Advertisement

Amrita Mahotsav: ಸ್ವಾತಂತ್ರ್ಯ ಹೋರಾಟಗಾರರಲ್ಲಿ ದಕ್ಷಿಣ ಕನ್ನಡ, ಉಡುಪಿಯವರಿಗೂ ಸ್ಥಾನ

12:41 AM Aug 31, 2023 | Team Udayavani |

ಕುಂದಾಪುರ: ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವದ (ಆಜಾದಿ ಕಾ ಅಮೃತ್‌ ಮಹೋತ್ಸವ) ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಸಿದ್ಧಪಡಿಸಿದ “ಬೆಳಕಿಗೆ ಬಾರದ ನಾಯಕರು’ ಎಂಬ ಶೀರ್ಷಿಕೆಯಡಿ ದೇಶದ 9, 951 ಮಂದಿ ಸ್ವಾತಂತ್ರ್ಯ ಯೋಧರನ್ನು ಪಟ್ಟಿ ಮಾಡಿದೆ. ಈ ಪೈಕಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಹಲವರು ಸ್ಥಾನ ಪಡೆದಿದ್ದಾರೆ.

Advertisement

ಲಕ್ಷಾಂತರ ಮಂದಿ ಸ್ವಾತಂತ್ರ್ಯ ಚಳವಳಿಯಲ್ಲಿ ತೆರೆಯ ಮರೆಯಲ್ಲೇ ಕೆಲಸ ಮಾಡಿದ್ದರು. ಅವರೆಲ್ಲ ಪ್ರಸಿದ್ಧರೆಂಬ ವ್ಯಾಖ್ಯಾನಕ್ಕೆ ಒಳಗೊಳ್ಳಲಿಲ್ಲ. ಈ ಅನ್‌ಸಂಗ್‌ ಹೀರೋಸ್‌ (ಬೆಳಕಿಗೆ ಬಾರದ ನಾಯಕರು) ವಿಭಾಗವು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮರೆತು ಹೋದ ವೀರರನ್ನು ನೆನಪಿಸಿಕೊಳ್ಳುವ, ದಾಖಲಿಸುವ ಪ್ರಯತ್ನ. ಹೊಸ ಪೀಳಿಗೆಗೆ ಮಹಾನ್‌ ಸ್ವಾತಂತ್ರ್ಯ ಯೋಧರ ಅವರ ನೀತಿ ಮತ್ತು ತಣ್ತೀಗಳನ್ನು ನೆನಪಿಸಿಕೊಳ್ಳಬೇಕು, ಗೌರವಿಸಬೇಕು ಎಂದು ಅವರ ಕಿರು ಪರಿಚಯವನ್ನು ಅಮೃತ ಮಹೋತ್ಸವ ಕುರಿತಾದ ವೆಬ್‌ ಸೈಟ್‌ನಲ್ಲಿ ನೀಡಲಾಗಿದೆ. ಕೇಂದ್ರಾಡಳಿತ ಪ್ರದೇಶ ಸಹಿತ ಪ್ರತೀ ರಾಜ್ಯದ, ಪ್ರತೀ ಜಿಲ್ಲೆಯ ಸ್ವಾತಂತ್ರ್ಯ ಯೋಧರನ್ನು ಗುರುತಿಸಲಾಗಿದೆ. ಆಕಾಶವಾಣಿಯಲ್ಲೂ ಈ ಕುರಿತಾದ ಕಾರ್ಯಕ್ರಮ ಬಿತ್ತರಗೊಂಡಿದೆ.

ಚಿತ್ರಕಥೆ
ರಾಣಿ ಅಬ್ಬಕ್ಕ ಸೇರಿದಂತೆ 20 ಮಂದಿಯ ಸಾಹಸಗಾಥೆಗಳನ್ನು, ಹೋರಾಟಕಥನಗಳನ್ನು ಚಿತ್ರಕಥೆ ರೂಪದಲ್ಲಿ ನೀಡಲಾಗಿದೆ. ಇದಕ್ಕೆ ಅಮರ ಚಿತ್ರಕಥಾ ಸಹಯೋಗ ನೀಡಿದೆ. ಮಕ್ಕಳಿಗೆ ಸುಲಭದಲ್ಲಿ ಅರಿವಾಗುವಂತೆ ಇವನ್ನು ರೂಪಿಸಲಾಗಿದೆ. ಚಿತ್ರಕಥೆಯಲ್ಲಿ ಸ್ಥಾನ ಪಡೆದದ್ದು ಕರ್ನಾಟಕದಿಂದ ಅಬ್ಬಕ್ಕ ಮಾತ್ರ.

ಕರಾವಳಿ ಜಿಲ್ಲೆಯವರು
ದ.ಕ. ಜಿಲ್ಲೆಯ ಅತ್ತಾವರ ಯಲ್ಲಪ್ಪ, ಸುಗುಣಾ ಕಾರ್ನಾಡ್‌ ದೇಸಾಯಿ, ಉಮಾಬಾಯಿ ಕುಂದಾಪುರ, ವಿ.ಎನ್‌. ಒಕೆ, ಎಸ್‌.ಎನ್‌. ಕಿಲ್ಲೆ, ಕಾರ್ನಾಡು ಸದಾಶಿವ ರಾವ್‌, ಅಮ್ಮೆಂಬಳ ಬಾಳಪ್ಪ, ಹರಿವಿಷ್ಣು ಕಾಮತ್‌, ವೀರರಾಣಿ ಅಬ್ಬಕ್ಕ, ಯು. ಶ್ರೀನಿವಾಸ ಮಲ್ಯ, ಉಡುಪಿ ಜಿಲ್ಲೆಯ ಬಸ್ರೂರು ಸದಾಶಿವ ದೇವಾಡಿಗ, ಅಂಬಾಬಾಯಿ ಪೈ ಉಡುಪಿ, ಉಮಾಬಾಯಿ ಕುಂದಾಪುರ (ಮೂಲತಃ ಮಂಗಳೂರು, ವಿವಾಹವಾದುದು ಕುಂದಾಪುರಕ್ಕೆ), ವಿಟಲ ಪೈ ಕುಂದಾಪುರ, ಕುಂದಾಪುರದ ಹಲ್ಸನಾಡು ಸೂರಪ್ಪಯ್ಯ, ಕುಂಭಾಶಿ ನರಸಿಂಹ ಬಾಬಣ್ಣ ಕಾಮತ್‌, ಕೃಷ್ಣರಾಯ ಕೊಡ್ಗಿ ಅಮಾಸೆಬೈಲು, ಬಸ್ರೂರು ಸುಬ್ಬಣ್ಣ ಶೆಟ್ಟಿ, ಗೋಪಾಲಕೃಷ್ಣ ಶೆಣೈ ಬಸ್ರೂರು , ಬಸ್ರೂರು ಸೂರಪ್ಪ ಶೆಟ್ಟಿ, ಆನಗಳ್ಳಿಯ ಕಳಂಜಿ ರಾಮಕೃಷ್ಣ ಭಟ್ಟ, ಉಡುಪಿಯ ನಿರುಪಮಾ, ಬಳ್ಕೂರಿನ ಗಾಂಧಿ ರಾಮಣ್ಣ ಶೆಟ್ಟಿ ಅವರ ಪರಿಚಯ ಇದೆ.

ಉಪ್ಪಿನ ಸತ್ಯಾಗ್ರಹ ನಡೆಸಿದ ಕೃಷ್ಣರಾಯ ಕೊಡ್ಗಿ, ಅಂಬಾಬಾಯಿ ಪೈ ಉಡುಪಿ, ಹೊಟೇಲ್‌ನಲ್ಲಿ ದೇಶಭಕ್ತರಿಗೆ ಉಚಿತ ಊಟೋಪಹಾರ ನೀಡಿ ಹೋರಾಟದಿಂದ ಜೈಲು ಪಾಲಾಗಿ ಜೈಲುಭತ್ತೆ ಪಡೆಯದೇ ಪಡಿಪಾಟಲು ಪಟ್ಟು ಊರಿಗೆ ಬಂದ ವಿಟಲ ಪೈ ಕುಂದಾಪುರ, ಸಾರಾಯಿ ಅಂಗಡಿಗಳ ವಿರುದ್ಧ, ಬ್ರಿಟಿಷರ ವಿರುದ್ಧ, ವಿದೇಶಿ ವಸ್ತುಗಳ ವಿರುದ್ಧ ಪ್ರತಿಭಟನೆ ನಡೆಸಿದ ಗಾಂಧಿ ರಾಮಣ್ಣ ಶೆಟ್ಟಿ, ಸುಬ್ಬಣ್ಣ ಶೆಟ್ಟಿ, ಸೂರಪ್ಪ ಶೆಟ್ಟಿ ಮೊದಲಾದವರ ವಿವರಗಳನ್ನು ನೀಡಲಾಗಿದೆ. ಗಾಂಧಿಯ ಜತೆಗಿದ್ದು ಬಳಿಕ ಸುಭಾಸ್‌ಚಂದ್ರ ಬೋಸ್‌ ಅವರ ಸೇನೆ ಸೇರಿದ ಕುಂಭಾಶಿ ನರಸಿಂಹ ಬಾಬಣ್ಣ ಕಾಮತ್‌, ತಿಲಕರ ಅಂತ್ಯಕ್ರಿಯೆಯಲ್ಲಿ ಸಂಘಟನೆಯ ಶಿಸ್ತು ಕಂಡು ಚಳವಳಿಗೆ ಕಾಲಿಟ್ಟ ಉಮಾಬಾಯಿ ಕುಂದಾಪುರ, ವಾರಾಹಿಯಲ್ಲಿ ಮುಳುಗಿದ ಗಾಂಧಿ ರಾಮಣ್ಣ ಶೆಟ್ಟಿ, ಗಾಂಧೀಜಿಗೆ ಒಡವೆಗಳನ್ನು ನೀಡಿದ ನಿರುಪಮಾ, ಗಾಂಧೀಜಿ ಉಪವಾಸ ಸತ್ಯಾಗ್ರಹ ಮಾಡಿದಾಗ ಮನೆಯಲ್ಲೇ ಸತ್ಯಾಗ್ರಹ ಮಾಡುತ್ತಿದ್ದ ಸೂರಪ್ಪ ಶೆಟ್ಟಿ ಹೀಗೆ ಅನೇಕರ ವಿಶಿಷ್ಟ ಕತೆಗಳು ಈ ಮಾಲಿಕೆಯಲ್ಲಿವೆ. ಇಲ್ಲಿ ಪ್ರಕಟಿಸಿದ ಯೋಧರ ಪೈಕಿ ಕೆಲವರು 1972ರಲ್ಲಿ ನಡೆದ ಸ್ವಾತಂತ್ರದ ಬೆಳ್ಳಿ ಹಬ್ಬದ ಸಂದರ್ಭ ಸಮ್ಮಾನಿಸಲ್ಪಟ್ಟಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next