Advertisement

ಚಿತ್ತವಿಕಲತೆಗೆ ಉಚಿತ ಚಿಕಿತ್ಸೆ

07:17 AM May 26, 2019 | Lakshmi GovindaRaj |

ದೊಡ್ಡಬಳ್ಳಾಪುರ: ಚಿತ್ತವಿಕಲತೆ ಮಾನಸಿಕ ರೋಗವಾಗಿದ್ದು, ಮೂಢನಂಬಿಕೆಗಳಿಗೆ ಮರುಳಾಗದೇ, ಆರಂಭದಲ್ಲಿಯೇ ಚಿಕಿತ್ಸೆ ಪಡೆದರೆ ರೋಗ ತಡೆಗಟ್ಟಬಹುದು. ಸರ್ಕಾರ ಇದಕ್ಕೆ ಉಚಿತ ಚಿಕಿತ್ಸಾ ಸೌಲಭ್ಯ ನೀಡುತ್ತಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾ ಮಾನಸಿಕ ಆರೋಗ್ಯ ತಜ್ಞ ಡಾ.ಗಿರೀಶ್‌ ತಿಳಿಸಿದರು.

Advertisement

ನಗರದ ತಾಲೂಕು ವೈದ್ಯಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಸ್ಕಿಜೋಫ್ರೀನಿಯಾ(ಚಿತ್ತ ವಿಕಲತೆ)ದಿನಾಚರಣೆಯಲ್ಲಿ ಅವರು ಮಾತನಾಡಿದರು.

ವೈದ್ಯರ ಸೇವೆ ಶ್ಲಾಘನೀಯ: ಮನೋ ವೈಕಲ್ಯ ಹೊಂದಿದವರ ಬಗ್ಗೆ ಅಸಡ್ಡೆ ತೋರದೆ ಸಾಮಾನ್ಯರಂತೆ ಕಾಣಬೇಕು. ಮನೋವಿಕಲತೆ ಹೊಂದಿದವರನ್ನು ಆರೋಗ್ಯವಂತರಾಗಿಸುವಲ್ಲಿ ವೈದ್ಯರು, ದಾದಿಯರಷ್ಟೇ ಕುಟುಂಬದವರ ಜವಾಬ್ದಾರಿಯೂ ಇದೆ. ಆರೋಗ್ಯ ಸೇವಾ ಸಿಬ್ಬಂದಿ, ವೈದ್ಯರು ವೈಯಕ್ತಿಕ ಜೀವನದ ಸಂತಸವನ್ನು ತ್ಯಾಗ ಮಾಡಿ ಸಹನೆ, ತಾಳ್ಮೆಯಿಂದ ರೋಗಿಗಳ ಸೇವೆ ಸಲ್ಲಿಸುತ್ತಿರುವುದು ಪ್ರಶಂಸನೀಯ ಎಂದರು.

ಆರಂಭಿಕ ಚಿಕಿತ್ಸೆ: ನನ್ನ ಮೇಲೆ ಬೇರೆಯವರು ಅನುಮಾನ ಬೀಳುತ್ತಿದ್ದಾರೆ. ನನ್ನ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಯಾರೋ ಏನೋ ಯೋಚನೆ ತುಂಬಿಸುತ್ತಿದ್ದಾರೆಂಬ ಭ್ರಮೆಯಲ್ಲಿರುವುದು ಸ್ಕಿಜೋಫ್ರೀನಿಯಾ(ಚಿತ್ತವಿಕಲತೆ)ಲಕ್ಷಣಗಳಾಗಿವೆ. ಇದಕ್ಕೆ ನಿಮ್ಹಾನ್ಸ್‌ಗೆ ತೆರಳಿ ಚಿಕಿತ್ಸೆ ನೀಡಬೇಕೆಂದೇನೂ ಇಲ್ಲ.

ಆರಂಭಿಕ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೇ ಚಿಕಿತ್ಸೆ ಕೊಡಿಸಬಹುದಾಗಿದೆ. ಆಶಾ ಕಾರ್ಯಕರ್ತೆಯರು ಅಂತಹವರನ್ನು ಗುರುತಿಸಿ ಮಾಹಿತಿ ನೀಡಬೇಕು. ತಿಂಗಳ 3ನೇ ಮಂಗಳವಾರ, 1ನೇ ಗುರುವಾರ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದು ತಿಳಿಸಿದರು.

Advertisement

ಸರ್ಕಾರದ ಸೌಲಭ್ಯಗಳು: ಸರ್ಕಾರ ಇದಕ್ಕೆ ಉಚಿತ ಚಿಕಿತ್ಸೆಯ ಸೌಲಭ್ಯ ನೀಡುತ್ತಿದೆ. ರೋಗಿಗೆ ನೀಡುವ ಪ್ರಮಾಣ ಪತ್ರದಿಂದ ಅಂಗವಿಕಲರ ಮಾಸಾಶನ ಪಡೆಯಬಹುದಾಗಿದೆ. ಮಾನಸ ಧಾರಾ ಯೋಜನೆಯಡಿ ವಿವಿಧ ತರಬೇತಿ ಪಡದು ಸ್ವಂತ ಉದ್ಯೋಗ ಮಾಡಲು ಅವಕಾಶವಿದೆ ಎಂದು ತಿಳಿಸಿದರು.

ಮಾನಸಿಕ ಸ್ಥಿಮಿತ ಕಾಪಾಡಿಕೊಳ್ಳಿ: ತಾಲೂಕು ಆರೋಗ್ಯಾಧಿಕಾರಿ ಡಾ.ಶರ್ಮಿಳಾ ಹೆಡೆ ಮಾತನಾಡಿ, ಹಿಂದಿನ ದಿನಗಳಲ್ಲಿ ಮನೋ ವೈಕಲ್ಯ ಒಂದು ಶಾಪ ಎಂಬ ನಂಬಿಕೆಯಿತ್ತು. ಇತ್ತೀಚಿನ ದಿನಗಳಲ್ಲಿ ವೈಜ್ಞಾನಿಕ ಪ್ರಗತಿಯಿಂದ ಮನೋ ವೈಕಲ್ಯವನ್ನು ಗುಣಪಡಿಸಬಹುದಾಗಿದೆ. ಮನೋ ವೈಕಲ್ಯತೆ ಹೊಂದಿದವರನ್ನು ರೋಗಮುಕ್ತಗೊಳಿಸಿ ಮುಖ್ಯವಾಹಿನಿಗೆ ತರಬೇಕು.

ಈ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರು ಕಾಯೊನ್ಮುಖರಾಗಬೇಕು. ಮಾನಸಿಕ ಆರೋಗ್ಯದೊಂದಿಗೆ ದೈಹಿಕ ಆರೋಗ್ಯವೂ ಉತ್ತಮವಾಗಿದ್ದರೆ ಮಾತ್ರ ಆರೋಗ್ಯವಂತ ಎಂದೆನಿಸಿಕೊಳ್ಳುತ್ತಾನೆ. ಈ ನಿಟ್ಟಿನಲ್ಲಿ ದೈಹಿಕ ಆರೋಗ್ಯವಂತರೂ ಸಹ ತಮ್ಮ ಮಾನಸಿಕ ಸ್ಥಿಮಿತವನ್ನು ಕಾಪಾಡಿಕೊಳ್ಳಬೇಕು ಎಂದು ತಿಳಿಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ನಿರೀಕ್ಷಕ ಮಂಜುನಾಥ್‌, ಮನಃಶಾಸ್ತಜ್ಞ ಸದಾನಂದ, ಹಿರಿಯ ಆರೋಗ್ಯ ನಿರೀಕ್ಷಕ ಚಿಕ್ಕತಿಮ್ಮಯ್ಯ, ಗೌರಮ್ಮ, ರೇಖಾ, ಗಗನ್‌ ಮತ್ತಿತರು ಹಾಜರಿದ್ದರು.

ಮಾನಸಿಕ ತೊಂದರೆ ಇರುವವರನ್ನು ಶೇ.90ರಷ್ಟು ಗುಣಪಡಿಸಬಹದಾಗಿದ್ದು, ಚಿತ್ತವಿಕಲತೆಗೆ ವೈದ್ಯರು ಸೂಚಿಸಿದಂತೆ ನಿರಂತರ ಚಿಕಿತ್ಸೆ ನೀಡುತ್ತಿರಬೇಕು. ಕೆಲವು ವೇಳೆ ರೋಗಿ ಆತ್ಮಹತ್ಯೆಗೆ ಶರಣಾಗಬಹುದು ಅಥವಾ ಇನ್ನೊಬ್ಬರನ್ನು ಹತ್ಯೆ ಮಾಡಲು ಯತ್ನಿಸಬಹುದು. ಈ ಬಗ್ಗ ಎಚ್ಚರಿಕೆ ವಹಿಸಬೇಕು.
-ಡಾ.ಗಿರೀಶ್‌, ಜಿಲ್ಲಾ ಮಾನಸಿಕ ಆರೋಗ್ಯ ತಜ್ಞರು

Advertisement

Udayavani is now on Telegram. Click here to join our channel and stay updated with the latest news.

Next