Advertisement

ನುಗ್ಗೆ ಸೌಂದರ್ಯದ ಬುಗ್ಗೆ !

08:30 AM May 31, 2019 | mahesh |

ಹಳ್ಳಿಯೇ ಇರಲಿ, ನಗರವೇ ಇರಲಿ ಅಲ್ಲಲ್ಲಿ ಮನೆಯ ಮುಂದೆ ನುಗ್ಗೆ ಮರಗಳು ಇದ್ದೇ ಇರುತ್ತವೆ. ನುಗ್ಗೆ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯಕ್ಕೂ ಉತ್ತಮ.

Advertisement

ನುಗ್ಗೆ ಇಂದು ಸೂಪರ್‌ ಫ‌ುಡ್‌ ಆಗಿ ಪರಿಗಣಿತವಾಗುತ್ತಿರು ವುದು ಈ ಕಾರಣಗಳಿಂದಲೇ. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ನುಗ್ಗೆಯ ಎಲೆಗಳ ಪುಡಿ “ಮೊರಿಂಗಾ ಪೌಡರ್‌’ ಎಂದು ಸೌಂದರ್ಯ ವರ್ಧಕ ಹಾಗೂ ಸೌಂದರ್ಯ ಪ್ರಸಾಧಕವಾಗಿ ಭಾರೀ ಬೇಡಿಕೆ ಪಡೆದಿದೆ. ನಮ್ಮ ಹಿತ್ತಲಲ್ಲೇ ಇರುವ ನುಗ್ಗೆ ಹೇಗೆ ಸೌಂದರ್ಯವರ್ಧಕ ಮದ್ದು ಎಂದು ಅರಿಯೋಣವೇ?

ನುಗ್ಗೆ ಎಲೆ, ಬೆಣ್ಣೆಹಣ್ಣು ಜೇನಿನ ಫೇಸ್‌ಪ್ಯಾಕ್‌
ಬೇಕಾಗುವ ಸಾಮಗ್ರಿ:
5 ಚಮಚ ಒಣಗಿಸಿ ಹುಡಿಮಾಡಿದ ನುಗ್ಗೆ ಎಲೆಗಳ ಪುಡಿ, ಬೆಣ್ಣೆಹಣ್ಣು ಮಸೆದದ್ದು 10 ಚಮಚ, 4 ಚಮಚ ಶುದ್ಧ ಜೇನು, 1 ಚಮಚ ನಿಂಬೆ ಅಥವಾ ಕಿತ್ತಳೆ ರಸ.

ತಯಾರಿಸುವ ವಿಧಾನ: ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ, ಕಲಕಿ ಪೇಸ್ಟ್‌ ತಯಾರಿಸಿ ಮುಖಕ್ಕೆ ಲೇಪಿಸಿ 1/2 ಗಂಟೆ ಬಳಿಕ ಬೆಚ್ಚಗಿನ ನೀರಲ್ಲಿ ಮುಖ ತೊಳೆಯಬೇಕು. ಇದು ಮುಖಕ್ಕೆ ಉತ್ತಮ ಮಾಯಿಶ್ಚರೈಸರ್‌. ನುಗ್ಗೆಯಲ್ಲಿ ಚರ್ಮದ ಟಾನಿಕ್‌ ಆಗಿರುವ ವಿಟಮಿನ್‌ “ಈ’, “ಸಿ’ ಹಾಗೂ “ಎ’ ಅಧಿಕ ಪ್ರಮಾಣದಲ್ಲಿದೆ. ಇದು ಡೀಪ್‌ ಕಂಡೀಷನರ್‌ ಹಾಗೂ ಕ್ಲೆನ್ಸರ್‌ ಆಗಿ ಪರಿಣಾಮ ಬೀರುತ್ತದೆ. ಚರ್ಮವೂ ಯೌವ್ವನಭರಿತವಾಗಿ ನೆರಿಗೆಗಳಿಲ್ಲದಂತೆ ಮೃದು ಮಾಡುತ್ತದೆ. ಬೆಣ್ಣೆಹಣ್ಣು ಸ್ನಿಗ್ಧತೆ ನೀಡಿದರೆ, ಜೇನು ಹಾಗೂ ನಿಂಬೆ ಪೋಷಕಾಂಶ ಒದಗಿಸಿ ಕಾಂತಿ ವರ್ಧಿಸುವುದರ ಜೊತೆಗೆ “ಬ್ಲೀಚ್‌ ಇಫೆಕ್ಟ್’ನಿಂದ ಅಂದರೆ ಚರ್ಮದ ಬಣ್ಣವನ್ನು ಶ್ವೇತವರ್ಣವಾಗಿಸುತ್ತದೆ.

ನುಗ್ಗೆಪುಡಿ, ಪಪ್ಪಾಯ-ಮೊಸರಿನ ಹೇರ್‌ಪ್ಯಾಕ್‌
ಬೇಕಾಗುವ ಸಾಮಗ್ರಿ: ನುಗ್ಗೆ ಎಲೆ ಒಣಗಿಸಿ ಹುಡಿಮಾಡಿದ್ದು 5 ಚಮಚ, ಕಳಿತ ಪಪ್ಪಾಯದ ತಿರುಳಿನ ಪೇಸ್ಟ್‌ 10 ಚಮಚ, 4 ಚಮಚ ದಪ್ಪ ಮೊಸರು.

Advertisement

ತಯಾರಿಸುವ ವಿಧಾನ: ಇವೆಲ್ಲವನ್ನು ಚೆನ್ನಾಗಿ ಬೆರೆಸಬೇಕು. ಕೂದಲಿಗೆ ಲೇಪಿಸಿ 1 ಗಂಟೆಯ ಬಳಿಕ ಬೆಚ್ಚಗಿನ ನೀರಿನಲ್ಲಿ ಕೂದಲು ತೊಳೆದರೆ ಕೂದಲು ರೇಶಿಮೆಯ ನುಣುಪು ಪಡೆಯುವುದರ ಜೊತೆಗೆ ಕೂದಲು ಸಮೃದ್ಧವಾಗಿ ಬೆಳೆಯುತ್ತದೆ. ತುರಿಕೆ, ಕಜ್ಜಿ , ಹೊಟ್ಟು ನಿವಾರಕವೂ ಹೌದು. ಮಕ್ಕಳಿಗೂ ಉತ್ತಮ. ಒಣ ಕೂದಲು ಉಳ್ಳವರು ಪಪ್ಪಾಯದ ಬದಲಿಗೆ ಬೆಣ್ಣೆಹಣ್ಣಿನ ಪೇಸ್ಟ್‌ 10 ಚಮಚ ಬೆರೆಸಿ ಇದೇ ರೀತಿ ಹೇರ್‌ಪ್ಯಾಕ್‌ ಮಾಡಿದರೆ ಒರಟು, ಒಣಗಿದ ಕೂದಲು ಸ್ನಿಗ್ಧವಾಗಿ ಕಾಂತಿಯುತವಾಗುತ್ತದೆ.

ಮೊರಿಂಗಾ ತೈಲ
ಬೊಕ್ಕತಲೆ ಅಥವಾ ಕೂದಲು ಉದುರುವುದು ಇಂದಿನ ಕಾಲದ ಅತೀ ದೊಡ್ಡ ಸಮಸ್ಯೆ. ಇದಕ್ಕೆ ನುಗ್ಗೆಸೊಪ್ಪಿನಲ್ಲಿದೆ ಪರಿಹಾರ. 1/2 ಕಪ್‌ ತಾಜಾ ನುಗ್ಗೆ ಎಲೆಯನ್ನು ಅರೆದು ನಯವಾದ ಜ್ಯೂಸ್‌ ತಯಾರಿಸಬೇಕು. ಈರುಳ್ಳಿ (ಬಿಳಿ ಈರುಳ್ಳಿಯಾದರೆ ಶ್ರೇಷ್ಠ) ಕತ್ತರಿಸಿ ಅರೆದು 1/4 ಕಪ್‌ ಜ್ಯೂಸ್‌ ತೆಗೆದುಕೊಳ್ಳಬೇಕು. ಒಂದು ಕಬ್ಬಿಣದ ಕಾವಲಿಯಲ್ಲಿ ಒಂದೂವರೆ ಕಪ್‌ ಕೊಬ್ಬರಿ ಎಣ್ಣೆ , 1/2 ಕಪ್‌ ಎಳ್ಳೆಣ್ಣೆ ಬೆರೆಸಿ ಅದಕ್ಕೆ ನುಗ್ಗೆ ಹಾಗೂ ಈರುಳ್ಳಿ ಜ್ಯೂಸ್‌ ಬೆರೆಸಿ ಸಣ್ಣ ಉರಿಯಲ್ಲಿ ಕುದಿಸಬೇಕು. ನೀರಿನ ಅಂಶ ಆರಿದ ಬಳಿಕ ಸೋಸಿ ಸಂಗ್ರಹಿಸಬೇಕು. ಈರುಳ್ಳಿಯ ಪರಿಮಳ ಇಷ್ಟವಾಗದವರು ಕೇವಲ ನುಗ್ಗೆಸೊಪ್ಪಿನ ರಸ ಬೆರೆಸಿ ಎಣ್ಣೆ ತಯಾರಿಸಿದರೂ ಪರಿಣಾಮಕಾರಿ.

ವಲೀಪಂತ ನಿವಾರಕ
ಕೂದಲು ಹಣ್ಣಾಗುವುದು ಅಥವಾ ಬಾಲನೆರೆ ಅಂದರೆ ಮಕ್ಕಳಲ್ಲಿ ಕೂದಲು ಹಣ್ಣಾಗುವುದು ಇಂದು ಸಾಮಾನ್ಯ. ನುಗ್ಗೆಯಲ್ಲಿದೆ ಇದಕ್ಕೆ ಪರಿಹಾರ. 2 ಚಮಚ ಒಣಗಿಸಿ ಹುಡಿಮಾಡಿದ ನುಗ್ಗೆ ಎಲೆ ಹುಡಿ, 2 ಚಮಚ ನೆಲ್ಲಿಕಾಯಿ ಪುಡಿ, 2 ಚಮಚ ಹೆನ್ನಾಪುಡಿ, 1 ಚಮಚ ತ್ರಿಫ‌ಲಾ ಪುಡಿ- ಇವೆಲ್ಲವನ್ನೂ ಕಬ್ಬಿಣದ ಪಾತ್ರೆಯಲ್ಲಿ ಸ್ವಲ್ಪ ಕೊಬ್ಬರಿ ಎಣ್ಣೆಯೊಂದಿಗೆ ಬೆರೆಸಿ ರಾತ್ರಿ ಹಾಕಿಡಬೇಕು. ಮರುದಿನ ಕೂದಲಿಗೆ ಚೆನ್ನಾಗಿ ಮಾಲೀಶು ಮಾಡಿ ಲೇಪಿಸಿ 4-5 ಗಂಟೆಯ ಬಳಿಕ ಕೂದಲು ತೊಳೆಯಬೇಕು. ವಾರಕ್ಕೆ 2-3 ಬಾರಿ ಈ ರೀತಿ ಪುನರಾವರ್ತಿಸಿದರೆ ಚಾಲನೆಗೆ ನಿವಾರಣೆಯಾಗುತ್ತದೆ. ಮಾತ್ರವಲ್ಲ ಯುವತಿಯರಲ್ಲೂ ಕೂದಲು ಕಪ್ಪಾಗಲು ಉತ್ತಮ.

ಮೊರಿಂಗಾ ಬನಾನಾ ಫೇಸ್‌ಪ್ಯಾಕ್‌
ಸಾಮಗ್ರಿ:
4-6 ಚಮಚ ಒಣಗಿಸಿದ ನುಗ್ಗೆಪುಡಿ, 1 ಚಮಚ ಜೇನು, 4 ಚಮಚ ಗುಲಾಬಿ ಜಲ, 1 ಮಸೆದ ಬಾಳೆಹಣ್ಣಿನ ಪೇಸ್ಟ್‌ ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ ಮುಖಕ್ಕೆ ಲೇಪಿಸಿ 1/2 ಗಂಟೆ ಬಳಿಕ ತೊಳೆಯಬೇಕು. ಇದರಲ್ಲಿ ಮೊರಿಂಗಾಪುಡಿ ಹೆಚ್ಚು ಪ್ರಮಾಣದಲ್ಲಿ ಬೆರೆಸಿರುವುದರಿಂದ ಇದು ಮೊಡವೆ, ಕಲೆ, ಬ್ಲ್ಯಾಕ್‌ಹೆಡ್ಸ್‌, ವ್ಹೆ„ಟ್‌ಹೆಡ್ಸ್‌ ನಿವಾರಣೆ ಮಾಡಲು ಬಲು ಉಪಯುಕ್ತ. ಶಿಲೀಂಧ್ರ ಸೋಂಕು ನಿವಾರಣೆಗೂ ನುಗ್ಗೆಸೊಪ್ಪು ಉಪಯುಕ್ತ. ಅಂದರೆ ತುರಿಕೆ ಉಳ್ಳ ಕಪ್ಪು ಗುಳ್ಳೆ , ಕಜ್ಜಿ , ಮುಖ- ಕುತ್ತಿಗೆಯಲ್ಲಿ ಕಾಣಿಸಿಕೊಳ್ಳುವ ಫ‌ಂಗಲ್‌ ಸೋಂಕು ನಿವಾರಣೆಗೆ ಉತ್ತಮವಿದು!

ಮೊರಿಂಗಾ ಬನಾನಾ ಹೇರ್‌ಪ್ಯಾಕ್‌
6 ಚಮಚ ಮೊರಿಂಗಾ ಪುಡಿ, 2 ಮಸದೆ ಬಾಳೆಹಣ್ಣು , 4 ಚಮಚ ತುಳಸೀರಸ, 2 ಚಮಚ ಕತ್ತಿಳೆ ಅಥವಾ ನಿಂಬೆರಸ- ಇವೆಲ್ಲವನ್ನೂ ಚೆನ್ನಾಗಿ ಬೆರೆಸಿ ಕೂದಲಿಗೆ ಮಾಲೀಶು ಮಾಡಿ ಹೇರ್‌ಪ್ಯಾಕ್‌ ಮಾಡಬೇಕು. 1 ಗಂಟೆಯ ಬಳಿಕ ಕೂದಲು ತೊಳೆದರೆ ತುರಿಕೆ, ಕಜ್ಜಿ , ಹೊಟ್ಟು ಉದುರುವುದು, ತುರಿಕೆಯುಳ್ಳ ಹೊಟ್ಟು ಹಾಗೂ ಶಿಲೀಂಧ್ರದ ಸೋಂಕು ಹಾಗೂ ಕೂದಲು ಉದುರುವುದು ನಿವಾರಣೆಯಾಗಿ ಕೂದಲು ಸೊಂಪಾಗಿ ಬೆಳೆಯುತ್ತದೆ.

ಸೌಂದರ್ಯವರ್ಧಕ ಮೊರಿಂಗಾ ರೆಸಿಪಿ
ಅಡುಗೆಮನೆಯಲ್ಲಿ ನುಗ್ಗೆಸೊಪ್ಪು ಆಹಾರದಲ್ಲಿ ಬಳಸಿ ಸೌಂದರ್ಯ ವರ್ಧನೆ ಮಾಡಲು ಸುಲಭಸಾಧ್ಯ!

ಮೊರಿಂಗಾ ಪೇಯ
ಮೊಗದ ಕಾಂತಿ, ಕೂದಲ ಸೌಂದರ್ಯದ ಜೊತೆಗೆ ಉತ್ತಮ ಆರೋಗ್ಯಕ್ಕೆ ನಿತ್ಯ ಬೆಳಿಗ್ಗೆ 1 ಕಪ್‌ ಈ ಪೇಯ ಸೇವಿಸಿದರೆ ಬಲು ಪರಿಣಾಮಕಾರಿ.

ಬೇಕಾಗುವ ಸಾಮಗ್ರಿ: 2 ಚಮಚ ನುಗ್ಗೆಸೊಪ್ಪು , 4 ಚಮಚ ಕ್ಯಾರೆಟ್‌ ತುರಿ ತುಪ್ಪದಲ್ಲಿ ಹುರಿಯಬೇಕು. ತದನಂತರ ಎರಡನ್ನೂ ಮಿಕ್ಸರ್‌ನಲ್ಲಿ ಅರೆದು, ಪೇಸ್ಟ್‌ ತಯಾರಿಸಿ, 1 ಕಪ್‌ ನೀರು ಬೆರೆಸಬೇಕು. ಇದಕ್ಕೆ 1/2 ಚಮಚ ಎಲೋವೆರಾ ಬೆರೆಸಿ, 2 ಚಮಚ ಜೇನು ಬೆರೆಸಿ ಸೇವಿಸಿದರೆ ಉತ್ತಮ ಸೌಂದರ್ಯವರ್ಧಕ ಪೇಯ.

ಡಾ. ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next