Advertisement

ವಿಶ್ವ ಶಾಂತಿಗೆ ಸ್ಫೂರ್ತಿ ಸ್ನೇಹಿತರ ದಿನ

10:49 PM Jul 31, 2021 | Team Udayavani |

ಬದುಕಿನ ಕತ್ತಲೆಯಲ್ಲೂ ಜತೆಯಾಗಿ ಇರುವ, ಸಂವಹನ ಇಲ್ಲದೆಯೂ ಅರ್ಥ ಮಾಡಿಕೊಳ್ಳುವ, ನಗುವಿನ ಹಿಂದಿರುವ ನೋವನ್ನು ತಿಳಿದಿರುವ ಸ್ನೇಹಿತರು ಜೀವನದ ಸರ್ವಶ್ರೇಷ್ಠ ಕೊಡುಗೆ. ಪ್ರೀತಿಯ ಇನ್ನೊಂದು ಪದವೇ ಸ್ನೇಹ. ಉತ್ತಮ ಸ್ನೇಹಿತ ನಮ್ಮ ದೈಹಿಕ, ಮಾನಸಿಕ ಆರೋಗ್ಯಕ್ಕೆ ಬೇಕಾದ ಚಿಕಿತ್ಸಕನಾಗಿರುತ್ತಾನೆ. ಹೀಗಾಗಿ ಸ್ನೇಹ ದಿನವನ್ನು ವಿಶ್ವಾದ್ಯಂತ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.

Advertisement

ರಕ್ತ ಸಂಬಂಧಿಯಲ್ಲದಿದ್ದರೂ ಜಾತಿ, ಧರ್ಮದ ಭೇದವಿಲ್ಲದ ಬಲವಾದ ಸಂಬಂಧ ಮತ್ತು ಪ್ರೀತಿಯ ಪ್ರಾಮುಖ್ಯವನ್ನು ಸಾರುವ ಅಂತಾರಾಷ್ಟ್ರೀಯ ಸ್ನೇಹಿತರ ದಿನವನ್ನು ಭಾರತದಲ್ಲಿ ಪ್ರತೀ ವರ್ಷ ಆಗಸ್ಟ್‌ ತಿಂಗಳ ಮೊದಲ ರವಿವಾರ ಅಂದರೆ ಈ ಬಾರಿ ಆ. 1ರಂದು ಆಚರಿಸಲಾಗುತ್ತಿದೆ.

ಇತಿಹಾಸ: ಹಾಲ್ಮಾರ್ಕ್‌ ಕಾರ್ಡ್‌ಗಳ ಸಂಸ್ಥಾಪಕ ಜಾಯ್ಸ ಹಾಲ್‌ ಅವರು 1930ರಲ್ಲಿ ಆ. 2ರಂದು ತಮ್ಮ ಪ್ರೀತಿಪಾತ್ರರನ್ನು ಒಗ್ಗೂಡಿಸಿ ಸಂಭ್ರಮಾಚರಣೆ ಮಾಡಿದರು. ಆದರೆ ಅನಂತರ ಇದು ಅವರ ಶುಭಾಶಯ ಪತ್ರಗಳನ್ನು ಮಾರಾಟ ಮಾಡಲು ಒಂದು ಗಿಮಿಕ್‌ ಎಂದುಕೊಂಡ ಯುನೈಟೆಡ್‌ ಸ್ಟೇಟ್ಸ್‌ನ

ಜನರು ಬಳಿಕ ಇದನ್ನು ಮರೆತು ಬಿಟ್ಟರು. ಆದರೆ 1935ರಲ್ಲಿ ಯುಎಸ್‌ ಕಾಂಗ್ರೆಸ್‌ ಆಗಸ್ಟ್‌ ತಿಂಗಳ ಮೊದಲ ರವಿವಾರದಂದು ಸ್ನೇಹಿತರ ದಿನವೆಂದು ಆಚರಿಸಲು ಅನುಮೋದನೆ ನೀಡಿತು. ಆದರೆ ಏಷ್ಯಾದ ವಿವಿಧ ಭಾಗಗಳಲ್ಲಿ ವಿಶ್ವ ಸ್ನೇಹ ದಿನವನ್ನು ಈಗಲೂ ಆ. 2ರಂದು ಆಚರಿಸಲಾಗುತ್ತದೆ.

1958ರ ಜು. 30ರಂದು ಅಂತಾರಾಷ್ಟ್ರೀಯ ಸ್ನೇಹ ದಿನ ಆಚರಿಸಲು ಕ್ರುಸೇಡ್‌ ಪ್ರಸ್ತಾವನೆ ಮುಂದಿಟ್ಟಿತು. ಇದು ಸ್ನೇಹದ ಮೂಲಕ ಶಾಂತಿಯುತ ಸಂಸ್ಕೃತಿಯನ್ನು ಬೆಳೆಸುವ ಅಭಿಯಾನವಾಗಿದೆ. ಪರಾಗ್ವೇಯ ಪೋರ್ಟ್‌ ಪಿನಾಸ್ಕೋ ಪಟ್ಟಣದಲ್ಲಿ 1958ರ ಜು. 20ರಂದು ಡಾ| ರಾಮನ್‌ ಆರ್ಟೆಮಿಯೊ ಬ್ರಾಚೊ ಅವರಿಗೆ ತಮ್ಮ ಸ್ನೇಹಿತರೊಂದಿಗೆ ಊಟಕ್ಕೆ ಕುಳಿತಿದ್ದಾಗ ಲಿಂಗ, ಜನಾಂಗ, ಧರ್ಮವನ್ನು ಲೆಕ್ಕಿಸದೆ ಮಾನವನ ನಡುವೆ ಸ್ನೇಹ ಮತ್ತು ಸಹಭಾಗಿತ್ವವನ್ನು ಉತ್ತೇಜಿಸುವ ಜಾಗತಿಕ ಸ್ನೇಹ ದಿನವನ್ನು ಆಚರಿಸುವ ಆಲೋಚನೆಯು ಹುಟ್ಟಿತು.

Advertisement

ಅಂತಿಮವಾಗಿ 2011ರ ಎ. 27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಜು. 30 ಅನ್ನು ಅಧಿಕೃತ ಅಂತಾರಾಷ್ಟ್ರೀಯ ಸ್ನೇಹ ದಿನವನ್ನಾಗಿ ಘೋಷಿಸಿತು. ಅಸೆಂಬ್ಲಿಯು ಎಲ್ಲ ಸದಸ್ಯ ರಾಷ್ಟ್ರಗಳನ್ನು ತಮ್ಮದೇ ಪದ್ಧತಿಗಳಿಗೆ ಅನುಗುಣವಾಗಿ ಆಚರಿಸುವಂತೆ ಹೇಳಿದ್ದರಿಂದ ಭಾರತ, ಬಾಂಗ್ಲಾದೇಶ, ಮಲೇಷ್ಯಾ, ಯುಎಇ, ಯುಎಸ್‌ನಲ್ಲಿ ಮಾತ್ರ ಆಗಸ್ಟ್‌ ತಿಂಗಳ ಮೊದಲ ರವಿವಾರದಂದು ಅಂತಾರಾಷ್ಟ್ರೀಯ ಸ್ನೇಹಿತರ ದಿನ ಆಚರಿಸಲಾಗುತ್ತದೆ.  ಬರ್ಲಿನ್‌, ಓಹಿಯೋದಲ್ಲಿ ಎ. 8ರಂದು, ಅರ್ಜೆಂಟೀನಾ, ಮೆಕ್ಸಿಕೋದಲ್ಲಿ ಜು. 14ರಂದು, ಬ್ರೆಜಿಲ್‌ನಲ್ಲಿ ಜು. 20ರಂದು ಆಚರಿಸಲಾಗುತ್ತದೆ.

ಶ್ರೀಕೃಷ್ಣ ವ್ಯಕ್ತಿತ್ವ ಮತ್ತು ಸ್ನೇಹ :

ಸ್ನೇಹವನ್ನು ಒಂದೇ ಶಬ್ದದಲ್ಲಿ ವಿವರಿಸಲು ಸಾಧ್ಯವೇ ಇಲ್ಲ. ಸ್ನೇಹ ಎಂದಾಗಲೆಲ್ಲ ನಮ್ಮ ಕಣ್ಣ ಮುಂದೆ ಹಾದುಹೋಗುವುದು ಕೃಷ್ಣನ ವ್ಯಕ್ತಿತ್ವ. ಶ್ರೀಕೃಷ್ಣನ ಪ್ರತಿಯೊಂದೂ ಗುಣವೂ ಸ್ನೇಹದ ಒಂದೊಂದು ರೂಪಗಳು ಎನ್ನಬಹುದೇನೋ. ಶ್ರೀಕ್ಷಣನಲ್ಲಿ ನಾವು ಸ್ನೇಹತ್ವದ ಹಲವು ಮಜಲುಗಳನ್ನು ಕಾಣಬಹುದಾಗಿದೆ. ವಾತ್ಸಲ್ಯ, ಪ್ರೇಮ, ಸಹೋದರತ್ವ, ರಕ್ಷಣೆ, ಶಿಕ್ಷೆ, ಮಾರ್ಗದರ್ಶನ, ಅನ್ಯೋನ್ಯತೆ, ಕೀಟಲೆ…ಹೀಗೆ ಈ ಪಟ್ಟಿ ಸಾಗುತ್ತಾ ಹೋಗುತ್ತದೆ. ಇವೆಲ್ಲವುಗಳ ಸಮ್ಮಿಲನವೇ ಸ್ನೇಹ. ಇನ್ನು ಗೆಳೆತನ ಎಂದಾಗಲೆಲ್ಲ ಮಹಾಭಾರತದ ಇನ್ನೊಂದು ಪ್ರಮುಖ ಪಾತ್ರವಾದ ಕರ್ಣನನ್ನು ಮರೆಯಲು ಸಾಧ್ಯವೇ ಇಲ್ಲ. ಗೆಳೆಯನಿಗಾಗಿ ತನ್ನ ಸಹೋದರರ ವಿರುದ್ಧವೇ ತೊಡೆ ತಟ್ಟಿದವ ಈತ.

ಆಚರಣೆ ಹೇಗೆ?:

ಏಷ್ಯಾ, ಅರ್ಜೆಂಟೀನಾ, ಪೆರುಗ್ವೇ, ಪೆರು, ಇಂಡಿಯಾ, ಫಿನ್‌ಲ್ಯಾಂಡ್‌, ಎಸ್ಟೋನಿಯಾ, ಬ್ರೆಜಿಲ್‌, ಯುಎಇ, ಯುಎಸ್‌ ಸಹಿತ ಹಲವಾರು ದೇಶಗಳಲ್ಲಿ ವಿಶ್ವ ಸ್ನೇಹಿತರ ದಿನವನ್ನು ಶುಭಾಶಯ ಪತ್ರಗಳು, ಉಡುಗೊರೆಗಳ ವಿನಿಮಯ, ಸ್ನೇಹಿತರ ಕೈಗೆ ಫ್ರೆಂಡ್‌ಶಿಪ್‌ ಬ್ಯಾಂಡ್‌ ಕಟ್ಟುವುದು, ಅತ್ಯಮೂಲ್ಯ ಸಮಯವನ್ನು ಅವರಿಗಾಗಿ ಮೀಸಲಿಡುವ ಮೂಲಕ ಆಚರಿಸಲಾಗುತ್ತದೆ.

ಆಚರಣೆಗಳು ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ, ಒಂದಷ್ಟು ಸಂತೋಷ, ನೆಮ್ಮದಿಯನ್ನು ತುಂಬಿ ಕೊಡುತ್ತವೆ. ಸ್ನೇಹ ಎಂದೆಂದಿಗೂ ಚಿರಾಯು. ಈಂದಿನ ಆಧುನಿಕ ಯುಗದಲ್ಲಿ ನವಮಾಧ್ಯಮಗಳಾದ ಸಾಮಾಜಿಕ ಜಾಲ ತಾಣಗಳು ಸ್ನೇಹವನ್ನು ಮತ್ತಷ್ಟು ಭದ್ರಗೊಳಿಸಿವೆ. ಕಳೆದ ವರ್ಷದಂತೆ ಈ ಬಾರಿಯೂ ಕೊರೊನಾ ಮುನ್ನೆಚ್ಚರಿಕೆಗಳನ್ನು ಪಾಲಿಸಿಕೊಂಡು ಸ್ನೇಹಿತರ ದಿನವನ್ನು ಆಚರಿಸೋಣ. ಆ ಮೂಲಕ ನಮ್ಮ ಅಮೂಲ್ಯವಾದ ಸಮಯದಲ್ಲಿ ಒಂದಿಷ್ಟು ಹೊತ್ತನ್ನು ಸ್ನೇಹಿತರಿಗಾಗಿ ಮೀಸಲಿಡೋಣ.

ಉದ್ದೇಶ :

ವಿಶ್ವ ಸ್ನೇಹಿತರ ದಿನಾಚರಣೆಯ ಮುಖ್ಯ ಉದ್ದೇಶ ಜನರ ನಡುವೆ ಸ್ನೇಹವಿದ್ದರೆ ಸಮುದಾಯಗಳ ನಡುವೆ ಬಾಂಧವ್ಯ ವೃದ್ಧಿಯಾಗುತ್ತದೆ. ವಿಶ್ವದ ಎಲ್ಲ ದೇಶಗಳ ನಡುವೆ ಉತ್ತಮ ಬಾಂಧವ್ಯ ವೃದ್ಧಿ, ವಿಶ್ವ ಶಾಂತಿಗೆ ಸ್ಫೂರ್ತಿಯಾಗುತ್ತದೆ ಎಂಬುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next