಶೇಖರ ರಾವ್‌ ಅವರು ಗುಣವಂತ, ಸೃಜನಶೀಲ ವ್ಯಕ್ತಿ ಆಗಿದ್ದರು ಎನ್ನುವುದಕ್ಕೆ ಇಂತಹ ಸಂಕಷ್ಟದ ಸಮಯದಲ್ಲೂ ಅವರ ಮೇಲಿನ ಪ್ರೀತಿಯಿಂದ ಇಲ್ಲಿ ಸೇರಿದ ನೀವೇ ಸಾಕ್ಷಿ ಎಂದು ತಿಳಿಸಿ, ಇತ್ತೀಚೆಗೆ ಬಹುಮಾನ ಪಡೆದ ತಮ್ಮ ಕವಿತೆಯೊಂದನ್ನು ವಾಚಿಸಿದರು.

ಶ್ರೀದೇವಿ ಸಿ. ರಾವ್‌ ಮಾತನಾಡಿ, ಟ್ರಸ್ಟ್‌ನ ಹುಟ್ಟು, ಧ್ಯೇಯ, ಉದ್ದೇಶಗಳನ್ನು ವಿವರಿಸಿದರು. ಪತಿಯ ಆಸೆಯಂತೆ ಸಾಹಿ ತ್ಯದ ಪರಿಚಾರಿಕೆ, ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವುದಕ್ಕಾಗಿ ವಾರ್ಷಿಕವಾಗಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳುತ್ತಿದ್ದೇವೆ. ಬರಹಗಾರರ ಬಳಗಕ್ಕೆ, ಅವರ ಸ್ನೇಹ, ಒಡನಾಟಕ್ಕೆ ಎಂದೂ ಸಾವಿರುವುದಿಲ್ಲ ಎಂದು ಪತಿ ಹೇಳುತ್ತಿದ್ದರು. ಈ ಮಾತನ್ನು ನೀವು ಪ್ರತೀವರ್ಷದಂತೆ ಈ ಬಾರಿಯೂ ಪ್ರೀತಿಯಿಂದ ಬಂದು ನಿಜವಾಗಿಸಿದ್ದೀರಿ. ಭಾಗವಹಿಸಿದ ಕವಿಗಳು, ಸಾಹಿತ್ಯಾಸಕ್ತ ಬಂಧುಗಳಿಗೆ, ಚುಕ್ಕಿಸಂಕುಲದ ಕವಿ, ನಾಟಕಕಾರ ಸಾ. ದಯ, ಗೋಪಾಲ ತ್ರಾಸಿ, ಭೀಮರಾಯ ಚಿಲ್ಕಾ ಮೊದಲಾದವರ ನಿರಂತರ ಸಹಕಾರಕ್ಕೆ ತುಂಬು ಹೃದಯದಿಂದ ಕೃತಜ್ಞತೆ ಸಲ್ಲಿಸುವೆ ಎಂದರು.

ಇದನ್ನೂ ಓದಿ:ಟಾಟಾ ಆಲ್ಟ್ರೋಜ್‌ ಟರ್ಬೋ ಅನಾವರಣ : ನಾಳೆಯಿಂದ ಬುಕಿಂಗ್‌ಗೆ ಅವಕಾಶ

Advertisement

ಡಾ| ಜಿ. ಪಿ. ಕುಸುಮಾ ಅವರು ಚಂದ್ರಶೇಖರ ರಾವ್‌ ಅವರ ಕವಿತೆಗಳನ್ನು ಪ್ರಸ್ತುತಪಡಿಸಿದರು. ಆಮಂತ್ರಿತ ಕವಿಗಳಾದ ಡಾ| ಕರುಣಾಕರ ಶೆಟ್ಟಿ ಪಣಿಯೂರು, ಡಾ| ರಜನಿ ಪೈ, ಲಲಿತಾ ಪ್ರಭು ಅಂಗಡಿ, ಕುಸುಮಾ ಸಿ. ಅಮೀನ್‌, ಸರೋಜಾ ಅಮಾತಿ, ಶೋಭಾ ಶೆಟ್ಟಿ, ವಿಜಯಾ ಗೋವಿಂದ ಭಟ್‌ ಅವರು ತಮ್ಮ ಕವಿತೆಗಳನ್ನು ವಾಚಿಸಿದರು. ವಿಜಯಾ ಗೌಡ ಮತ್ತು ಸರೋಜಾ ಅಮಾತಿ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

ಪ್ರಭಾವತಿ ಶೆಣೈ, ಶೈಲಾ ಶೆಟ್ಟಿ, ಶಶಿಕಲಾ ಕತ್ರಿ ಮತ್ತಿತರರು ರಾವ್‌ ಪರಿವಾರದ ಜತೆಗಿನ ಮಿತೃತ್ವ ಬಾಂಧವ್ಯವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಟ್ರಸ್ಟ್‌ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ವಾರ್ಷಿಕ ವಿದ್ಯಾರ್ಥಿವೇತನ ವಿತರಿಸಲಾಯಿತು.

ಕವಿ, ಕಥೆಗಾರ ಗೋಪಾಲ ತ್ರಾಸಿ ಪ್ರಸ್ತಾವಿಸಿ, ಗೆಳೆಯ ಚಂದ್ರಶೇಖರ ರಾವ್‌ ಅವರೊಂದಿಗಿನ ಸಾಹಿತ್ಯಿಕ ಒಡನಾಟದ ದಿನಗಳನ್ನು ಸ್ಮರಿಸಿ, ಚುಕ್ಕಿಸಂಕುಲದ ಆರಂಭದ ದಿನಗಳ ಚಟುವಟಿಕೆಗಳನ್ನು ಮೆಲುಕು ಹಾಕಿದರು. ಚಂದ್ರಶೇಖರ ರಾವ್‌ ಅವರ ಒಂದು ಹರಟೆ ಬರಹವನ್ನು ಪ್ರಸ್ತುತ ಪಡಿಸಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

ಚಿತ್ರ-ವರದಿ: ರೊನಿಡಾ ಮುಂಬಯಿ

Advertisement

Udayavani is now on Telegram. Click here to join our channel and stay updated with the latest news.

Next