ನವದೆಹಲಿ: “ಎಲ್ಲ ಸರ್ಕಾರಿ ಉದ್ಯೋಗಿಗಳ ಪೈಕಿ ಅತಿ ಕಷ್ಟಕರ ಕೆಲಸ ಮಾಡುವವರು ಪೊಲೀಸರು. ಅವರಿಗೆ ದೀಪಾವಳಿ, ರಕ್ಷಾಬಂಧನ ಸೇರಿದಂತೆ ಯಾವುದೇ ಹಬ್ಬಕ್ಕೂ ರಜೆ ಸಿಗುವುದಿಲ್ಲ. ಆದರೂ, ಪೊಲೀಸರ ಇಮೇಜ್‌ಗೆ ಧಕ್ಕೆ ತರುವ ಪ್ರಯತ್ನಗಳು ನಡೆಯುತ್ತಲೇ ಇರುತ್ತವೆ” ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿಷಾದ ವ್ಯಕ್ತಪಡಿಸಿದ್ದಾರೆ.
ಬ್ಯೂರೋ ಆಫ್ ಪೊಲೀಸ್ ರಿಸರ್ಚ್ ಆ್ಯಂಡ್ ಡೆವಲಪ್‌ಮೆಂಟ್(ಬಿಪಿಆರ್ ಆ್ಯಂಡ್ ಡಿ) 51ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪೊಲೀಸರ ಕರ್ತವ್ಯ ನಿಷ್ಠೆಯನ್ನು ಕೊಂಡಾಡಿದರು.
ಇದೇ ವೇಳೆ, ಭಾರತದ ಗಡಿ ಸುರಕ್ಷತೆ ಬಗ್ಗೆ ಮಾತನಾಡಿದ ಅವರು, “”ದೇಶದ ಭೂ ಮತ್ತು ಸಮುದ್ರ ಗಡಿಯಲ್ಲಿ ಭದ್ರತೆ ಬಹಳ ಮುಖ್ಯ. ಆ ವಿಚಾರದಲ್ಲಿ ಯಾವ ಕಾರಣಕ್ಕೂ ಲೋಪವುಂಟಾಗಬಾರದು” ಎಂದು ಆಗ್ರಹಿಸಿದರು.
ಇದನ್ನೂ ಓದಿ :ಬಂಟ್ವಾಳ: ಆಟ ಆಡುವ ವೇಳೆ ಕಾಲು ಜಾರಿ ಕೋರೆ ಗುಂಡಿಗೆ ಬಿದ್ದು ಬಾಲಕ ಸಾವು
“ಭೂಮಿ ಮತ್ತು ಸಮುದ್ರ ಗಡಿ ಯಾವತ್ತೂ ಸುರಕ್ಷಿತವಾಗಿರಬೇಕು. ಅದರಲ್ಲಿ ಯಾವುದೇ ಲೋಪ ಉಂಟಾಗಬಾರದು. ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆಯಲ್ಲಿ ನಾಯಕರನ್ನು ಆಯ್ಕೆ ಮಾಡುವುದಲ್ಲ. ಚುನಾಯಿತ ನಾಯಕರು ನಾಗರಿಕರ ಭದ್ರತೆಯನ್ನು ನೋಡಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ಪ್ರಜಾಸತ್ತೆಯ ಪ್ರಗತಿ ಸಾಧ್ಯ” ಎಂದರು.
“ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಸುಮಾರು 3,700 ನಕ್ಸಲರು ಮುಖ್ಯವಾಹಿನಿಗೆ ಬಂದಿದ್ದಾರೆ” ಎಂದರು.