ಕೆ.ಆರ್.ನಗರ: ಗ್ರಾಮೀಣ ದಸರಾ ಯಶಸ್ವಿಯಾಗಿ ನಡೆಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಪರಸ್ಪರ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು. ತಾಪಂ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಬುಧುವಾರ ನಡೆದ ಗ್ರಾಮೀಣ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ತಾಲೂಕಿನಲ್ಲಿ ದಸರಾ ಆಚರಿಸಲು ಎರಡು ದಿನಗಳಲ್ಲಿ 7 ಲಕ್ಷ ರೂ. ಬಿಡುಗಡೆ ಮಾಡಲಾಗುವುದು ಎಂದರು.
ಈ ಬಾರಿ ರೈತರಿಗೆ ದಸರಾ ದರ್ಶನ ಮಾಡಿಸಲು ಉಚಿತ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ತಾಲೂಕಿನಿಂದ ಒಂದು ಸಾವಿರಕ್ಕಿಂತ ಅಧಿಕ ಮಂದಿಗೆ ಅವಕಾಶ ಕಲ್ಪಿಸಲಿದ್ದು ಅವರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಶಾಸಕ ಸಾ.ರಾ.ಮಹೇಶ್ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಭೆ ನಡೆಸಬೇಕು ಎಂದರು.
ಸರ್ಕಾರದ 34 ಇಲಾಖೆಗಳ ಅಧಿಕಾರಿಗಳು ನಿತ್ಯ ಗ್ರಾಮೀಣ ದಸರಾ ಆಚರಣೆಯ ಸಂಬಂಧ ವಿಚಾರ ವಿನಿಮಯ ಮಾಡಿಕೊಂಡು ಯಾವುದೇ ತೊಂದರೆಯಿದ್ದಲ್ಲಿ ನನ್ನನ್ನು ಸಂಪರ್ಕಿಸಬೇಕು. ಯಾವುದೇ ಪಕ್ಷ ಮತ್ತು ಜಾತಿ ರಾಜಕಾರಣ ಮಾಡದೆ ಸರ್ವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಸಚಿವ ಎಂ.ಶಿವಣ್ಣ, ತಾಪಂ ಅಧ್ಯಕ್ಷೆ ಮಲ್ಲಿಕಾ, ಸದಸ್ಯರಾದ ಶ್ರೀನಿವಾಸಪ್ರಸಾದ್, ಚಂದ್ರಶೇಖರ್, ಮಾಜಿ ಸದಸ್ಯ ಸಣ್ಣಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸಗೌಡ, ವಕ್ತಾರ ಎಚ್.ಪಿ.ಗೋಪಾಲ್, ರಾಜ್ಯ ಪರಿಷತ್ ಸದಸ್ಯ ಎಚ್.ಡಿ.ಪ್ರಭಾಕರ್‌ಜೈನ್, ಉಪ-ವಿಭಾಗಾಧಿಕಾರಿ ಬಿ.ಎನ್.ವೀಣಾ, ತಹಶೀಲ್ದಾರ್ ಎಂ.ಮಂಜುಳಾ, ಡಿವೈಎಸ್‌ಪಿ ಕ್ಷಮಾಮಿಶ್ರಾ, ಕಾರ್ಯನಿರ್ವಹಣಾಧಿಕಾರಿ ಗಿರೀಶ್, ಶಾಸಕರ ಆಪ್ತ ಸಹಾಯಕ ಅರುಣ್‌ಕುಮಾರ್ ಇತರರಿದ್ದರು.
ನನ್ನ ವೇಗಕ್ಕೆ ತಕ್ಕಂತೆ ಕಾರ್ಯನಿರ್ವಹಿಸಿ: ಅಭಿವೃದ್ಧಿ ವಿಚಾರದಲ್ಲಿ ನಾನು ಯಾವುದೇ ರಾಜಿಗೆ ಸಿದ್ಧನಿಲ್ಲ. ಹೀಗಾಗಿ ತಾಲೂಕಿನ ಅಧಿಕಾರಿಗಳು ಸರ್ಕಾರದ ನನ್ನ ವೇಗಕ್ಕೆ ತಕ್ಕಂತೆ ಕೆಲಸ ಮಾಡಬೇಕೆಂದು ಸಚಿವ ಸೋಮಣ್ಣ ಸೂಚಿಸಿದರು. ಸೆ.16 ಮತ್ತು 17ರಂದು ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದು, ಆನಂತರ ಆಯಾಯ ತಾಲೂಕಿನ ಶಾಸಕರೊಟ್ಟಿಗೆ ತಾಲೂಕು ಮಟ್ಟದ ಸಭೆ ನಡೆಸಲಿದ್ದು, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲಾಗುವುದು.
ಈವರೆಗೆ ಅಧಿಕಾರಿಗಳು ಏನು ಮಾಡಿದ್ದೀರೊ ನನಗೆ ಗೊತ್ತಿಲ್ಲ. ಮುಂದೆ ಸರ್ಕಾರದ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡಬೇಕು ಎಂದು ತಾಕೀತು ಮಾಡಿದರು. ಮುಂದಿನ ಸಭೆಗಳಿಗೆ ಶಾಸಕ ಸಾ.ರಾ.ಮಹೇಶ್ ಅವರನ್ನು ಕರೆಯುತ್ತೇನೆ. ಆದರೆ, ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಇದನ್ನು ಹೊರತುಪಡಿಸಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ನನ್ನ ಕೆಲಸವನ್ನು ಮಾಡುತ್ತೇನೆ ಎಂದರು.