ಪ್ಯಾರಿಸ್: ವಿಶ್ವದ ನಂ.1 ಆಟಗಾರ್ತಿ, ಪೋಲೆಂಡ್‌ನ ಇಗಾ ಸ್ವಿಯಾಟೆಕ್ ಛಾತಿಗೆ ತಕ್ಕ ಪ್ರದರ್ಶನ ನೀಡಿ ಫ್ರೆಂಚ್ ಓಪನ್ ವನಿತಾ ಸಿಂಗಲ್ಸ್‌ನಲ್ಲಿ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿದ್ದಾರೆ. ಶನಿವಾರದ ಫೈನಲ್‌ನಲ್ಲಿ ಇವರು ಇಟಲಿಯ ಜಾಸ್ಮಿನ್ ಪೌಲಿನಿ ವಿರುದ್ಧ 6-2, 6-1 ಅಂತರದ ಸುಲಭ ಗೆಲುವು ಒಲಿಸಿಕೊಂಡರು. ಒಟ್ಟಾರೆಯಾಗಿ ಇದು ಅವರ 4ನೇ ಪ್ಯಾರಿಸ್ ಪ್ರಶಸ್ತಿ.
2020ರಲ್ಲಿ ಸೋಫಿಯಾ ಕೆನಿನ್ ಅವರನ್ನು ಮಣಿಸುವ ಮೂಲಕ ಇಗಾ ಸ್ವಿಯಾಟೆಕ್ ಮೊದಲ ಸಲ ಪ್ರಶಸ್ತಿ ಎತ್ತಿದ್ದರು. ಇದು ಅವರ ಮೊದಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯೂ ಆಗಿತ್ತು. 2022ರಲ್ಲಿ ಕೊಕೊ ಗಾಫ್ ವಿರುದ್ಧ ಗೆದ್ದು ಬಂದರು. ಕಳೆದ ವರ್ಷ ಕ್ಯಾರೋಲಿನಾ ಮುಖೋವಾ ವಿರುದ್ಧ ಮೇಲುಗೈ ಸಾಧಿಸಿ ಪ್ರಶಸ್ತಿ ಉಳಿಸಿಕೊಂಡರು. ಸ್ವಿಯಾಟೆಕ್ 2022ರ ಯುಎಸ್ ಓಪನ್ ಚಾಂಪಿಯನ್ ಕೂಡ ಆಗಿದ್ದಾರೆ.
ಜಾಸ್ಮಿನ್ ಪೌಲಿನಿ ಅವರಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್ ಫೈನಲ್ ಆಗಿತ್ತು. ಆದರೆ ಸ್ವಿಯಾಟೆಕ್ ಅನುಭವಕ್ಕೆ ಪೌಲಿನಿ ಸಾಟಿಯಾಗಲಿಲ್ಲ. ಪಂದ್ಯ ಏಕಪಕ್ಷೀಯವಾಗಿ ಸಾಗಿತು.
ಮೂರನೇ ಸಾಧಕಿ:
ಇಗಾ ಸ್ವಿಯಾಟೆಕ್ ಫ್ರೆಂಚ್ ಓಪನ್‌ನಲ್ಲಿ ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿದ ಕೇವಲ 3ನೇ ಆಟಗಾರ್ತಿ. ಮೋನಿಕಾ ಸೆಲೆಸ್ (1990-1992) ಮತ್ತು ಜಸ್ಟಿನ್ ಹೆನಿನ್ (2005-2007) ಉಳಿದಿಬ್ಬರು.
ಸ್ವಿಯಾಟೆಕ್ ಕ್ಯಾಲೆಂಡರ್ ವರ್ಷದಲ್ಲಿ ಮ್ಯಾಡ್ರಿಡ್, ರೋಮ್ ಮತ್ತು ರೊಲ್ಯಾಂಡ್ ಗ್ಯಾರೋಸ್ ಚಾಂಪಿಯನ್ ಆಗಿ ಮೂಡಿಬಂದ ಕೇವಲ 2ನೇ ಆಟಗಾರ್ತಿ. ಸೆರೆನಾ ವಿಲಿಯಮ್ಸ್ ಮೊದಲಿಗರು (2013).