Advertisement
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ನಾಗೇಶ ಹೆಗಡೆ, ಸುಬ್ರಾಯ ಹೆಗಡೆ, ರಾಮಕೃಷ್ಣ ಹೆಗಡೆ, ನಾರಾಯಣ ಹೆಗಡೆ ಸಹೋದರರು ಸ್ವಾತಂತ್ರ್ಯ ಹೋರಾಟಗಾರರು. ನಾಗೇಶರು ಹಿರಿಯರು, ಪಟೇಲ್ ಹುದ್ದೆಗೆ ರಾಜೀನಾಮೆ ನೀಡಿ ಚಳವಳಿಯಲ್ಲಿ ಧುಮುಕಿದವರು. ಇದು ಕರನಿರಾಕರಣೆ ಚಳವಳಿಯ ಭಾಗವಾಗಿತ್ತು. ಈ ಸಹೋದರರ ಪತ್ನಿಯರೂ ಸಹಿತ ಒಟ್ಟು ಎಂಟು ಮಂದಿ ಬೇರೆ ಬೇರೆ ಅವಧಿಗಳಲ್ಲಿ ಜೈಲುವಾಸ ಅನುಭವಿಸಿದರು. ಕೊನೆಗೆ ಜೈಲಿಗೆ ಹೋದವರು ಸುಬ್ರಾಯ ಹೆಗಡೆ. ಅಲ್ಲಿಯವರೆಗೆ ಇವರು ಮನೆ ನೋಡಿಕೊಳ್ಳುತ್ತಿದ್ದರು. ಹೋಗುವಾಗ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ತೋಟದಲ್ಲಿ ಹೂತರು. ಹೀಗೆ ಒಂದೆರಡು ವರ್ಷ ಕಳೆಯಿತು. ತೋಟದ ಕೆಲಸಕ್ಕೆ ಬರುತ್ತಿದ್ದ ದೇವಿಗೆ ಮಳೆಗಾಲದಲ್ಲಿ ಭಾರೀ ಮಳೆ ಬಂದು ತೋಟದಲ್ಲಿ ಹೂತಿಟ್ಟ ಚಿನ್ನಾಭರಣ ತೋರಿತು. ಮನೆಯಲ್ಲಿ ಯಾರೂ ಇಲ್ಲದ ಕಾರಣ ಆಭರಣಗಳನ್ನು ಮನೆಗೆ ಕೊಂಡೊಯ್ದು ಒಲೆ ಹತ್ತಿರ ಹೂತಿಟ್ಟಳು. ಪೊಲೀಸರಿಗೆ ಗೊತ್ತಾಗುತ್ತದೋ ಎಂಬ ಭಯದಿಂದ ಗಂಡ ಶಿವನಿಗೂ ಹೇಳಿರಲಿಲ್ಲ.
Related Articles
Advertisement
ಘಟನೆ ನಡೆಯುವಾಗ ಸಿದ್ದಾಪುರದಿಂದ 32 ಕಿ.ಮೀ. ದೂರದ ಕೆಳಗಿನ ಮನೆಯಲ್ಲಿ ನಾಗೇಶ ಹೆಗಡೆ ಸಹೋದರರಿದ್ದರು. ಚಳವಳಿ ಕಾರಣ ಬಡತನ ತಾಂಡವವಾಡಿತು. ಬೇರೆ ಬೇರೆ ಕಡೆ ಕೆಲವು ವರ್ಷಗಳಿದ್ದು ಬಳಿಕ ನೇರಲಮನೆಯಲ್ಲಿ ನೆಲೆನಿಂತರು. ಈಗ ಅವರ ಮೊಮ್ಮಕ್ಕಳು, ಮರಿಮಕ್ಕಳು ನೇರಲಮನೆಯಲ್ಲಿದ್ದಾರೆ. “ನಾವೀಗ ಇರುವುದು ಪಟೇಲರಾಗಿದ್ದ ಬಿಳಿಯ ಗೌಡರ ಋಣದಲ್ಲಿ. ಗೌಡರು ಅಜ್ಜನಿಗೆ ಉಚಿತವಾಗಿ ಜಮೀನು ನೀಡಿದರು. ಅವರು ಮಾಡಿದ ಉಪಕಾರ ಸ್ಮರಣೆಗಾಗಿ ನಮ್ಮಲ್ಲಿ ಹಿಂದಿನಿಂದಲೂ ಏನೇ ಶುಭ ಸಮಾರಂಭ ನಡೆದರೂ ಮೊದಲು ಗೌಡರ ಮನೆಗೆ ಆಮಂತ್ರಣ ಪತ್ರಿಕೆ ನೀಡುತ್ತೇವೆ’ ಎನ್ನುತ್ತಾರೆ ಹೆಗಡೆಯವರ ಮೊಮ್ಮಕ್ಕಳಲ್ಲಿ ಒಬ್ಬರಾದ ಸಿದ್ದಾಪುರ ನಿವಾಸಿ ಮಂಜುನಾಥ ಹೆಗಡೆ. ನಾಲ್ಕನೆಯ ತಲೆಮಾರಿನವರು ಇದ್ದಾರೆ. ದೇವಿಯವರ ಮರಿಮಗ ಮಂಜುನಾಥ ಈರ ಮತ್ತು ದೇವಿಯ ಐದನೆಯ ತಲೆಮಾರಿನವರು ಬಿಜ್ಜಾಳದಲ್ಲಿದ್ದಾರೆ. “ದೇವಿಯ ದೀವಿಗೆ’ ಎಂಬ ನಾಟಕ ಒಂದೆರಡು ವರ್ಷಗಳ ಹಿಂದೆಯೂ ಪ್ರದರ್ಶನಗೊಂಡಿದೆ. ಇವೆಲ್ಲಕ್ಕೂ ಮಿಗಿಲಾಗಿ ಎರಡೂ ತಲೆಮಾರಿನಲ್ಲಿ ಈಗ ಸಿಗುವ ಇಬ್ಬರ ಹೆಸರೂ ಮಂಜುನಾಥ, ಇದು ಕಾಕತಾಳೀಯ, ಕಾಣದ ಕೈಗಳ ಕೈವಾಡ!.
ಸ್ವಾತಂತ್ರ್ಯ ಹೋರಾಟದಲ್ಲಿ ಎಲ್ಲವನ್ನೂ ಕಳೆದುಕೊಂಡ ನಾಗೇಶ ಹೆಗಡೆ ಸಹೋದರರು, ಬಂಗಾರದ ಇನಾಮು ಕೊಟ್ಟರೂ ಮುಟ್ಟದ, ಪೊಲೀಸರ ಪೆಟ್ಟಿನಿಂದ ಗಂಡ ಸತ್ತರೂ ಬಾಯಿ ಬಿಡದ ದೇವಿಯಂತಹ ಸಾವಿರಾರು ಜನರ ತ್ಯಾಗದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿತು. ಈ ತೆರನಾಗಿ ಸಿಕ್ಕಿದ ಸ್ವಾತಂತ್ರ್ಯ ಬಳಿಕದ ದಿನಗಳಲ್ಲಿ ಹೇಗೆ ಹಳಿ ತಪ್ಪಿ ಈಗ ಯಾವ ಮಟ್ಟಕ್ಕೆ ತಲುಪಿದೆ? ಯಾರೋ ಕಷ್ಟಪಟ್ಟು ತಂದಿತ್ತ ಅಧಿಕಾರವನ್ನು ಅನುಭವಿಸಲು ಎಂತಹ ಮಟ್ಟಕ್ಕೆ ಇಳಿಯುತ್ತಿದ್ದೇವೆ? ಪ್ರಾಮಾಣಿಕ ಅಧಿಕಾರಿಗಳನ್ನು ಅವಹೇಳನ ಮಾಡುವ ಆಡಳಿತಾರೂಢರು ಭ್ರಷ್ಟರಿಗೆ ಮಣೆ ಹಾಕುತ್ತಿದ್ದಾರೆ. ಆಡಳಿತಾರೂಢರು, ಅಧಿಕಾರಿಗಳು ಸಾರ್ವಜನಿಕರ ತೆರಿಗೆ ಹಣವನ್ನು ದಯದಾಕ್ಷಿಣ್ಯವಿಲ್ಲದೆ ಪೋಲು ಮಾಡುತ್ತಿರುವುದು, ಭ್ರಷ್ಟಾಚಾರ ಎಗ್ಗಿಲ್ಲದೆ ನಡೆಯುತ್ತಿರುವುದು ಈಗಿನ ಸಾಮಾನ್ಯ ವಿದ್ಯಮಾನ.
– ಮಟಪಾಡಿ ಕುಮಾರಸ್ವಾಮಿ