ಕಠ್ಮಂಡು: 72 ಜನರಿದ್ದ ಯೇತಿ ಏರ್‌ಲೈನ್ಸ್ ವಿಮಾನ ಪತನದ ಕುರಿತು ಸರ್ಕಾರಕ್ಕೆ ತನಿಖೆಗೆ ಸಹಾಯ ಮಾಡಲು ನೇಪಾಳದಲ್ಲಿರುವ ಫ್ರಾನ್ಸ್‌ನ ತಜ್ಞರ ತಂಡವು ಬುಧವಾರ ತನ್ನ ತನಿಖೆಯನ್ನು ಪ್ರಾರಂಭಿಸಿದೆ. ತಂಡ ರೆಸಾರ್ಟ್ ನಗರವಾದ ಪೊಖರಾದಲ್ಲಿ ಅಪಘಾತ ಸ್ಥಳಕ್ಕೆ ಭೇಟಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೇತಿ ಏರ್‌ಲೈನ್ಸ್ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಐವರು ಭಾರತೀಯರು ಸೇರಿದಂತೆ 71 ಜನರ ದುರಂತ ಅಂತ್ಯಕ್ಕೆ ಕಾರಣವಾದ ಎಟಿಆರ್ -72 ವಿಮಾನ ದುರಂತದ ವಿವರಗಳನ್ನು ಅರ್ಥಮಾಡಿಕೊಳ್ಳಲು ಒಂಬತ್ತು ಸದಸ್ಯರ ತಂಡವು ಪೋಖಾರಾದಲ್ಲಿರುವ ಏರ್‌ಲೈನ್ಸ್ ಸಿಬಂದಿ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ವಿಚಾರಣೆ ನಡೆಸುತ್ತಿದೆ.
ಭಾನುವಾರ ಬೆಳಗ್ಗೆ 10:30 ಕ್ಕೆ ಕಠ್ಮಂಡುವಿನಿಂದ ಟೇಕ್ ಆಫ್ ಆಗಿದ್ದ ವಿಮಾನವು ಸೇಟಿ ನದಿಯ ಕಂದರಕ್ಕೆ ಅಪ್ಪಳಿಸಿ, ಎಲ್ಲಾ 4 ಸಿಬಂದಿ ಮತ್ತು 68 ಪ್ರಯಾಣಿಕರು ದಾರುಣವಾಗಿ ಮೃತ್ಯು ಹೊಂದಿದ್ದರು. ವಿಮಾನದಲ್ಲಿದ್ದ ಒಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ.
ತನಿಖೆಗಾಗಿ ನೇಪಾಳ ಸರ್ಕಾರ ಐದು ಸದಸ್ಯರ ತನಿಖಾ ಸಮಿತಿಯನ್ನು ರಚಿಸಿದೆ. ಮಾಜಿ ವಿಮಾನಯಾನ ಕಾರ್ಯದರ್ಶಿ ನಾಗೇಂದ್ರ ಘಿಮಿರೆ ನೇತೃತ್ವದ ತನಿಖಾ ಸಮಿತಿಯು ಅಪಘಾತದ ಬಗ್ಗೆ ತನಿಖೆ ನಡೆಸಿ 45 ದಿನಗಳಲ್ಲಿ ತನ್ನ ವರದಿಯನ್ನು ಸಲ್ಲಿಸುವಂತೆ ಕೇಳಿದೆ.