Advertisement
254ರಲ್ಲಿ 194 ಜನರು ಬಿಡುಗಡೆ1,400 ಜನರಲ್ಲಿ 254 ಜನರು ಒಂದಲ್ಲ ಒಂದು ರೀತಿಯಲ್ಲಿ ಗಂಭೀರ ಸ್ಥಿತಿಯವರು. ಇವರಲ್ಲಿ 194 ಜನರು ಬಿಡುಗಡೆಗೊಂಡಿದ್ದು ಈಗ 60 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪಾಸಿಟಿವ್ ಇರುವಾಗಲೇ ಓರ್ವ ಗರ್ಭಿಣಿಗೆ ಹೆರಿಗೆ ಮಾಡಿಸಿದ್ದು ವಿಶೇಷ ಪ್ರಕರಣವಾಗಿದೆ. ಇನ್ನೋರ್ವ ಗರ್ಭಿಣಿಗೆ ರೋಗದ ಶಂಕೆ ಇತ್ತು. ಒಟ್ಟು 10 ಜನರಿಗೆ ಐಸಿಯು ಚಿಕಿತ್ಸೆ ನೀಡಲಾಗಿತ್ತು.
ಎ. 1ರಿಂದ ರಾಜ್ಯದಲ್ಲಿ ಮೊದಲ ಬಾರಿ ಇಂತಹ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದ ಮೊದಲ ಪ್ರಯೋಗ ನಡೆದ ಬಳಿಕ ರಾಜ್ಯದ ಇನ್ನಾವುದೇ ಕಡೆ ಇಂತಹ ಪ್ರಯೋಗ ನಡೆದಿಲ್ಲ ಎನ್ನುವುದು ಹೆಚ್ಚುಗಾರಿಕೆಯಾಗಿದೆ. ರಾಜ್ಯದಲ್ಲಿ ಇದೊಂದೇ ಖಾಸಗಿ ಕೋವಿಡ್ ಆಸ್ಪತ್ರೆ ಕಾರ್ಯಾಚರಿಸುತ್ತಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 120 ಬೆಡ್‌ಗೆ ಏರಿಕೆ
100 ಹಾಸಿಗೆಗಳ ಆಸ್ಪತ್ರೆ ಇದಾಗಿದೆ. 11 ತೀವ್ರ ನಿಗಾ ಘಟಕ ಹಾಸಿಗೆಗಳು, 15 ಎಚ್‌ಡಿಯು ಹಾಸಿಗೆಗಳು, 36 ಖಾಸಗಿ ಕೊಠಡಿಗಳ ಜತೆಗೆ 43 ಸಾಮಾನ್ಯ ಹಾಸಿಗೆಗಳನ್ನು ಇದಕ್ಕಾಗಿ ಮೀಸಲಿರಿಸಲಾಗಿದೆ. ಪ್ರಾರಂಭದಲ್ಲಿ 100 ಬೆಡ್‌ಗಳಿದ್ದ ಈ ಆಸ್ಪತ್ರೆಯನ್ನು ಕೆಲವೇ ದಿನಗಳಲ್ಲಿ ಮತ್ತೆ 20ರಷ್ಟು ಹೆಚ್ಚಿಸಲಾಗಿತ್ತು.
Related Articles
ಕೋವಿಡ್ ಸೋಂಕಿನಲ್ಲಿ ಎರಡು ವಿಧ. ಒಂದು ಸೋಂಕಿನ ಲಕ್ಷಣ ಇರುವವರು. ಮತ್ತೂಂದು ಲಕ್ಷಣ ಇಲ್ಲದೆ ಇರುವವರು. ಜಿಲ್ಲಾಡಳಿತವು ಸೋಂಕು ಲಕ್ಷಣ ಇರುವವರನ್ನು ಮಾತ್ರ ಡಾ| ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಿ ಮತ್ತು ಲಕ್ಷಣ ಇಲ್ಲದೆ ಇರುವವರನ್ನು ಅಥವಾ ಕಡಿಮೆ ಲಕ್ಷಣ ಇರುವವರನ್ನು ಕುಂದಾಪುರ ಮತ್ತು ಕಾರ್ಕಳ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದೆ.
Advertisement
ಉಡುಪಿ ಜಿಲ್ಲೆಗೆ ಕೊಡುಗೆಮಾಹೆ ಹಾಗೂ ಜಿಲ್ಲಾಡಳಿತದ ನಡುವೆ ನಡೆದ ಒಪ್ಪಂದದಂತೆ ಉಡುಪಿ ಜಿಲ್ಲೆಯ ಕೊರೊನಾ ಸೋಂಕಿತರಿಗೆ ಮಾತ್ರ ಇಲ್ಲಿ ಚಿಕಿತ್ಸೆ ನೀಡುವುದೆಂದು ನಿರ್ಣಯಿಸಲಾಗಿತ್ತು. ಈ ನಡುವೆ ಭಟ್ಕಳದ ಗರ್ಭಿಣಿಯೊಬ್ಬರು ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲೆಯವರು ಅಲ್ಲದಿದ್ದರೂ ಮಾನವೀಯತೆ ದೃಷ್ಟಿಯಿಂದ ಒಪ್ಪಿಗೆ ಪಡೆದು ಅವರಿಗೆ ಚಿಕಿತ್ಸೆ ನೀಡಿ ಗುಣಪಡಿಸಲಾಗಿತ್ತು. 1.25 ಕೋ.ರೂ. ಖರ್ಚು
ಎ. 1ರಂದು ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್-19 ಚಿಕಿತ್ಸೆಗೆ ಮೀಸಲು ಎಂದು ಘೋಷಿಸಿಕೊಂಡ ಬಳಿಕ ಆಸ್ಪತ್ರೆಯ ಸೇವಾ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸಲು ಮತ್ತು ಆಸ್ಪತ್ರೆಯನ್ನು ಕೋವಿಡ್-19 ಚಿಕಿತ್ಸೆಗೆ ಸೂಕ್ತವಾಗಿ ಅನ್ವಯವಾಗುವಂತೆ ಮಾಡಲು 50 ಲ.ರೂ. ವೆಚ್ಚ ಮಾಡಲಾಗಿತ್ತು. ರೋಗಿಗಳ ಆಹಾರ ವೆಚ್ಚ ಸಹಿತ 3 ತಿಂಗಳಲ್ಲಿ 75 ಲ.ರೂ. ವೆಚ್ಚವಾಗಿದೆ. ನವೀಕರಣ ಸಹಿತ ಇನ್ನಿತರ ಬದಲಾವಣೆಗಳನ್ನು ಸೇರಿಸಿಕೊಂಡರೆ ಒಟ್ಟು 1.25 ಕೋ.ರೂ.ಗಳನ್ನು ಇದಕ್ಕಾಗಿ ವಿನಿಯೋಗಿಸಲಾಗಿದೆ. ಹಗಲಿರುಳು ಸೇವೆ
ರೋಗಿಗಳ ಸೇವೆ ಮಾಡಲೆಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ಮತ್ತು ಡಾ| ಟಿಎಂಎ ಪೈ ಆಸ್ಪತ್ರೆಯ ವೈದ್ಯರ ತಂಡ, ನರ್ಸಿಂಗ್, ಅರೆವೈದ್ಯಕೀಯ ಸಿಬಂದಿ ಮತ್ತು ಇತರ ಸಿಬಂದಿ ದಿನದ 24 ಗಂಟೆಯೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 80 ವೈದ್ಯರು, 80 ನರ್ಸ್ ಗಳು ರೋಗಿಗಳ ಆರೈಕೆಯಲ್ಲಿ ನಿರತರಾಗಿದ್ದಾರೆ. 60 ಮಂದಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ವೈದ್ಯರಿಗೆ ಆನ್‌ಲೈನ್ ತರಬೇತಿ
ಕೋವಿಡ್-19 ರೋಗವನ್ನು ನಿಯಂತ್ರಿಸುವ ಬಗ್ಗೆ ಕಸ್ತೂರ್ಬಾ ಆಸ್ಪತ್ರೆ ಹಾಗೂ ಉಡುಪಿಯ ಡಾ| ಟಿ.ಎಂ.ಎ. ಪೈ ಆಸ್ಪತ್ರೆಯ ವೈದ್ಯಾಧಿಕಾರಿಗಳು ವೆಬಿನಾರ್ ಮೂಲಕ ಜಿಲ್ಲೆಯ ಇತರ ವೈದ್ಯರಿಗೆ ಮಾರ್ಗದರ್ಶನ ಹಾಗೂ ತರಬೇತಿ ನೀಡುತ್ತಿದ್ದಾರೆ. ಈಗಾಗಲೇ 130 ವೈದ್ಯರು, ನರ್ಸ್‌ಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಸೇವೆ ಇನ್ನಷ್ಟು ದಿನಗಳ ಕಾಲ ಮುಂದುವರಿಯಲಿದೆ ಎನ್ನುತ್ತಾರೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ಅವಿನಾಶ್ ಶೆಟ್ಟಿ. ಹಲವಾರು ಸವಾಲುಗಳು
ಕೋವಿಡ್ ಪ್ರಾರಂಭಿಕ ಹಂತದಲ್ಲಿ ಹಲವಾರು ರೀತಿಯ ಸವಾಲುಗಳು ಎದುರಾಗಿದ್ದವು. ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಚಿಕಿತ್ಸೆ ನೀಡುತ್ತಿದ್ದ ಕಾರಣ ಆಸ್ಪತ್ರೆಯ ಸಿಬಂದಿಯಲ್ಲಿ ಸಹಜವಾಗಿಯೇ ಭಯ ಇತ್ತು. ಇದನ್ನು ನಿವಾರಿಸಲು ಅವರಿಗೆ ಪ್ರತ್ಯೇಕ ಶಿಬಿರಗಳನ್ನೂ ಮಾಡಲಾಗಿತ್ತು. ಈ ಮೂಲಕ ರೋಗಿಗಳಿಗೆ ಚಿಕಿತ್ಸೆ ಸಂದರ್ಭ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗಿತ್ತು. ಆಸ್ಪತ್ರೆಯ ಸಿಬಂದಿ ಪ್ರತ್ಯೇಕವಾಗಿರಲು ಮಣಿಪಾಲದಲ್ಲಿ ಹಾಸ್ಟೆಲ್‌ಗಳನ್ನು ನೀಡಲಾಗಿತ್ತು. ಈ ಮೂಲಕ ರೋಗಿಗಳ ಜತೆಗೆ ಸಿಬಂದಿಗೂ ಯಾವುದೇ ಸಮಸ್ಯೆಯಾಗದಂತೆ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿತ್ತು ಎಂದು ಡಾ| ಟಿಎಂಎ ಪೈ ಆಸ್ಪತ್ರೆಯ ನೋಡಲ್ ಅಧಿಕಾರಿ ಡಾ| ಶಶಿಕಿರಣ್ ಉಮಾಕಾಂತ್ ಹೇಳುತ್ತಾರೆ. ಉತ್ತಮ ಸೇವೆಯ ಉದ್ದೇಶ
ಕೋವಿಡ್-19 ಆರಂಭದಲ್ಲಿ ಸರಕಾರ ಸಹಿತ ಜನರು ಗೊಂದಲದಲ್ಲಿದ್ದರು. ಇಂತಹ ಸಂದರ್ಭ ದಲ್ಲಿ ಜನರಿಗೆ ಸೇವೆ ನೀಡುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಮಾಹೆಯ ಸಹಯೋಗದಲ್ಲಿ ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆಂದು ಮೀಸಲಿರಿಸಲಾಗಿತ್ತು. ಈ ಮೂಲಕ ಇತರ ಕಾಯಿಲೆಗಳಿಗೆ ಆಸ್ಪತ್ರೆಗೆ ಬರಲು ಹಿಂಜರಿಯುತ್ತಿದ್ದ ರೋಗಿಗಳ ಆತಂಕವೂ ದೂರವಾಯಿತು. ನಮ್ಮ ಈ ಕಾರ್ಯಕ್ಕೆ ಜಿಲ್ಲಾಡಳಿತ ಕೂಡ ಪೂರ್ಣ ಪ್ರಮಾಣದಲ್ಲಿ ಬೆಂಬಲ ಸೂಚಿಸಿತು.
-ಡಾ| ಎಚ್.ಎಸ್. ಬಲ್ಲಾಳ್, ಸಹಕುಲಾಧಿಪತಿ, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ವಿಶೇಷ ವರ್ಗಕ್ಕೆ ವಿಶಿಷ್ಟ ಸೇವೆ
ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಯು ರಾಜ್ಯದ ಏಕೈಕ ಖಾಸಗಿ ಕೋವಿಡ್ ಆಸ್ಪತ್ರೆಯಾಗಿದೆ. ಖಾಸಗಿ-ಸರಕಾರಿ ಸಹಭಾಗಿತ್ವದ ಥಿಯರಿಯನ್ನು ಇಲ್ಲಿ ಜಾರಿಗೊಳಿಸಲಾಗಿದೆ. ಕೊರೊನಾ ಲಕ್ಷಣ ಇರುವವರು ಮತ್ತು ವೃದ್ಧರು, ಗರ್ಭಿಣಿಯರು, ಚಿಕ್ಕ ಮಕ್ಕಳು ಹೀಗೆ ವಿಶೇಷ ವರ್ಗದವರಿಗೆ ಇಲ್ಲಿಯೇ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಲಾಗುತ್ತಿದೆ.
– ಜಿ. ಜಗದೀಶ್, ಜಿಲ್ಲಾಧಿಕಾರಿಗಳು, ಉಡುಪಿ