Advertisement

ಸಿಟಿ ಬಸ್‌ ಗಳಲ್ಲೂ ಪ್ರಯಾಣಿಕರಿಗೆ ಸಿಗಲಿದೆ ಉಚಿತ ವೈಫೈ

02:45 AM Jun 13, 2018 | Team Udayavani |

ಮಹಾನಗರ: ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಮಂಗಳೂರು ನಗರದಲ್ಲಿ ಸಂಚರಿಸುವ ಖಾಸಗಿ ಸಿಟಿ ಬಸ್‌ ಗಳಲ್ಲಿ ಕೂಡ ಹಂತ ಹಂತವಾಗಿ ವೈಫೈ ತಂತ್ರಜ್ಞಾನ ಅಳವಡಿಸುವ ಮೂಲಕ ಉಚಿತ ಇಂಟರ್‌ ನೆಟ್‌ ಸೇವೆ ಒದಗಿಸುವುದಕ್ಕೆ ಖಾಸಗಿ ಬಸ್‌ ಮಾಲಕರ ಸಂಘದವರು ಚಿಂತನೆ ನಡೆಸುತ್ತಿದ್ದಾರೆ. ಜೂನ್‌ ತಿಂಗಳ ಕೊನೆಯ ವಾರದಲ್ಲಿ ಖಾಸಗಿ ಸಿಟಿ ಬಸ್‌ ಮಾಲಕರ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಪ್ರಯಾಣಿಕರಿಗೆ ಉಚಿತ ಇಂಟರ್‌ ನೆಟ್‌ ಸೇವೆ ಒದ ಗಿಸುವ ಬಗ್ಗೆ ಚರ್ಚೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ಉದ್ದೇಶಿಸಲಾಗಿದೆ.

Advertisement

ಆದರೆ, ಪ್ರಾಯೋಗಿಕವಾಗಿ ಒಂದು ವರ್ಷದ‌ ಹಿಂದೆಯೇ ಸ್ಟೇಟ್‌ ಬ್ಯಾಂಕ್‌ ನಿಂದ ಹೂಹಾಕುವಕಲ್ಲಿಗೆ ತೆರಳುವ 54 ಮಾರ್ಗ ಸಂಖ್ಯೆಯ ಗೋಲ್ಡನ್‌ಲೈನ್‌ ಬಸ್‌ ನಲ್ಲಿ ಮಾಲಕರು ಉಚಿತ ವೈಫೈ ವ್ಯವಸ್ಥೆ ಅಳವಡಿಸಿದ್ದರು. ಇಂದಿಗೂ ಈ ಸೌಲಭ್ಯ ಮುಂದುವರಿದಿದೆ. ಪ್ರತಿ ದಿನ ಸುಮಾರು 3.5ಜಿ.ಬಿ. ವೈಫೈ ಉಪಯೋಗವಾಗುತ್ತಿದ್ದು,ಪ್ರಯಾಣಿಕರು ಯಾವುದೇ ಪಾಸ್‌ ವರ್ಡ್‌ ಕೂಡ ನಮೂದು ಮಾಡದೆ ಉಚಿತವಾಗಿ ಇಂಟರ್‌ ನೆಟ್‌ ಸೇವೆ ಬಳಸಿ ಕೊಳ್ಳಬಹುದು. ಇದೇ ಕಾರಣಕ್ಕೆ ಈ ಬಸ್‌ ನಲ್ಲಿ ದಿನಂಪ್ರತಿ ಸುಮಾರು 150ಕ್ಕೂ ಹೆಚ್ಚಿನ ಮಂದಿ ಪ್ರಯಾಣಿಕರು ಇದರ ಲಾಭ ಪಡೆಯುತ್ತಿದ್ದಾರೆ. ಅಷ್ಟೇ ಅಲ್ಲದೆ, ವೈಫೈ ಅಳವಡಿಸಿದ ಬಳಿಕ ಬಸ್‌ ಗೆ ಬರುವ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ ಎನ್ನುತ್ತಾರೆ ಮಾಲಕರು.

ಯುವಕರನ್ನು ಸೆಳೆಯುವ ತಂತ್ರ
ಸಿಟಿ ಖಾಸಗಿ ಬಸ್‌ ರೂಟ್‌ ಗಳಲ್ಲಿನ ವಿವಿಧೆಡೆ KSRTC ಸಿಟಿ ಬಸ್‌ ಕೂಡ ಸಂಚರಿಸುವುದರಿಂದಾಗಿ ಖಾಸಗಿ ಬಸ್‌ ಗಳಿಗೆ ಬರುವಂತಹ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಬಾರದು ಎಂಬ ಉದ್ದೇಶದಿಂದ ಈ ನೂತನ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೆ, ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದು, ಉಚಿತ ವೈಫೈ ವ್ಯವಸ್ಥೆ ಜಾರಿಗೆ ತಂದರೆ ಯುವಕರನ್ನು ಸೆಳೆಯಬಹುದು ಎಂಬ ಲೆಕ್ಕಾಚಾರ ಬಸ್‌ ಮಾಲಕರದ್ದು.

ಬೆಂಗಳೂರಿನಲ್ಲಿ ಬಿಎಂಟಿಸಿ ಎಸಿ ಬಸ್‌ಗಳಲ್ಲಿ ಕೂಡ ಈಗ ವೈಫೈ ವ್ಯವಸ್ಥೆ ಅಳವಡಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವೈಟ್‌ಫಿಲ್ಡ್‌, ಎಲೆಕ್ಟ್ರಾನಿಕ್‌ ಸಿಟಿ ಸಹಿತ ಇನ್ನಿತರ ರೂಟ್‌ ಗಳಲ್ಲಿ ಸಂಚರಿಸುವ ಸುಮಾರು 200 ಬಸ್‌ಗಳಲ್ಲಿ ವೈಫೈ ಅಳವಡಿಸಲಾಗಿದೆ. ಈ ವ್ಯವಸ್ಥೆಯನ್ನು ಉಪಯೋಗಿಸುವ ಮಂದಿ ಕೂಡ ಹೆಚ್ಚಿದೆ. ಸಾಮಾನ್ಯವಾಗಿ ಒಂದು ಬಸ್‌ ಗೆ ವೈಫೈ ಅಳವಡಿಸಲು ವೈಫೈ ರೂಟರ್‌ ಗೆ ಸುಮಾರು 2 ಸಾವಿರ ರೂ. ಖರ್ಚಾಗಬಹುದು. ರೂಟರ್‌ ಅನ್ನು ವಿದ್ಯುತ್‌ ಮೂಲಕ ಪ್ರತೀದಿನ ಚಾರ್ಜ್‌ ಮಾಡಬಹುದು. ಬಳಿಕ ವಿವಿಧ ಕಂಪೆನಿ ನೆಟ್‌ ವರ್ಕ್‌ ಗಳಲ್ಲಿ ಇಂಟರ್‌ನೆಟ್‌ ಆಫರ್‌ ಗಳಿದ್ದು, ಪ್ರಯಾಣಿಕರ ಬಳಕೆಯ ಆಧಾರದಲ್ಲಿ ಡಾಟ ಬಳಕೆಯನ್ನು ಹೆಚ್ಚಿಸಬಹುದು.

ಪ್ರಯಾಣಿಕರಿಗೆ ಅನುಕೂಲ
ಸ್ಮಾರ್ಟ್‌ಸಿಟಿಯಾಗಿ ಬೆಳೆಯುತ್ತಿರುವ ಮಂಗಳೂರಿನ KSRTC ಬಸ್‌ ಗಳಲ್ಲಿ ಈಗಾಗಲೇ ಉಚಿತ ವೈಫೈ ವ್ಯವಸ್ಥೆ ಇದೆ. ಅದೇ ರೀತಿ ಮಂಗಳೂರು ಸೆಂಟ್ರಲ್‌ ರೈಲ್ವೆ ನಿಲ್ದಾಣದಲ್ಲಿ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿನ ಉಚಿತ ವೈಫೈ ವ್ಯವಸ್ಥೆಯ ಲಾಭವನ್ನು ಪ್ರಯಾಣಿಕರು ಪಡೆಯುತ್ತಿದ್ದಾರೆ. ಈಗ ಮಂಗಳೂರಿನ ಸಿಟಿ ಖಾಸಗಿ ಬಸ್‌ ಗಳು ಉಚಿತ ವೈಫೈ ವ್ಯವಸ್ಥೆ ಅಳವಡಿಸಲು ಮುಂದಾಗಿದ್ದಾರೆ.

Advertisement

ಒಂದು ಲಕ್ಷ ಮಂದಿಗೆ ಉಪಯೋಗ
ನಗರದಲ್ಲಿ ಒಟ್ಟು 363 ಸಿಟಿ ಬಸ್‌ ಗಳಿದ್ದು, ದಿನಂಪ್ರತಿ ಸುಮಾರು 1 ಲಕ್ಷ ಪ್ರಯಾಣಿಕರು ಸಂಚರಿಸುತ್ತಾರೆ. ಅದರಲ್ಲಿ ಶೇ.25ರಷ್ಟು ವಿದ್ಯಾರ್ಥಿಗಳು ಸಂಚರಿಸುತ್ತಾರೆ. ಎಲ್ಲಾ ಸಿಟಿ ಬಸ್‌ ಗಳಲ್ಲಿ ವೈಫೈ ಅಳವಡಿಸಿದರೆ ಒಂದು ಲಕ್ಷ ಮಂದಿ ಇದರ ಉಪಯೋಗ ಪಡೆಯಬಹುದು.

ಸಭೆಯಲ್ಲಿ ಈ ಬಗ್ಗೆ ಚರ್ಚೆ
ಮಂಗಳೂರಿನ ಖಾಸಗಿ ಬಸ್‌ ಗಳಲ್ಲಿ ಉಚಿತ ವೈಫೈ ವ್ಯವಸ್ಥೆಯನ್ನು ಮತ್ತಷ್ಟು ಬಸ್‌ ಗಳಿಗೆ ವಿಸ್ತರಿಸಲು ಚಿಂತಿಸುತ್ತಿದ್ದೇವೆ. ಜೂನ್‌ ಕೊನೆಯ ವಾರದಲ್ಲಿ ನಡೆಯುವ ಮಾಲಕರ ಸಂಘದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ. ಉಚಿತ ವೈಫೈ ವ್ಯವಸೆಯನ್ನು ಇಲ್ಲಿಯವರೆಗೆ ಯಾರೂ ಕೂಡ ದುರುಪಯೋಗ ಪಡಿಸಿಕೊಂಡಿಲ್ಲ. ಆದರೆ ಇದನ್ನು ತಡೆಯುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ನಿಷೇಧಿತ ಅಂತರ್ಜಾಲ ತಾಣಗಳನ್ನು ಬ್ಲಾಕ್‌ ಮಾಡಲಾಗುವುದು.
– ಅಜೀಜ್‌ ಪರ್ತಿಪಾಡಿ, ಖಾಸಗಿ ಬಸ್‌ ಮಾಲಕರ ಸಂಘದ ಅಧ್ಯಕ್ಷ

ಉತ್ತಮ ವ್ಯವಸ್ಥೆ
ಒಂದು ವರ್ಷಗಳಿಂದ ಸ್ಟೇಟ್‌ ಬ್ಯಾಂಕ್‌ ನಿಂದ ಹೂಹಾಕುವಕಲ್ಲಿಗೆ ತೆರಳುವ ಬಸ್‌ ನಲ್ಲಿ ವೈಫೈ ಇದೆ. ಬಸ್‌ ನಲ್ಲಿ ಪ್ರಯಾಣಿಸುವ ಹೆಚ್ಚಿನ ಮಂದಿ ಈ ವ್ಯವಸ್ಥೆಯನ್ನು ಉಪಯೋಗಿಸುತ್ತಾರೆ. ಗ್ರಾಮೀಣ ಭಾಗದ ಕೆಲವೊಂದು ಕಡೆಗಳಲ್ಲಿ ಅಂತ ರ್ಜಾಲ ಇಲ್ಲ. ಹೀಗಿರುವಾಗ ವೈಫೈ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
– ಸಂತೋಷ್‌, ಬಸ್‌ ಪ್ರಯಾಣಿಕ 

— ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next