Advertisement

ಸ್ವಾತಂತ್ರ್ಯ ಸ್ವೇಚ್ಛೆಯಲ್ಲ-ಅದೊಂದು ಹೊಣೆಗಾರಿಕೆ; ತರಳಬಾಳು ಸ್ವಾಮೀಜಿ

12:59 PM Aug 16, 2022 | Team Udayavani |

ಸಿರಿಗೆರೆ: ಬ್ರಿಟಿಷರ ಗುಂಡಿನ ಸುರಿಮಳೆಗೆ ಹೆದರದೆ ಎದೆಯೊಡ್ಡಿ ನಮ್ಮ ಧಿಧೀರರು ಗಳಿಸಿದ ಸ್ವಾತಂತ್ರ್ಯವನ್ನು ಜತನದಿಂದ ಕಾಪಾಡಿಕೊಳ್ಳುವ ಹೊಣೆ ಭಾರತಿಯರೆಲ್ಲರ ಮೇಲಿದೆ ಎಂದು ತರಳಬಾಳು ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಇಲ್ಲಿನ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಆಶೀರ್ವಚನ ನೀಡಿದ ಶ್ರೀಗಳು, ಸ್ವಾತಂತ್ರ್ಯ ಸ್ವೇಚ್ಛೆಯಲ್ಲ, ಅದೊಂದು ಹೊಣೆಗಾರಿಕೆ ಎಂದರು.

ಮಹಾತ್ಮ ಗಾಂಧೀಜಿ ಯವರ ಆಶಯಗಳಾದ ಅಹಿಂಸೆ ಮತ್ತು ಸತ್ಯದ ಮಾರ್ಗಗಳನ್ನು ಅನುಸರಿಸಿ ಸ್ವಾತಂತ್ರ್ಯ ಗಳಿಸಲಾಗಿದೆ. ಬ್ರಿಟಿಷರ ಆಳ್ವಿಕೆಯ ಕಾಲ ಭಾರತದ ಪಾಲಿಗೆ ಕಗ್ಗತ್ತಲ ಕರಾಳ ಕಾಲವಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿವೆ. ಇಷ್ಟೊತ್ತಿಗೆ ದೇಶದಲ್ಲಿ ಬೆಳಕು ಪ್ರಜ್ವಲಿಸಬೇಕಿತ್ತು. ದೇಶ ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಈ ಆಚರಣೆ ಮಾಡಬೇಕಿತ್ತು. ಆದರೆ ಅಂತಹ ಸಂಭ್ರಮ ಕಾಣುತ್ತಿಲ್ಲ. ಎಲ್ಲೆಡೆಯೂ ಆತಂಕ, ಭಯದ ವಾತಾವರಣವೇ ಕಾಣುತ್ತಿದೆ. ಯಾವಾಗ ಎಲ್ಲಿ ಯಾರ ಹರಣ ಆಗುತ್ತೋ ಅನ್ನುವ ಆತಂಕ ಮನೆ ಮಾಡಿದೆ ಎಂದು ವಿಷಾದಿಸಿದರು.

ಮುಖ್ಯ ಅತಿಥಿಯಾಗಿದ್ದ ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿದ “ಹರ್‌ ಘರ್‌ ತಿರಂಗಾ’ ಅಭಿಯಾನಕ್ಕೆ ದೇಶದಾದ್ಯಂತ ಅಭೂತಪೂರ್ವ ಮೆಚ್ಚುಗೆ ವ್ಯಕ್ತವಾಗಿದೆ. ದೇಶದ ಮೇಲೆ ಮೊಘಲರ ಕಾಲದಿಂದಲೂ ಹಲವು ದಾಳಿಗಳು ನಡೆದವು. ಅವುಗಳನ್ನೆಲ್ಲಾ ಮೆಟ್ಟಿ ನಿಂತು ಭಾರತ ಈಗ ಜಾಗೃತವಾಗಿದೆ. ದೇಶಕ್ಕೆ ಇರುವ ಸಂವಿಧಾನ ಮತ್ತು ಅದರ ಮೂಲಕ ಜಾರಿಗೊಂಡಿರುವ ಪ್ರಜಾಪ್ರಭುತ್ವ
ವ್ಯವಸ್ಥೆ ದೇಶಕ್ಕೆ ಶಕ್ತಿ ತುಂಬಿದೆ ಎಂದು ಬಣ್ಣಿಸಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಎಸ್‌. ನವೀನ್‌ ಮಾತನಾಡಿ, ಸ್ವಾತಂತ್ರ್ಯ ನಂತರ ಬ್ರಿಟಿಷರ ದಾಸ್ಯದಿಂದ ಮುಕ್ತಿ ಸಿಕ್ಕಿದೆ. ಆದರೆ ನಮ್ಮ ಜನರ ಮಾನಸಿಕ ದಾಸ್ಯ ದೂರವಾಗಿಲ್ಲ. ನಾಗರಿಕರು ದುಶ್ಚಟಗಳಿಂದ ಮುಕ್ತಿ ಪಡೆದು ಸದೃಢ ಭಾರತವನ್ನು ಕಟ್ಟಬೇಕು ಎಂದರು.

Advertisement

ಇದೇ ಸಂದರ್ಭದಲ್ಲಿ ಪ್ರೊ| ಎಸ್‌.ಬಿ. ರಂಗನಾಥ್‌ ಅನುವಾದಿಸಿರುವ “ಕಗ್ಗತ್ತಲ ಕಾಲ’ ಕೃತಿಯನ್ನು ನಿವೃತ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಎನ್‌. ಶಿವಕುಮಾರ್‌ ಬಿಡುಗಡೆಗೊಳಿಸಿದರು. ಸಿರಿಗೆರೆ, ರಾಣೆಬೆನ್ನೂರು, ಹಿರೇಗುಂಟನೂರು, ಬಾಡ, ಚಿಕ್ಕಜಾಜೂರು, ಭೀಮಸಮುದ್ರ, ಹೊಸದುರ್ಗ, ಎಲೆಬೇತೂರು, ಅಸಗೋಡು, ಅತ್ತಿಗೆರೆ, ಬೆಳ್ಳೂಡಿ, ಚಿತ್ರದುರ್ಗ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿದರು.

ರಾಷ್ಟ್ರ ಧರ್ಮ ಪಾಲಿಸಿ
ದೇಶದ ನಾಗರಿಕರು ಎಲ್ಲ ಮತ, ಧರ್ಮಗಳನ್ನು ದೂರವಿಟ್ಟು ರಾಷ್ಟ್ರ ಧರ್ಮವನ್ನು ಪಾಲಿಸಬೇಕು. ಸಂವಿಧಾನದ ಆಶಯವಾದ ಧರ್ಮ ನಿರಪೇಕ್ಷ ತತ್ವಗಳನ್ನು ಅಳವಡಿಸಿಕೊಂಡು ಬಾಳಬೇಕು. ಅಲ್ವಸಂಖ್ಯಾತರೇ ಇರಲಿ, ಬಹುಸಂಖ್ಯಾತರೇ ಇರಲಿ, ಮತ್ತೂಬ್ಬರನ್ನು ಗೌರವಿಸುವ ಜೊತೆಗೆ ಅವರವರ ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯಬೇಕು. ಈ ಮೂಲಕ ಸಾರ್ವಭೌಮತ್ವದ ಪ್ರತೀಕವಾದ ತ್ರಿವರ್ಣ ಧ್ವಜಕ್ಕೆ ಗೌರವ ಸಲ್ಲಿಸಬೇಕು ಎಂದು ತರಳಬಾಳು ಜಗದ್ಗುರುಗಳು ಕರೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next