Advertisement

ಗುಡಿಸಲು ವಾಸದಿಂದ ದೊರೆಯದ ಸ್ವಾತಂತ್ರ್ಯ; ಸ್ವಂತ ಸೂರಿನ ಕನಸು ಮರೀಚಿಕೆ

05:37 PM Jan 15, 2021 | Team Udayavani |

ಇಂಡಿ: ಸ್ವಾತಂತ್ರ್ಯ ದೊರೆತು 75 ವರ್ಷವಾಗುತ್ತ ಬಂದಿದ್ದರೂ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬಡವರು ಮೂಲಸೌಕರ್ಯಗಳಿಂದ
ವಂಚಿತರಾಗಿಯೇ ಉಳಿದಿದ್ದಾರೆ. ಇದಕ್ಕೆ ನಿದರ್ಶನವೆಂಬಂತೆ ತಾಲೂಕಿನ ಇಂಗಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಸಾಕಷ್ಟು ಬಡವರು ಇನ್ನೂ ಗುಡಿಸಲಿನಲ್ಲೇ ವಾಸವಿದ್ದಾರೆ. ಅಲ್ಲದೆ ಗ್ರಾಪಂನವರು ಶೇ. 100 ಶೌಚಾಲಯ ಗುರಿ ಸಾಧಿಸಿದ್ದಾಗಿ ಹೇಳುತ್ತಾರೆ. ನೈಜವಾಗಿ ಶೇ.45 ಶೌಚಾಲಯಗಳು ಮಾತ್ರ ನಿರ್ಮಾಣವಾಗಿವೆ. ಇನ್ನೂ ಶೇ. 55 ಜನರಿಗೆ ಶೌಚಾಲಯ ಇಲ್ಲ.

Advertisement

ಗ್ರಾಮದಲ್ಲಿ ತಲೆತಲಾಂತರದಿಂದ ವಾಸವಿರುವ ಸಾವಿತ್ರಿ ನಾಗೇಶ ಹತ್ತರಕಿ, ರಾಣಿ ಅಂಬಣ್ಣಾ ಪೂಜಾರಿ, ಅನಸೂಯಾ ಹಣಮಂತ ಗಳೇದ, ಯಲ್ಲವ್ವ ಬೀರಪ್ಪ
ಮುಚ್ಚಂಡಿ, ಬಂಗಾರೆವ್ವ ಚಂದ್ರಾಮ ಕುಂಬಾರ, ಕಮಲಾಬಾಯಿ ರೇವಣಸಿದ್ದ ಕುಂಬಾರ, ಭಾಗೀರಥಿ ಕಲ್ಯಾಣಿ ಹತ್ತರಕಿ, ನಾಗಮ್ಮ ಧರ್ಮಣ್ಣ ಪೂಜಾರಿ,
ಕಾಸವ್ವ ಶಿವಪ್ಪ ಮುಚ್ಚಂಡಿ, ರತ್ನಾಬಾಯಿ ಪ್ರಭು ಹತ್ತರಕಿ, ಸಾವಿತ್ರಿ ಹಣಮಂತ ಸೋಲಂಕಾರ, ಕಸ್ತೂರಿಬಾಯಿ ಲಿಗಾಡೆ ಸೇರಿದಂತೆ ಇನ್ನೂ ನೂರಾರು ಜನರಿಗೆ ಸ್ವಂತ ಸೂರಿಲ್ಲ. ಇದುವರೆಗೂ ಇವರೆಲ್ಲ ಹುಲ್ಲಿನ ಹೊದಿಕೆಯ ಗುಡಿಸಲಿನಲ್ಲಿಯೇ ವಾಸಿಸುತ್ತಿದ್ದಾರೆ.

ಪ್ರತಿ ಬಾರಿ ಚುನಾವಣೆ ಬಂದಾಗ ಮನೆ ಕಟ್ಟಿಸಿ ಕೊಡ್ತೀವಿ, ಶೌಚಾಲಯ ಕಟ್ಟಿಸ್ತೀವಿ, ಕೃಷಿ ಹೊಂಡ ಹೊಡಿಸಿ ಕೊಡ್ತೀವಿ, ದನಗಳ ಶೆಡ್‌ ಹಾಕಿಸಿ ಕೊಡ್ತೀವಿ ಎಂದು ಪೊಳ್ಳು ಭರವಸೆ ನೀಡುವುದು ಸಾಮಾನ್ಯವಾಗಿದೆ. ಗೆದ್ದ ಮೇಲೆ ಇತ್ತ ಗಮನವನ್ನೇ ಹರಿಸುತ್ತಿಲ್ಲ. ಇದು ಇಂಗಳಗಿ ಗ್ರಾಪಂ ವ್ಯಾಪ್ತಿಯ ಪ್ರಕರಣವಷ್ಟೇ ಅಲ್ಲ, ತಾಲೂಕಿನಾದ್ಯಂತ ಎಲ್ಲ ಗ್ರಾಪಂಗಳಲ್ಲಿ ಇದೇ ವಾತಾವರಣವಿದೆ. ಅದೆಷ್ಟೋ ಬಡವರ ಸ್ವಂತ ಸೂರಿನ ಕನಸು ಮರೀಚಿಕೆಯಾಗಿಯೇ ಉಳಿದಿದೆ.

ಚುನಾವಣೆ ಬಂದಾಗ ಮಾತ್ರ ನಾವು ಎಲ್ಲಿದ್ದೀವಿ ಅಂತ ಹುಡಕತಾರ, ಕೈ ಕಾಲು ಹಿಡಿದು ಮತ ಕೊಡ್ರೀ ಅಂತ ಕೇಳ್ತಾರ, ಆರಿಸಿ ಬಂದ್‌ ಮ್ಯಾಲ ನಾವ್ಯಾರೋ
ಅವರ್ಯಾರೋ ಅನ್ನೂವಂಗ ಆಗ್ಯಾದ.ನಾವು ಹುಟ್ಟಿದಾಗಿನಿಂದ ಇಲ್ಲೀತನ ಒಂದೂ ಪಂಚಾಯ್ತಿ ಕೆಲಸ ನಮಗ ಕೊಟ್ಟಿಲ್ಲ. ನಮಗ ಇರ್ಲಿಕ್ಕ ಒಂದು ಮನಿನೂ ಇಲ್ಲ. ದುಡಿದ್ರೆ ಹೊಟ್ಟಿ ತುಂಬ್ತದ. ಎಂಎಲ್‌ಎ ಅವರು ಬಾಳ ಛಲೋ ಅದಾರ ಅಂತ ಕೇಳೀವಿ. ಆದರ ಭೆಟ್ಟಿ ಆಗೂದು ಆಗಿಲ್ಲ. ಈ ಪಂಚಾಯ್ತಿ ಮೇಂಬರ್‌ಗೊಳು ಕೆಲಸಾ ಮಾಡಾಂಗಿಲ್ಲ. ಬರೇ ರೊಕ್ಕಾಎತ್ತಾದೇ ಇವರ ಕೆಲಸ ಆಗ್ಯಾದ.
ಸಾವಿತ್ರಿ ನಾಗೇಶ ಹತ್ತರಕಿ,
ಇಂಗಳಗಿ ಗ್ರಾಮದ ಮಹಿಳೆ

ಇಂಗಳಗಿ ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳ ಹಂಚಿಕೆಯಲ್ಲಿ ಸಾಕಷ್ಟು ಗೋಲ್‌ಮಾಲ್‌ ನಡೆದಿದೆ. ಒಂದೇ ಮನೆಗೆ ಎರಡು ಬಿಲ್‌ ತೆಗೆದಿದ್ದಾರೆ. ಈ ಕುರಿತು ಸೂಕ್ತ ತನಿಖೆಯಾಗಬೇಕು. ತಾಪಂ ಇಒ ಹಾಗೂ ಜಿಪಂ ಸಿಇಒ ಅವರನ್ನು ಭೇಟಿಯಾಗಿ ತನಿಖೆಗೆ ಒತ್ತಾಯಿಸುತ್ತೇವೆ.
ಜಗುಗೌಡ ಪಾಟೀಲ ಮಾವಿನಹಳ್ಳಿ

Advertisement

*ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next