Advertisement
ಹೌದು, ಸ್ಮಶಾನಗಳಲ್ಲೂ ಸ್ವತ್ಛತೆ ಕಾಪಾಡಬೇಕು. ಮೂಲ ಸೌಕರ್ಯ ಒದಗಿಸಬೇಕು ಎಂದು ರಾಜಸ್ಥಾನ ಮೂಲದವರು ಮುಂದೆ ಬಂದಿದ್ದಾರೆ. ವಿಶೇಷವೆಂದರೆ ಅವರು ಈ ಕೆಲಸ ಮಾಡುತ್ತಿರುವುದು ಚಾಮರಾಜಪೇಟೆ ಟಿ.ಆರ್.ಮಿಲ್‌ನ ಹಿಂದೂ ರುದ್ರಭೂಮಿಯಲ್ಲಿ. ಬೆಂಗಳೂರಿನ ವಿಜಯನಗರದ ರಾಜಸ್ಥಾನಿ ಮಿತ್ರ ಮಂಡಲದವರು ಈ ಕಾರ್ಯ ಕೈಗೊಂಡಿದ್ದಾರೆ.
Related Articles
Advertisement
ಅದರಂತೆ ಚಾಮರಾಜಪೇಟೆ ವಾರ್ಡ್‌ನ ಪಾಲಿಕೆ ಸದಸ್ಯೆ ಕೊಕಿಲಾ ಚಂದ್ರಶೇಖರ್ ಅವರನ್ನು ಭೇಟಿಯಾಗಿ ತಮ್ಮ ಯೋಜನೆ ಬಗ್ಗೆ ವಿವರಿಸಿದರು. ಇದಕ್ಕೆ ಸದಸ್ಯೆ ಸಮ್ಮತಿಸಿದ ಕೂಡಲೇ ಕಾರ್ಯಪ್ರವೃತ್ತರಾದ ಪದಾಧಿಕಾರಿಗಳು, ಕೆಲವೇ ತಿಂಗಳಲ್ಲಿ ನಾಲ್ಕು ಶೌಚಾಲಯ ಹಾಗೂ 100 ಜನ ಕುಳಿತುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ. ಇದು ಸ್ಮಶಾನದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ಮಾತ್ರವಲ್ಲದೆ ಅಲ್ಲಿ ಬರುವವರ ಮೆಚ್ಚುಗೆಗೆ ಪಾತ್ರವಾಗಿದೆ.
ವಿಜಯನಗರದ ರಾಜಸ್ಥಾನಿ ಮಿತ್ರ ಮಂಡಳಿ ಟಿ.ಆರ್.ಮಿಲ್ ಸ್ಮಶಾನದಲ್ಲಿ ಕಲ್ಪಿಸಿರುವ ಸೌಲಭ್ಯಗಳಿಗೆ ಪಾಲಿಕೆ ಸದಸ್ಯೆ ಕೊಕಿಲಾ ಚಂದ್ರಶೇಖರ್ ಶುಕ್ರವಾರ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಅನ್ಯ ರಾಜ್ಯದವರು ಇಲ್ಲಿಗೆ ಬಂದು ನೆಲೆಸಿ ನಮ್ಮ ನಾಡಿಗೆ ಮೂಲ ಸೌಕರ್ಯ ಕಲ್ಪಿಸುತ್ತಿರುವುದು ಸಂತಸದ ವಿಚಾರ ಎಂದರು. ರಾಜಸ್ಥಾನಿ ಮಿತ್ರ ಮಂಡಳಿ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ಮುಂದಿನ ಯೋಜನೆ?: ಇಷ್ಟಕ್ಕೇ ಮಿತ್ರ ಮಂಡಲದವರು ಸುಮ್ಮನಾಗಿಲ್ಲ. ರಾಜಸ್ಥಾನಿ ಮಿತ್ರ ಮಂಡಲ್ 25ನೇ ವರ್ಷಕ್ಕೆ ಕಾಲಿಡುತ್ತಿದ್ದು, ಬೆಳ್ಳಿ ಹಬ್ಬ ಆಚರಣೆ ಅಂಗವಾಗಿ ಮುಂದೆ ಮರಿಯಪ್ಪನ ಪಾಳ್ಯದಲ್ಲಿರುವ ಸ್ಮಶಾನದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಕಲ್ಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ.
ಇತರೆ ಸ್ಮಶಾನಗಳಲ್ಲೂ ಮೂಲ ಸೌಕರ್ಯ ಕಲ್ಪಿಸುವ ಚಿಂತನೆ ಇದೆ ಎನ್ನುತ್ತಾರೆ ಮಂಡಲ್ ಉಪಾಧ್ಯಕ್ಷ ನೇಮಿಚಂದ್ ದಲಾಲ್. ಈಗಾಗಲೇ ವಿಜಯನಗರದ ಸುತ್ತಮುತ್ತ ಇರುವ ಸರ್ಕಾರಿ ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು, ಅದನ್ನು ಮುಂದುವರಿಸಲಾಗುವುದು. ಜತೆಗೆ ಬೆಳ್ಳಿ ಹಬ್ಬದ ಅಂಗವಾಗಿ ಒಂದು ವರ್ಷ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.
* ಶ್ರುತಿ ಮಲೆನಾಡತಿ