Advertisement

ಕರಾವಳಿಯನ್ನು ಭಿಕ್ಷಾಟನೆ ಮುಕ್ತಗೊಳಿಸಿ…

06:45 AM Mar 27, 2018 | Team Udayavani |

ಉಡುಪಿ: ಭಿಕ್ಷೆ ಬೇಡುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧ. ಕರ್ನಾಟಕ ಭಿಕ್ಷಾಟನೆ ನಿಷೇಧ ಕಾಯಿದೆ 1975ರ ಅನ್ವಯ ರಾಜ್ಯಾದಂತ ಭಿಕ್ಷಾಟನೆ ನಿಷೇಧಿಸಲಾಗಿದೆ. 

Advertisement

ಭಿಕ್ಷಾಟನೆಯಲ್ಲಿ ತೊಡಗಿದ ಅಪರಾಧಕ್ಕಾಗಿ ಗರಿಷ್ಠ 3 ವರ್ಷಗಳ ಕಾಲ ಬಂಧನದ ಶಿಕ್ಷೆ ಕೂಡ ಇದೆ. ರಾಜ್ಯದ 14 ಜಿಲ್ಲೆಗಳಲ್ಲಿ ಅವರನ್ನು ಬಂಧಿಸಿಡುವ ನಿರಾಶ್ರಿತರ ಕೇಂದ್ರಗಳೂ ಇವೆ. ಅಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ, ಊಟ-ಉಪಾಹಾರ, ಸಮವಸ್ತ್ರ, ಹಾಸಿಗೆ, ಹೊದಿಕೆ ಸಹಿತ ಎಲ್ಲ ಅನುಕೂಲಗಳನ್ನು ಸರಕಾರ ಕಲ್ಪಿಸುತ್ತದೆ. ಜತೆಗೆ ಮುಂದೆ ಅವರು ಭಿಕ್ಷಾಟನೆಯಲ್ಲಿ ತೊಡಗದಂತೆ ಮಾನಸಿಕವಾಗಿ ಸಶಕ್ತರಾಗುವಂತೆ ಮಾಡಲಾಗುತ್ತದೆ. ಬಳಿಕ ಬದುಕಿನಲ್ಲಿ ಭದ್ರ ನೆಲೆ ಕಾಣಲು ವಿವಿಧ ವೃತ್ತಿಗಳಲ್ಲಿ ಸ್ವ-ಉದ್ಯೋಗ ತರಬೇತಿ ಕೊಡಲಾಗುತ್ತಿದೆ.

ಭಿಕ್ಷಾಟನೆಯ ನಿರ್ಮೂಲನೆಗಾಗಿ ಸರಕಾರ ಇಷ್ಟೆಲ್ಲ ವ್ಯವಸ್ಥೆಗಳನ್ನು ಮಾಡಿದ್ದರೂ ಕರಾವಳಿ ಜಿಲ್ಲೆಗಳಲ್ಲಿ ಭಿಕ್ಷುಕರ ಸಮಸ್ಯೆಯನ್ನು ಪೂರ್ಣವಾಗಿ ತೊಡೆದುಹಾಕಲು ಸಂಬಂಧ ಪಟ್ಟ ಅಧಿಕಾರಿಗಳು ಕಾರ್ಯಪ್ರವರ್ತರಾಗಿಲ್ಲ.

ಜಿಲ್ಲೆಯಲ್ಲಿ ಭಿಕ್ಷುಕರ ಸಂಖ್ಯೆ ಮಿತಿಮೀರಿದೆ. ಚಿಕ್ಕ ಮಕ್ಕಳು, ಹದಿ ಹರೆಯದ ಯುವಕ ಯುವತಿಯರು, ಹಿರಿಯ ನಾಗರಿಕರು ಜಿಲ್ಲೆಯ ಅಲ್ಲಲ್ಲಿ ಭಿಕ್ಷೆ ಬೇಡುವುದನ್ನು ಕಾಣುತ್ತೇವೆ. ಬಸ್‌ ತಂಗುದಾಣ, ರೈಲು ನಿಲ್ದಾಣ, ವಾರದ ಸಂತೆಗಳು, ಮನೆ, ಅಂಗಡಿ ಬಾಗಿಲುಗಳಲ್ಲಿ ಭಿಕ್ಷೆ ಬೇಡುವವರ ಕಾಟ ಹೇಳತೀರದಾಗಿದೆ. ಜನಜಂಗುಳಿಯಯಲ್ಲಿ ಜೇಬುಗಳ್ಳತನವನ್ನೂ ಇವರು ನಡೆಸುತ್ತಾರೆ. ದೃಢಕಾಯದ ಕೆಲವರೂ ಸೋಮಾರಿಗಳಾಗಿ ಭಿಕ್ಷೆ ಬೇಡುವುದನ್ನು ಕಾಣುತ್ತೇವೆ. ಮಹಿಳೆಯರು ಮಕ್ಕಳನ್ನು ಜೋಳಿಗೆಯಲ್ಲಿ ಕಟ್ಟಿಕೊಂಡು ಭಿಕ್ಷೆ ಬೇಡುವ ದೃಶ್ಯ ನಗರದ ರಸ್ತೆಗಳಲ್ಲಿ ಸಾಮಾನ್ಯವಾಗಿದೆ. ಇವರಿಂದ ಸಾರ್ವಜನಿಕರಿಗೆ ಆಗುವ ತೊಂದರೆ ಹೇಳತೀರದು. ಚಿಕ್ಕ ಮಕ್ಕಳು ಬಂದು ಕೈಹಿಡಿದೆಳೆದು ಹಣಕ್ಕೆ ಅಂಗಾಲಾಚುವಾಗ ಕರುಣಾಮಯಿಗಳು ಭಿಕ್ಷೆ ನೀಡುತ್ತಾರೆ. ಸೋಮಾರಿಗಳನೇಕರು ತಮ್ಮ ಮಕ್ಕಳನ್ನೇ ಭಿಕ್ಷಾಟನೆಗಿಳಿಸುತ್ತಾರೆ. 

ರಾಜ್ಯ ಸರಕಾರವು ಭಿಕ್ಷಾಟನೆ ಮುಕ್ತ ರಾಜ್ಯ ಮಾಡಲು ಪಣ ತೊಟ್ಟಿರುವಾಗ ಸಮಾಜ ಕಲ್ಯಾಣ ಇಲಾಖೆ ಯಾಕೆ ಕಣ್ಣುಮುಚ್ಚಿ ಕುಳಿತಿದೆ ಎಂಬುದು ಸಾರ್ವಜನಿಕರ ಪ್ರಶ್ನೆ. ಸಮಾಜ ಕಲ್ಯಾಣ ಇಲಾಖೆ ಮಂತ್ರಿ, ಅಧಿಕಾರಿಗಳು ಜಿಲ್ಲೆಯ ನಿರಾಶ್ರಿತರ ಭಿಕ್ಷುಕರ ಬಗ್ಗೆ ಗಮನಹರಿಸ ಬೇಕಾಗಿದೆ.
– ತಾರಾನಾಥ ಮೇಸ್ತ ಶಿರೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next