ಜಪಾನ್‌ನ ಖ್ಯಾತ ಆಟಗಾರ್ತಿ ನವೋಮಿ ಒಸಾಕಾ ಫ್ರೆಂಚ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಪಂದ್ಯಾವಳಿಯಿಂದ “ಮಾನಸಿಕ ಆರೋಗ್ಯ’ದ ಕಾರಣ ನೀಡಿ ಹಿಂದೆ ಸರಿದಿದ್ದಾರೆ. ಮೊದಲ ಸುತ್ತನ್ನು ದಾಟಿದ್ದ ಅವರು ಮಂಗಳವಾರ ದ್ವಿತೀಯ ಸುತ್ತಿನ ಸ್ಪರ್ಧೆಯನ್ನು ಆಡಬೇಕಿತ್ತು.
“ಟೂರ್ನಿಯ ವಿಚಾರದಲ್ಲಿ ಮತ್ತು ಇತರ ಆಟಗಾರರ ವಿಚಾರದಲ್ಲಿ ನಾನು ಮಾಡಬಹುದಾದ ಒಳ್ಳೆಯ ಕೆಲಸವೆಂದರೆ ಕೂಟದಿಂದ ಹಿಂದೆ ಸರಿಯುವುದು. ಇದರಿಂದ ಪ್ಯಾರಿಸ್ ಟೂರ್ನಿಯೆಡೆಗೆ ಎಲ್ಲರೂ ಗಮನ ಹರಿಸಲು ಸಾಧ್ಯವಾಗಬಹುದು’ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ. ಅವರ ಈ ಕಾರಣ ಒಂದು ರೀತಿಯ ಒಗಟಿನ ರೂಪದಲ್ಲಿದೆ!
ಒಸಾಕಾ ಕೂಟದಿಂದ ಹಿಂದೆ ಸರಿದ ಅಸಲಿ ಕಾರಣ ಬೇರೆಯೇ ಇರುವುದರಲ್ಲಿ ಅನುಮಾನವಿಲ್ಲ.
ಇದನ್ನೂ ಓದಿ :ಶಫಾಲಿ ಆಯ್ಕೆಯಿಂದ ತಂಡಕ್ಕೆ ಲಾಭ: ನಾಯಕಿ ಮಿಥಾಲಿ ರಾಜ್
ಈ ಕೂಟದ ಆರಂಭಕ್ಕೂ ಮುನ್ನ, ತಾನು ಟೂರ್ನಿಯ ವೇಳೆ ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವುದಿಲ್ಲ, ಇದರಿಂದ ತಾನು ಮಾನಸಿಕವಾಗಿ ನೆಮ್ಮದಿಯಿಂದ ಇರಬಲ್ಲೆ ಎಂದು ಹೇಳಿದ್ದರು. ಆದರೆ ಇದು ಗ್ರ್ಯಾನ್‌ಸ್ಲಾಮ್ ನಿಯಮಾವಳಿಗೆ ವಿರುದ್ಧವಾಗಿತ್ತು. ಕೊಟ್ಟ ಮಾತಿನಂತೆ ಮೊದಲ ಸುತ್ತಿನ ಪಂದ್ಯದ ವೇಳೆ ಒಸಾಕಾ ಮಾಧ್ಯಮಗಳಿಂದ ದೂರ ಉಳಿದಿದ್ದರು. ಇದರಿಂದ ಅವರಿಗೆ 15 ಸಾವಿರ ಡಾಲರ್ ದಂಡ ವಿಧಿಸಲಾಗಿತ್ತು. ಇದರಿಂದ ಅಸಮಾಧಾನಗೊಂಡ ಒಸಾಕಾ ಕೂಟದಿಂದ ಹಿಂದೆ ಸರಿದಿರುವ ಸಾಧ್ಯತೆ ಇದೆ.