ಪ್ಯಾರಿಸ್: ಕ್ಲೇ ಕೋರ್ಟ್ ಕಿಂಗ್ ರಫೆಲ್ ನಡಾಲ್ ವಿಶ್ವದ ನಂಬರ್ ವನ್ ಆಟಗಾರ ನೊವಾಕ್ ಜೊಕೋವಿಕ್ ಅವರನ್ನು ಫ್ರೆಂಚ್ ಓಪನ್ ಪಂದ್ಯಾವಳಿಯಿಂದ ಹೊರ ದಬ್ಬಿದ್ದಾರೆ. ಕಳೆದ ರಾತ್ರಿಯ ಕ್ವಾರ್ಟರ್ ಫೈನಲ್ ಮುಖಾಮುಖಿಯನ್ನು ನಡಾಲ್ 6-2, 4-6, 6-2, 7-6 (7-4) ಅಂತರದಿಂದ ಗೆದ್ದರು. ಶುಕ್ರ ವಾರದ ಸೆಮಿಫೈನಲ್‌ನಲ್ಲಿ ರಫೆಲ್ ನಡಾಲ್-ಅಲೆಕ್ಸಾಂಡರ್ ಜ್ವೆರೇವ್ ಮುಖಾಮುಖಿ ಆಗಲಿದ್ದಾರೆ.
ಗ್ರ್ಯಾನ್‌ಸ್ಲಾಮ್ ಕೂಟ ವೊಂದರಲ್ಲಿ ಈ ಟೆನಿಸ್ ದಿಗ್ಗಜರಿಬ್ಬರು ಬಹಳ ಬೇಗನೇ ಮುಖಾಮುಖಿ ಆದುದರಿಂದ ಕುತೂಹಲ ತೀವ್ರಗೊಂಡಿತ್ತು. ಹಾಗೆಯೇ ಓರ್ವ ಸ್ಟಾರ್ ಆಟಗಾರ ಬಹಳ ಬೇಗನೇ ನಿರ್ಗಮಿಸುವುದೂ ಅನಿವಾರ್ಯವಾಗಿತ್ತು. ಈ ದುರದೃಷ್ಟ ಜೊಕೋವಿಕ್ ಅವರದಾಯಿತು.
ರೊಲ್ಯಾಂಡ್ ಗ್ಯಾರಸ್‌ನಲ್ಲಿ 13 ಸಲ ಚಾಂಪಿಯನ್ ಆಗಿ ಮೂಡಿ ಬಂದಿರುವ ರಫೆಲ್ ನಡಾಲ್ ಕಳೆದ ವರ್ಷದ ಸೆಮಿಫೈನಲ್‌ನಲ್ಲಿ ಜೊಕೋವಿಕ್‌ಗೆ ಶರಣಾಗಿ ಸತತ 5ನೇ ಪ್ರಶಸ್ತಿಯಿಂದ ವಂಚಿತರಾಗಿದ್ದರು. ಬಳಿಕ ಸ್ಟೆಫನಸ್ ಸಿಸಿಪಸ್ ಅವರನ್ನು ಮಣಿಸುವ ಮೂಲಕ ಜೊಕೋವಿಕ್ ಕಿರೀಟ ಏರಿಸಿಕೊಂಡಿದ್ದರು. ಈ ಬಾರಿ ನಡಾಲ್ ಕ್ವಾರ್ಟರ್ ಫೈನಲ್‌ನಲ್ಲೇ ಸರ್ಬಿಯನ್ ಟೆನಿಸಿಗನನ್ನು ಮನೆಗೆ ಕಳುಹಿಸಿದ್ದಾರೆ. 14ನೇ ಫ್ರೆಂಚ್ ಓಪನ್ ಚಾಂಪಿಯನ್ ಹಾದಿಯಲ್ಲಿದ್ದ ಪ್ರಮುಖ ಹರ್ಡಲ್ಸ್ ಒಂದನ್ನು ಯಶಸ್ವಿಯಾಗಿ ದಾಟಿದ್ದಾರೆ. ನಡಾಲ್ ಇದಕ್ಕೂ ಹಿಂದಿನ ಸುತ್ತಿನಲ್ಲಿ ಫೆಲಿಕ್ಸ್ ಔಗರ್ ಅಲಿಯಾಸಿಮ್ ವಿರುದ್ಧ 5 ಸೆಟ್ ಥ್ರಿಲ್ಲರ್‌ನಲ್ಲಿ ಗೆದ್ದು ಬಂದಿದ್ದರು.
ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ಸ್ಪೇನಿನ ಕಾರ್ಲೋಸ್ ಅಲ್ಕರಾಝ್ ವಿರುದ್ಧ ಕಠಿನ ಹೋರಾಟವೊಂದರಲ್ಲಿ ಗೆಲುವು ಸಾಧಿಸಿದರು. ಅಂತರ 6-4, 6-4, 4-6, 7-6 (9-7).