ಬೆಂಗಳೂರು: ರಾಜ್ಯದ 500 ಗ್ರಾಮ ಪಂಚಾಯ್ತಿಗಳಲ್ಲಿ ಈಗಾಗಲೇ ಉಚಿತ ವೈಫೈ ಸೇವೆ ಒದಗಿಸಲಾಗಿದ್ದು, ಮಾರ್ಚ್ ವೇಳೆಗೆ ಎಲ್ಲ ಗ್ರಾಪಂಗಳಲ್ಲೂ ವೈಫೈ ಸೇವೆ ಒದಗಿಸಲಾಗುವುದು.
ಹಾಗೆಯೇ 11 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಉಚಿತ ವೈ-ಫೈ ಸೇವೆ ಒದಗಿಸಲು ಪ್ರಯತ್ನ ನಡೆದಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಎಸಿಟಿ ಫೈಬರ್‌ನೆಟ್ ಸಂಸ್ಥೆಯು ಬೆಂಗಳೂರಿನಲ್ಲಿ ಆರಂಭಿಸಿರುವ 1ಜಿಬಿಪಿಎಸ್ (ಗಿಗಾ ಬೈಟ್ಸ್ ಪರ್ ಸೆಕೆಂಡ್) ವೇಗದ ವೈರ್x ಬ್ರಾಡ್‌ಬ್ಯಾಂಡ್ ಸೇವೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮ ಪಂಚಾಯ್ತಿಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುವ ಮೂಲಕ ಗ್ರಾಮೀಣ ಜನರ ಇಂಟರ್ ನೆಟ್ ಬಳಕೆಗೆ ಸೌಲಭ್ಯ ನೀಡಲಾಗಿದೆ. ಮಾರ್ಚ್ ಹೊತ್ತಿಗೆ ಎಲ್ಲಾ ಗ್ರಾಪಂಗಳಲ್ಲೂ ಈ ಸೇವೆ ಒದಗಿಸಲು ಪ್ರಯತ್ನ ನಡೆದಿದ್ದು, ಆ ಮೂಲಕ ಗ್ರಾಮಾಂತರ ಪ್ರದೇಶದಲ್ಲಿ ಸ್ಥಳೀಯ ಮಟ್ಟದಲ್ಲಿ ಉಚಿತ ವೈಫೈ ಸೇವೆ ಒದಗಿಸಿದ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಲಿದೆ ಎಂದು ಹೇಳಿದರು.
ರಾಜ್ಯದ 11 ನಗರ ಪಾಲಿಕೆಗಳ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳು, ಜನನಿಬಿಡ ಪ್ರದೇಶಗಳಲ್ಲಿ ಉಚಿತ ವೈಫೈ ಸೇವೆ ಒದಗಿಸುವ ಸಂಬಂಧ ಆಸಕ್ತ ಸಂಸ್ಥೆಗಳಿಂದ (ಎಕ್ಸ್‌ಪ್ರೆಷನ್ ಆಫ್ ಇಂಟೆರೆಸ್ಟ್) ಅರ್ಜಿ ಆಹ್ವಾನಿಸಲಾಗಿದೆ. ಈ ಯೋಜನೆಗೆ ಸರ್ಕಾರ ಬಿಡಿಗಾಸು ವೆಚ್ಚ ಮಾಡುವುದಿಲ್ಲ. ಸಂಸ್ಥೆಗಳು ತಮ್ಮದೇ ಖರ್ಚಿನಲ್ಲಿ ಸೇವೆ ಕಲ್ಪಿಸಿ ಆರಂಭಿಕ ಕೆಲ ನಿಮಿಷ ಉಚಿತ ವೈಫೈ ನೀಡಿ ನಂತರದ ಬಳಕೆಗೆ ಶುಲ್ಕ ವಿಧಿಸಬಹುದು. ಆಸಕ್ತ ಸಂಸ್ಥೆಗಳು ಅರ್ಜಿ ಸಲ್ಲಿಸಲು ನೀಡಿದ್ದ ಕಾಲಾವಕಾಶ ಮಂಗಳವಾರ ಮುಕ್ತಾಯವಾಗಿದ್ದು, ಪರಿಶೀಲನೆ ಇನ್ನಷ್ಟೇ ಆರಂಭವಾಗಬೇಕಿದೆ. ನಿರೀಕ್ಷೆಯಂತೆ ಎಲ್ಲ ಪ್ರಕ್ರಿಯೆ ನಡೆದರೆ ತಿಂಗಳಲ್ಲಿ ಈ ಸೇವೆ ಆರಂಭವಾಗುವ ನಿರೀಕ್ಷೆ ಇದೆ ಎಂದರು.
ಒಟ್ಟು 88 ಸ್ಟಾರ್ಟ್‌ಅಪ್‌ಗ್ಳಿಗೆ 20 ಕೋಟಿ ರೂ.ಪ್ರೋತ್ಸಾಹ ಧನ ನೀಡಿರುವ ರಾಜ್ಯ ಮತ್ತೂಂದಿಲ್ಲ.ರಾಜ್ಯ ಸರ್ಕಾರದ ಸ್ಟಾರ್ಟ್‌ಅಪ್ ಸೆಲ್‌ನಲ್ಲಿ 6000 ಸ್ಟಾರ್ಟ್‌ಅಪ್‌ಗ್ಳು ನೋಂದಣಿಯಾಗಿದ್ದು, ಕಂಪನಿಯು ಈ ಸ್ಟಾರ್ಟ್‌ಅಪ್‌ಗ್ಳಿಗೆ ಅತಿ ವೇಗದ ಬ್ರಾಡ್‌ಬ್ಯಾಂಡ್ ಸೇವೆ ಕಲ್ಪಿಸಿದರೆ ಇನ್ನಷ್ಟು ಕ್ರಿಯಾಶೀಲವಾಗಿ, ನಾವೀನ್ಯತೆಯಿಂದ ಕಾರ್ಯ ನಿರ್ವಹಿಸಲು ಅನುಕೂಲವಾಗಬಹುದು. ಅದೇ ರೀತಿ ವಿಧಾನ ಸೌಧದಲ್ಲಿನ ಕಚೇರಿಗಳಿಗೂ ಅತಿ ವೇಗದ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸುವತ್ತ ಗಮನ ಹರಿಸಬೇಕು. ಈ ಸಂಬಂಧ ಇ-ಆಡಳಿತ
ಇಲಾಖೆಯೊಂದಿಗೆ ಚರ್ಚಿಸಬಹುದು ಎಂದರು.
ಎಸಿಟಿ ಫೈಬರ್‌ನೆಟ್ ಸಂಸ್ಥೆಯ ಬಾಲ ಮಲ್ಲಾಡಿ, ಹೈದರಾಬಾದ್‌ನಲ್ಲಿ 1ಜಿಬಿಪಿಎಸ್ ಸೇವೆ ಜಾರಿ ಯಶಸ್ಸಿನ ಬಳಿಕ ಬೆಂಗಳೂರಿನಲ್ಲಿ ಈ ಸೇವೆ ಪರಿಚಯಿಸಲಾಗುತ್ತಿದೆ. ಸಚಿವರ ಸಲಹೆಯಂತೆ 6000 ಸ್ಟಾರ್ಟ್‌ಅಪ್‌ಗ್ಳಿಗೆ ಕಂಪನಿ ವತಿಯಿಂದ ಅಗತ್ಯ ಸಹಕಾರ ನೀಡುವ ಬಗ್ಗೆ ಚಿಂತಿಸಲಾಗುವುದು ಎಂದರು. ಎಸಿಟಿ ಫೈಬರ್‌ನೆಟ್‌ನ ಸ್ಥಾಪಕ ವ್ಯವಸ್ಥಾಪಕ ನಿರ್ದೇಶಕ ಸುಂದರ್‌ರಾಜು ಉಪಸ್ಥಿತರಿದ್ದರು.