Advertisement

ಮಚ್ಚಿನ: ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ

04:38 PM Nov 09, 2017 | |

ಮಡಂತ್ಯಾರು: ಮಚ್ಚಿನ ಗ್ರಾಮಸ್ಥರ ಬೇಡಿಕೆಯ ಮೇರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಮಂಜೂರುಗೊಂಡಿದೆ ಸರಕಾರಿ
ಆರೋಗ್ಯ ಕೇಂದ್ರದಿಂದ ಎಲ್ಲ ಬಡವರಿಗೂ ವೈದ್ಯಕೀಯ ಸೇವೆ ಸದಾ ದೊರೆಯುವಂತಾಗಬೇಕು ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಹೇಳಿದರು.

Advertisement

ಅವರು ಬುಧವಾರ ಮಚ್ಚಿನ ಗ್ರಾಮ ಪಂಚಾಯತ್‌ ವಠಾರದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಆರಂಭಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

2003ರಲ್ಲಿ ಸುಬ್ಬಯ್ಯ ಶೆಟ್ಟಿ ಕೋರಬೆಟ್ಟು ಅವರು ಗ್ರಾಮದ ಜನರಿಗೆ ಉಪಯೋಗ ಆಗುವ ನಿಟ್ಟಿನಲ್ಲಿ ಬೇಡಿಕೆ ಇಟ್ಟು ಅದಕ್ಕೆ ಬೇಕಾದ ತಯಾರಿ ನಡೆಸಿ ಗ್ರಾಮಸ್ಥರ, ಪಂಚಾಯತ್‌ ಸಹಕಾರದಿಂದ ಸಮಿತಿ ರಚಿಸಿ, 2013ರಲ್ಲಿ 1 ಲಕ್ಷ ರೂ. ದೇಣಿಗೆ ಸಂಗ್ರಹಿಸಿ ಕೊಟ್ಟಿದ್ದು ಈಗ ಇಲ್ಲಿಗೆ ಆರೋಗ್ಯ ಕೇಂದ್ರ ಲಭಿಸಿದೆ.

ಇದು ತಾತ್ಕಾಲಿಕವಾಗಿ ಆರಂಭಗೊಂಡಿದ್ದು ಶೀಘ್ರ ಎರಡು ಎಕರೆ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿಕ್ಕಿದೆ ಸದ್ಯಕ್ಕೆ ನಿಯೋಜನೆಯಲ್ಲಿ ನರ್ಸ್‌ಗಳು ಮತ್ತು ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಶ್ರೀಮಂತ ವರ್ಗದವರು ಯಾವ ರೀತಿ ಆರೋಗ್ಯ ಕಾಳಜಿ ವಹಿಸುತ್ತಾರೋ ಅದೇ ರೀತಿ ಸರಕಾರಿ ಆಸ್ಪತ್ರೆಯ ವೈದ್ಯರು ಬಡವರ ಆರೋಗ್ಯ ಕಾಳಜಿ ವಹಿಸಬೇಕು. ಎಲ್ಲ ವೈದ್ಯರಲ್ಲೂ ಕರ್ತವ್ಯನಿಷ್ಠೆ ಇರಬೇಕು ಎಂದರು.

ಮಚ್ಚಿನ ಗ್ರಾ.ಪಂ.ಅಧ್ಯಕ್ಷೆ ಹರ್ಷಲತಾ ಅಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಎಂ. ರಾಮಕೃಷ್ಣ ರಾವ್‌ ಗ್ರಾಮದ ಜನರಿಗೆ ಆಸ್ಪತ್ರೆಯಿಂದ ಹೆಚ್ಚಿನ ಸೇವೆ ದೊರೆಯಲಿದೆ. ಪಂಚಾಯತ್‌ನವರು ಕಟ್ಟಡವನ್ನು ಬಾಡಿಗೆರಹಿತವಾಗಿ ನೀಡಿದ್ದಾರೆ. ವೈದ್ಯರು ವಾರದಲ್ಲಿ ನಾಲ್ಕು ದಿನ ಕಾರ್ಯನಿರ್ವಹಿಸುತ್ತಾರೆ. ನೂತನ ಕಟ್ಟಡಕ್ಕೆ ಎರಡು ಎಕರೆ ಜಾಗ ಬೇಕಾಗಿದ್ದು ಪ್ರಗತಿಯಲ್ಲಿದೆ. ಇಲಾಖೆಗೆ ಸಿಕ್ಕಿದ ತತ್‌ಕ್ಷಣ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು ಎಂದು ಹೇಳಿದರು.

Advertisement

ತಾ.ಪಂ.ಅಧ್ಯಕ್ಷೆ ದಿವ್ಯಜ್ಯೋತಿ, ಜಿ.ಪಂ. ಸದಸ್ಯ ಸಾಹುಲ್‌ ಹಮೀದ್‌, ತಾ.ಪಂ. ಸದಸ್ಯೆ ವಸಂತಿ ಎಲ್‌., ತಾ.ಪಂ. ಉಪಾಧ್ಯಕ್ಷೆ ವೇದಾವತಿ, ತಾಲೂಕು ಪಂಚಾಯತ್‌ ಕಾರ್ಯ ನಿರ್ವಹಣಾಧಿಕಾರಿ ಬಸವಣ್ಣನವರ್‌ ಕೆ. ಅಯ್ಯರ್‌, ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್‌ ಸುವರ್ಣ, ಮಚ್ಚಿನ ಗ್ರಾ. ಪಂ. ಉಪಾಧ್ಯಕ್ಷ ಚಂದ್ರಶೇಖರ ಬಿ.ಎಸ್‌., ತಾ| ಆರೋಗ್ಯಾಧಿಕಾರಿ ಡಾ| ಕಲಾಮಧು ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಚಂದ್ರಶೇಖರ ಬಿ.ಎಸ್‌. ಸ್ವಾಗತಿಸಿದರು. ಅಜೇಯ್‌ ವಂದಿಸಿದರು. ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು.

ಕಠಿನ ಕ್ರಮ, ಕಟ್ಟಡ ನಿರ್ಮಾಣ ನನ್ನ ಜವಾಬ್ಧಾರಿ
ಸರಕಾರಿ ಆಸ್ಪತ್ರೆಗಳಲ್ಲಿ ಯಾವತ್ತೂ ಔಷಧಗಳ ಕೊರತೆ ಆಗಬಾರದು. ವೈದ್ಯರು ರೋಗಿಗಳಿಗೆ ಚೀಟಿ ಕೊಟ್ಟು ಮೆಡಿಕಲ್‌ಗೆ ಕಳುಹಿಸಿದರೆ ಅಂತಹ ವೈದ್ಯರ ಮೇಲೆ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು. ಆಸ್ಪತ್ರೆಗಾಗಿ ಗುರುತು ಮಾಡಿದ ಎರಡು ಎಕರೆ ಜಾಗ ಈಗ ಅರಣ್ಯ ಇಲಾಖೆ ನಮ್ಮದು ಎಂದು ಹೇಳುತ್ತಿದೆ. ಸರ್ವೆ ಮಾಡಿ ಆಸ್ಪತ್ರೆಗೆ ಸಿಗುವಂತೆ ಮಾಡುತ್ತೇವೆ. ಯಾರೇ ಬಂದು ವಿರೋಧ ಮಾಡಿದರೂ ಸಾರ್ವಜನಿಕರ ಹಿತದೃಷ್ಟಿಯಿಂದ ಅದೇ ಜಾಗದಲ್ಲಿ ಕಟ್ಟಡ ಕಟ್ಟಿಸಿ ಕೊಡುವ ಜವಾಬ್ಧಾರಿ ನನ್ನದು. 
–  ಕೆ. ವಸಂತ ಬಂಗೇರ,
   ಶಾಸಕರು, ಬೆಳ್ತಂಗಡಿ  

Advertisement

Udayavani is now on Telegram. Click here to join our channel and stay updated with the latest news.

Next