ಮಾನವ ಸಂಘಜೀವಿ. ಹಾಗೆಯೇ ಬುದ್ಧಿಜೀವಿ ಕೂಡ. ಈ ಸುಂದರ ಗ್ರಹದಲ್ಲಿ ಎಂದಿಗೂ ಅವನು ಒಬ್ಬಂಟಿಯಾಗಿ ಉಳಿ ಯಲು ಸಾಧ್ಯವಿಲ್ಲ. ಬಾಲ್ಯದಲ್ಲಿ ತಂದೆ- ತಾಯಿ, ಯೌವನದಲ್ಲಿ ಪತಿ-ಪತ್ನಿ, ಮಕ್ಕಳು, ಮುಪ್ಪಿನಲ್ಲಿ ಬೆಳೆದು ನಿಂತ ತನ್ನ ಮಕ್ಕಳೊಂದಿಗೆ ಜೀವನ ನಡೆಸುತ್ತಾನೆ. ಬದುಕಿನ ಈ ಕಾಲಘಟ್ಟದಲ್ಲಿ ಕೇವಲ ರಕ್ತ ಸಂಬಂಧಿಗಳ ಜತೆ ಮಾತ್ರವಲ್ಲದೆ ಇನ್ನೂ ಅನೇಕರೊಂದಿಗೆ ತನ್ನ ಮನದ ಭಾವನೆ ಗಳನ್ನು ವಿನಿಮಯಿಸಿಕೊಳ್ಳಲು ಬಯ ಸುತ್ತಾನೆ. ಬಾಂಧವ್ಯವನ್ನು ಬೆಳೆಸಲು ಅಪೇ ಕ್ಷಿಸುವನು. ಆದರೆ ಅದರಲ್ಲಿ ಆಪ್ತರಾಗು ವವರು ಕೆಲವರು ಮಾತ್ರ. ಆಪ್ತಮಿತ್ರ ರಾಗುವುದು ಬೆರಳೆಣಿಕೆಯಷ್ಟು.
ಹೌದು ಸ್ನೇಹಿತರೇ, ಮನಕ್ಕೆ ಹಿತವಿರು ವವರು ಸ್ನೇಹಿತನಾಗುತ್ತಾನೆ, ಎಳೆಎಳೆ ಯಾಗಿ ಬಾಂಧವ್ಯ ಬೆಸೆದವನೇ ಗೆಳೆಯ ನಾಗುತ್ತಾನೆ. ಸಮಾನ ವಯಸ್ಸಿನವ ರೊಂದಿಗೆ ನಮ್ಮ ಆಲೋಚನೆ ಮತ್ತು ಅಭಿಪ್ರಾಯಗಳನ್ನು ಹೇಳಿಕೊಳ್ಳಲು ಹೃದಯಕ್ಕೆ ಹತ್ತಿರವಿರುವವವರು, ಚಡ್ಡಿ ದೋಸ್ತಿಗಳು ಬೇಕೇ ಬೇಕು. ಹಾಗಾ ದರೆ ನಮ್ಮ ಜೀವನದಲ್ಲಿ ಎಂತಹ ವಿಶೇಷ ಗುಣಗಳುಳ್ಳ ವ್ಯಕ್ತಿಯನ್ನು ಸ್ನೇಹಿತನನ್ನಾಗಿ ಆರಿಸಿಕೊಳ್ಳಬೇಕು ಎಂಬುದು ಗಮನಾರ್ಹ ಸಂಗತಿ. ಹೊಂದಿರುವ ಆಸ್ತಿ, ಅಂತಸ್ತುಗಳ ಆಧಾರದ ಮೇಲೆಯೋ?, ಬಾಹ್ಯ ಸೌಂದರ್ಯವನ್ನು ನೋಡಿಯೋ?, ಹೃದಯ ವೈಶಾಲ್ಯದ ಮೇಲೋ? ಇತ್ಯಾದಿಗಳ ಆಯ್ಕೆ ಪಟ್ಟಿ ಬೆಳೆಯುತ್ತಾ ಹೋಗಬಹುದು. ಹೊಗಳುಭಟನಂತೆ ಚೆನ್ನಾಗಿ ಹೊಗಳಿ ಅಟ್ಟಕ್ಕೇರಿಸುವವನು ಮಿತ್ರನಾಗಲಾರ. ಸುಮವಾಗಿ ಅರಳಿ ನಮ್ಮ ಬದುಕು ಘಮಿಸುವಂತೆ ಮಾಡು ವವನೇ ನಿಜವಾದ ಸ್ನೇಹಬಂಧು. ನಮ್ಮ ಭಾವನೆಗಳನ್ನು ಪುಷ್ಟೀಕರಿಸುವ, ತಪ್ಪುಗಳನ್ನು ತಿದ್ದಿ ಸರಿದಾರಿಯನ್ನು ತೋರಿಸುವ, ಸ್ವಾರ್ಥಿಯಾಗಿರದೆ ಪ್ರೀತಿ- ವಾತ್ಸಲ್ಯ, ತ್ಯಾಗ ಇತ್ಯಾದಿ ಸದ್ಗುಣಗಳ ಖನಿಯಾಗಿರುವವರನ್ನು ಖಂಡಿತವಾಗಿಯೂ ಸ್ನೇಹಿತರನ್ನಾಗಿ ಸ್ವೀಕರಿಸಬೇಕು. ಅವರ ಆದರ್ಶ ಗುಣಗಳು ನಮ್ಮ ವ್ಯಕ್ತಿತ್ವವನ್ನು ಹೊಳಪಿಸಬೇಕು. ಉತ್ತಮ ಯಶಸ್ಸು ನಿಜವಾಗಿಯೂ ಒಳ್ಳೆಯ ಸ್ನೇಹದಿಂದ ಮಾತ್ರ ಲಭಿಸುತ್ತದೆ.
ಸ್ನೇಹಿತರೆಂದರೆ ಒಬ್ಬ ವ್ಯಕ್ತಿಗೆ ಮಾತ್ರ ಸೀಮಿತವಲ್ಲ. ಒಂದೊಳ್ಳೆ ಜ್ಞಾನವನ್ನು ಹೊತ್ತಿರುವ ಹೊತ್ತಗೆಯು ಉತ್ತಮ ಗೆಳೆಯ ಕೂಡ ಹೌದು. ತನ್ಮೂಲಕ ನಮ್ಮ ಜ್ಞಾನ ವಿಸ್ತಾರವಾಗುತ್ತದೆ. ಮನೆಯಲ್ಲಿ ನಾವು ಸಾಕುವ ಪ್ರೀತಿಯ ಪ್ರಾಣಿ, ಪಕ್ಷಿಗಳನ್ನು ನಮ್ಮ ಸ್ನೇಹಿತರೆಂದು ಭಾವಿಸಿ ಪ್ರೀತಿಸುತ್ತೇವೆ. ನಮ್ಮ ಹವ್ಯಾಸಗಳಲ್ಲಿ ಒಂದಾದ ಗಾರ್ಡನಿಂಗ್ ಕೂಡ ನಮ್ಮ ಮನ ಸಂತೋಷಪಡಿಸುವ ಸ್ನೇಹಿತ ನೆಂದರೆ ತಪ್ಪಲ್ಲ.
ಸೆಗಣಿಯ ಜತೆ ಮುದ್ದಾಟಕ್ಕಿಂತ ಗಂಧದ ಜತೆ ಗುದ್ದಾಟವೇ ಲೇಸು. ಆ ಸುವಾಸನೆ ನಮ್ಮ ಮೈ ಸೋಕಿ ಎಲ್ಲೆಡೆ ಪಸರಿಸುತ್ತದೆ. ಒಬ್ಬ ಒಳ್ಳೆ ಗೆಳೆಯನನ್ನು ಹೊಂದುವುದು ಮೊಸರನ್ನು ಕಡೆದಾಗ ಸಿಗುವ ಬೆಣ್ಣೆಯಂತೆ. ತಂದೆ-ತಾಯಿ ಮಾತು ಕೇಳದ ಕೆಲವರು ಸ್ನೇಹಿತನ ಮಾತನ್ನು ಮೀರುವುದಿಲ್ಲ. ಕೃಷ್ಣ- ಕುಚೇಲರ ಮಿತ್ರತ್ವ ಸ್ನೇಹಕ್ಕೆ ಉತ್ತಮ ನಿದರ್ಶನ. ಹುಟ್ಟಿದ ಮಗುವು ಸಮು ದಾಯದ ಜತೆ ಕೈ ಸೇರಿಸುವಾಗ, ತನ್ನ ಜ್ಞಾನವು ವಿಸ್ತರಿಸಿದಂತೆ ಫ್ರೆಂಡ್ ಎಂಬ ಪದ ಪ್ರಯೋಗಿಸುವುದು. ಶಾಲೆಯಲ್ಲಿ, ನೆರೆಹೊರೆಯಲ್ಲಿ ಹಾಗೂ ಎಲ್ಲೆಡೆ ತನ್ನ ಗೆಳೆಯನಿಗಾಗಿ ಹುಡುಕುತ್ತದೆ. ಅಲ್ಲಿಂದ ಶುರುವಾಗಿ ಜೀವಿತದ ಕೊನೆ ತನಕ ಆ ವ್ಯಕ್ತಿ ತನಗೆ ಮ್ಯಾಚ್ ಆಗುವಂಥ ಸ್ನೇಹಿತರನ್ನು ಸಂಪಾದಿಸುತ್ತಾನೆ.
ಗೆಳೆತನ ಅಥವಾ ಸ್ನೇಹ ಆಯಾಯ ವ್ಯಕ್ತಿಯ ಆಯ್ಕೆ, ಅಭಿಲಾಷೆಗೆ ತಕ್ಕುದಾಗಿ ರುತ್ತದೆ. ಸ್ನೇಹಿತರು ಸಜ್ಜನರೂ ಆಗಿರ ಬಹುದು, ದುರ್ಜನರೂ ಆಗಿರ ಬಹುದು. ಆದರೆ ಸ್ನೇಹಿತನ ಗುಣಾವ ಗುಣಗಳನ್ನು ಅರಿತುಕೊಳ್ಳುವ ತಾಳ್ಮೆ, ಅರಿವು ನಮ್ಮಲ್ಲಿರಬೇಕು. ನಮ್ಮ ಜೀವನದ ಪಥವನ್ನು ಬದಲಿಸುವ ಶಕ್ತಿಯನ್ನು ಸ್ನೇಹ ಹೊಂದಿರುತ್ತದೆ. ಈ ಕಾರಣದಿಂದಾಗಿ ಸ್ನೇಹಿತರ ಆಯ್ಕೆ ವೇಳೆ ನಾವು ಬುದ್ಧಿಗೆ ಒಂದಿಷ್ಟು ಸಾಣೆ ಹಿಡಿದುಕೊಳ್ಳುವುದು ಶ್ರೇಯಸ್ಕರ.
ಪ್ರಪಂಚದಲ್ಲಿ ಸಂಬಂಧಗಳನ್ನು ಮೀರಿದ ಅನುಬಂಧ ಎಂದರೆ ಅದು ಸ್ನೇಹ ಮಾತ್ರ. ಸ್ನೇಹಿತನನ್ನು ಹೊಂದಿರದ ಜೀವನ ಖಂಡಿತವಾಗಿಯೂ ಅಪೂರ್ಣ. ಸ್ನೇಹವೆಂಬ ಬಂಧನ ನಮ್ಮಲ್ಲಿ ಭದ್ರ ವಾಗಿರಲಿ. ಎಲ್ಲರೂ ಒಳ್ಳೆಯ ಸ್ನೇಹ ಜೀವಿಗಳಾಗೋಣ.
- ಗಾಯತ್ರಿ ನಾರಾಯಣ ಅಡಿಗ, ಬೈಂದೂರು