Advertisement

ಸ್ವಾತಂತ್ರ್ಯ ಅಮೃತ ಸಂಭ್ರಮ ಅವಕಾಶ ನಮ್ಮ ಪುಣ್ಯ

06:18 PM Aug 10, 2022 | Team Udayavani |

ಹುಬ್ಬಳ್ಳಿ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮ ಆಚರಣೆಯ ಅವಕಾಶ ದೊರೆತದ್ದು ಪುಣ್ಯವಾಗಿದೆ. ಪ್ರತಿಯೊಂದು ಮನೆ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಪ್ರೇಮ ಮೆರೆಯಬೇಕು ಎಂದು ಮೂರುಸಾವಿರ ಮಠದ ಜಗದ್ಗುರು ಶ್ರೀ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

Advertisement

ಮಂಗಳವಾರ ಶ್ರೀಮಠದಲ್ಲಿ ಅಮೃತ ಮಹೋತ್ಸವ ಅಂಗವಾಗಿ ಹರ್‌ ಘರ್‌ ತಿರಂಗಾ ಅಭಿಯಾನ ಪ್ರಯುಕ್ತ ಸ್ಟಿಕ್ಕರ್‌ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಠಕ್ಕೆ ಬರುತ್ತಿದ್ದ ಭಕ್ತರು ಪ್ರೀತಿ, ವಿಶ್ವಾಸದಿಂದ ಹಣ್ಣು ಹಂಪಲು, ಚಿನ್ನ, ಬೆಳ್ಳಿ ಕಾಣಿಕೆ ರೂಪದಲ್ಲಿ ನೀಡುತ್ತಿದ್ದರು. ಆದರೆ ಇದೀಗ ರಾಷ್ಟ್ರಧ್ವಜ ನೀಡುತ್ತಿರುವುದು ಇವೆಲ್ಲಕ್ಕಿಂತ ಮಹತ್ವ ಪಡೆದಿದೆ. ರಾಷ್ಟ್ರಧ್ವಜಕ್ಕೆ ಗೌರವ ನೀಡಿ, ಯಾವುದೇ ಚ್ಯುತಿ ಬಾರದಂತೆ ಪ್ರತಿಯೊಬ್ಬರ ಮನೆ ಮೇಲೆ ತಿರಂಗಾ ಹಾರಾಡಬೇಕು. ಮಹಾನ್‌ ವ್ಯಕ್ತಿಗಳ ತ್ಯಾಗ-ಬಲಿದಾನಗಳ ಪ್ರತಿಫಲವಾಗಿ ದೊರೆತಿರುವ ಸ್ವಾತಂತ್ರ್ಯದ ಮಹತ್ವವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ಎಂದರು.

ಬಿಜೆಪಿ ಶಿಸ್ತು ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಪಾಟೀಲ ಮಾತನಾಡಿ, ಅಮೃತ ಮಹೋತ್ಸವ ಸಂದರ್ಭದಲ್ಲಿ ಇಡೀ ದೇಶ ಸಂಭ್ರಮದಲ್ಲಿ ಮುಳುಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕರೆ ಮೇರೆಗೆ ಅಭಿಯಾನ ಮಾಡಲಾಗುತ್ತಿದೆ. ಹಿಂದೆ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಶಾಲೆ, ಸರಕಾರಿ ಕಚೇರಿಗಳಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. ಆದರೆ ಈ ಶುಭ ಸಂಭ್ರಮವನ್ನು ಭಾರತದ ಪ್ರತಿಯೊಬ್ಬ ಪ್ರಜೆಯೂ ಮನೆಯಲ್ಲಿ ಆಚರಿಸಬೇಕು. ರಕ್ತದಾನ ಶಿಬಿರ, ನೇತ್ರ ವಾಗ್ಧಾನ, ಸ್ವಾತಂತ್ರ್ಯ ಹೋರಾಟಗಾರರ ಸನ್ಮಾನ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ. ಪಕ್ಷಾತೀತವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಬೇಕು ಎಂದು ಹೇಳಿದರು.

ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಸಂಜಯ ಕಪಟಕರ ಮಾತನಾಡಿ, ದೇಶದ 20 ಕೋಟಿ ಮನೆಗಳ ಮೇಲೆ ಧ್ವಜ ಹಾರಿಸಬೇಕು ಎಂದು ಕರೆ ನೀಡಿದ್ದಾರೆ. ಜಿಲ್ಲೆಯಲ್ಲಿ 2 ಲಕ್ಷ ಮನೆಗಳ ಮೇಲೆ ಧ್ವಜಾರೋಹಣ ಮಾಡಲಾಗುತ್ತಿದೆ ಎಂದರು. ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ ಶ್ರೀಗಳಿಗೆ ರಾಷ್ಟ್ರಧಜ್ವ ನೀಡಿದರು. ಮಾಜಿ ಶಾಸಕರಾದ ಅಶೋಕ ಕಾಟವೆ, ವೀರಭದ್ರಪ್ಪ ಹಾಲಹರವಿ, ಮುಖಂಡರಾದ ರಂಗಾ ಬದ್ದಿ, ದತ್ತಮೂರ್ತಿ ಕುಲಕರ್ಣಿ, ಪ್ರಭು ನವಲಗುಂದ ಮಠ, ಶಿವು ಹಿರೇಮಠ, ಚಂದ್ರಶೇಖರ ಗೋಕಾಕ, ಅನೂಪ ಬಿಜವಾಡ, ರಾಜು ಕೋರ್ಯಾಣಮಠ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next