ಮಾನವನನ್ನು ಸೃಷ್ಟಿ ಮಾಡಿದ ದೇವರು ಪ್ರೀತಿ, ಸ್ನೇಹ, ಕರುಣೆ, ಮಮಕಾರ, ದಯೆಗಳನ್ನು ಕೂಡ ಜಗತ್ತಿನಲ್ಲಿ ಮೂಡಿಸಿದ್ದಾನೆ. ಮನುಷ್ಯನಲ್ಲಿ ಅವು ಪ್ರತಿಫಲನಗೊಂಡಿವೆ. ದೇವರ ಸೃಷ್ಟಿಯೆಂದು ಸಮಗ್ರವಾಗಿ ಕರೆಯುವುದು ಇದನ್ನೇ. ಅದರಲ್ಲಿಯೂ ಸ್ನೇಹದ ಸೊಗಸೇ ಬೇರೆ.
ಸ್ನೇಹಕ್ಕೆ ರಕ್ತ ಸಂಬಂಧದ ಆವಶ್ಯಕತೆ ಇಲ್ಲ. ಜಾತಿ, ಕುಲ, ಮತ, ಧರ್ಮಗಳ ಅರಿವಿಲ್ಲ. ಭಾರತವನ್ನು ಹೇಗೆ ನಾವು ಜಾತ್ಯಾತೀತ ರಾಷ್ಟ್ರವೆಂದು ಕರೆಯುತ್ತೇವೆಯೋ ಅದಕ್ಕೆ ಪೂರಕವಾಗಿ ಸ್ನೇಹ ಎಂಬುದು ಜಾತ್ಯತೀತವಾದ ಒಂದು ಸಂಬಂಧ. ಸ್ನೇಹದಿಂದಾಗಿ ಜಾತಿಬೇಧ ಮುರಿದು ಬೀಳುತ್ತದೆ. ಧರ್ಮಗಳ ಅಂತರ ತಪ್ಪಿಹೋಗುತ್ತದೆ. ಸ್ನೇಹಕ್ಕೆ ಸಿರಿವಂತಿಕೆ ಅಡ್ಡಿಯಲ್ಲ , ಬಡತನ ತೊಡಕಲ್ಲ. ವಯಸ್ಸಿನ ಮಿತಿಯೂ ಇಲ್ಲ. ಹುಡುಗ-ಹುಡುಗಿ ಎಂಬ ಲಿಂಗಭೇದದ ಸಮಸ್ಯೆ ಇಲ್ಲ. ಎಲ್ಲರೂ ಒಂದೇ ಎಂಬ ಭಾವನೆ ಸ್ನೇಹ ಭಾವದ ಆಂತರ್ಯದಲ್ಲಿರುತ್ತದೆ.
ವಿದ್ಯಾರ್ಥಿ ಜೀವನವಂತೂ ಸ್ನೇಹಾಚಾರದ ಸುವರ್ಣಕಾಲ. ಇಡೀ ಪ್ರಪಂಚವನ್ನೇ ತನ್ನತ್ತ ಸೆಳೆಯುವ ಶಕ್ತಿಯನ್ನು ಸ್ನೇಹಭಾವ ಹೊಂದಿದೆ. ಸ್ನೇಹಜೀವಿಗೆ ಎಂದಿಗೂ ಪರಕೀಯವಾದ ಭಾವವಿಲ್ಲ. ಪ್ರತಿಯೊಂದು ಮಗುವು ತಾನು ವಿದ್ಯಾಭ್ಯಾಸವನ್ನು ಕಲಿಯಲೆಂದು ಶಾಲೆಗೆ ಹೋದಾಗ ಅಲ್ಲಿ ತನ್ನ ವಿದ್ಯಾಭ್ಯಾಸದ ಜೊತೆಗೆ ಸ್ನೇಹ, ಪ್ರೀತಿ, ಕರುಣೆ, ದಯೆಯಂತಹ ಎಲ್ಲ ಗುಣಗಳನ್ನು ಕಲಿತುಕೊಳ್ಳುತ್ತದೆ. ಒಳ್ಳೆಯ ಸ್ನೇಹಿತರನ್ನು ಹೊಂದಬೇಕು ಎಂಬ ಭಾವವನ್ನು ಹೊಂದುತ್ತದೆ.
ಇನ್ನು ಕಾಲೇಜು ಜೀವನದಲ್ಲಂತೂ ಸ್ನೇಹವೆಂಬುದು ಹಾಯಿದೋಣಿಯಂತೆ. ಸ್ನೇಹಿತರೆಲ್ಲ ಗುಂಪು ಗುಂಪುಗಳಾಗಿ ಓಡಾಡುತ್ತಾರೆ, ಹೊಟೇಲ…ಗಳಿಗೆ ಹೋಗುತ್ತಾರೆ, ಸಿನೆಮಾ ನೋಡುತ್ತಾರೆ, ಬೈಕ್ ರೈಡ್ ಮಾಡುತ್ತಾರೆ, ಫುಟ್‌ಪಾತ್ ಅಂಗಡಿಗಳ ಮುಂದೆ ಕುಳಿತು ತಿನ್ನುವುದು- ಇವೆಲ್ಲವೂ ಕ್ಯಾಂಪಸ್ ಕಥೆಗಳಂತೆ ಮುಂದುವರೆಯುತ್ತದೆ. ಈ ಸ್ನೇಹ ಕೆಲವೊಮ್ಮೆ ಪ್ರೀತಿಯೆಂಬ ನದಿಯಾಗಿ ಬದಲಾಗುತ್ತದೆ. ಸ್ನೇಹ ವಿಶಾಲವಾದ ಸಮುದ್ರವಾಗಿದ್ದರೆ, ಪ್ರೀತಿ ಆ ಸಮುದ್ರವನ್ನು ಸೇರುವ ನದಿಯಾಗಿರುತ್ತದೆ. ಸ್ನೇಹ-ಪ್ರೀತಿ ಎರಡೂ ನಮ್ಮ ಕಣ್ಣುಗಳು.
ಪ್ರೀತಿಯಲ್ಲಿ ವಿರಸ, ಅನುಮಾನ, ಅವಮಾನಗಳು ಸಾಮಾನ್ಯ. ಕೆಲವೊಮ್ಮೆ ಇದು ಜಗಳಕ್ಕೂ ಕಾರಣವಾಗುತ್ತದೆ. ಆದರೆ, ಯುವಜೀವನದ ವಿರಸ ತಾತ್ಕಾಲಿಕ. ಮತ್ತೆ ಅದು ಸಂಧಾನದಲ್ಲಿ ಮುಗಿಯುತ್ತದೆ. ಕಾಲೇಜು ಮುಗಿಸಿ ಡಿಗ್ರಿ ವಿದ್ಯಾಭ್ಯಾಸಕ್ಕೆ ಹೋಗುವಾಗ ಸ್ನೇಹಿತರೊಳಗೆ ಫೋನ್ ನಂಬರ್‌ಗಳು ವಿನಿಮಯಗೊಳ್ಳುತ್ತವೆ. ಬಳಿಕ ದಿನನಿತ್ಯ ಚಾಟಿಂಗ್ ಸಹ ಆರಂಭವಾಗುತ್ತದೆ.
ಜಗತ್ತಿನಲ್ಲಿ ನಿಜ ಸ್ನೇಹವೆಂಬ ಸಿಹಿತಿಂಡಿ ಸಿಕ್ಕರೆ ಈ ಜಗತ್ತು ಸಕ್ಕರೆಯ ಪಾಕದಲ್ಲಿಟ್ಟ ಜಾಮೂನಿನ ಹಾಗೇಯೇ ಸಿಹಿಯಾಗಿ ಇರುತ್ತದೆ. ಈ ಸ್ನೇಹ ಎಂಬ ತಂಗಾಳಿಗೆ ಯಾವ ರೂಪವೂ ಇಲ್ಲ !
ಎ. ಸಿ. ಶೋಭಾ
ಪತ್ರಿಕೋದ್ಯಮ ವಿದ್ಯಾರ್ಥಿನಿ, ಎಂ.ಪಿ.ಎಂ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ