Advertisement

ಅನುದಾನ ಕಡಿತ ಕುರಿತು ವಾಕ್ಸಮರ

12:59 AM Sep 01, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಆಡಳಿತ ಅವಧಿಯಲ್ಲಿ ಮಂಡಿಸಿದ ಬಿಬಿಎಂಪಿ ಬಜೆಟ್‌ನಲ್ಲಿ ಬದಲಾವಣೆ ಮಾಡಿ ಬಿಜೆಪಿ ಸರ್ಕಾರ ಅನುಮೋದನೆ ನೀಡಿರುವ ವಿಚಾರ ಶನಿವಾರ ಪಾಲಿಕೆ ಸಭೆಯಲ್ಲಿ ಮಾತಿನ ಸಮರಕ್ಕೆ ಕಾರಣವಾಯಿತು.

Advertisement

2019-20ನೇ ಸಾಲಿನಲ್ಲಿ ಮೈತ್ರಿ ಆಡಳಿತ ಮಂಡಿಸಿದ್ದ ಬಜೆಟ್‌ನಲ್ಲಿ ಬದಲಾವಣೆ ಮಾಡಿರುವ ಬಗ್ಗೆ ಪ್ರಸ್ತಾಪಿಸಿದ ಉಪಮೇಯರ್‌ ಭದ್ರೇಗೌಡ, “14ನೇ ಹಣಕಾಸು ಆಯೋಗದಲ್ಲಿ ಅಭಿವೃದ್ಧಿ ಕಾಮಗಾರಿಗೆ ನೀಡಿದ್ದ 10 ಕೋಟಿ ರೂ. ಅನುದಾನದಲ್ಲಿ 5 ಕೋಟಿ ರೂ. ಕಡಿತ ಮಾಡಲಾಗಿದೆ. ಅದೇ ರೀತಿಯಲ್ಲಿ 2019-20ನೇ ಸಾಲಿನಲ್ಲಿ ನಾಗಪುರ ವಾರ್ಡ್‌ ಅಭಿವೃದ್ಧಿಗೆ ನೀಡಲಾಗಿದ್ದ 5 ಕೋಟಿ ರೂ. ಅನುದಾನಲ್ಲಿ 3 ಕೋಟಿ ರೂ. ಕಡಿತ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾಲಕ್ಷ್ಮೀ ಲೇಔಟ್‌ನಲ್ಲಿ ಜನಪ್ರತಿನಿಧಿಯೇ ಇಲ್ಲ ಈ ಕ್ಷೇತ್ರಕ್ಕೆ 20 ಕೋಟಿ ರೂ. ನೀಡಲಾಗಿದೆ ಎಂದು ದೂರಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ, “20 ಕೋಟಿ ರೂ. ಅನುದಾನವನ್ನು ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ಇಟ್ಟಿಲ್ಲ. ಮಹಾಲಕ್ಷ್ಮೀ ಲೇಔಟ್‌ನಲ್ಲಿ 7 ವಾರ್ಡ್‌ಗಳಿವೆ’ ಎಂದು ತಿರುಗೇಟು ನೀಡಿದರು.

ತಾರತಮ್ಯ ಮಾಡಿಲ್ಲ: ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಬಜೆಟ್‌ನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿರುವುದು ನಿಜ. ಬಿಬಿಎಂಪಿಯಲ್ಲಿ ಬಿಜೆಪಿಯ 102 ಸದಸ್ಯರಿದ್ದೇವೆ. ಕಾಂಗ್ರೆಸ್‌ನ 75, ಜೆಡಿಎಸ್‌ನ 14 ಸದಸ್ಯರಿದ್ದಾರೆ. ನಮಗಿಂತ ಹೆಚ್ಚು ಅನುದಾನ ಅವರಿಗೇ ನೀಡಲಾಗಿದೆ. ಹೀಗಿರುವಾಗ ದ್ವೇಷದ ರಾಜಕೀಯ ಮಾಡುತ್ತಿರುವವರು ಯಾರು ಎಂದು ಪ್ರಶ್ನಿಸಿದರು.

ಬಜೆಟ್‌ ಬಗ್ಗೆ ವಿಶೇಷ ಸಭೆ ಮಾಡಿ, ಬಿಬಿಎಂಪಿ ಹಣಕಾಸು ಸ್ಥಿತಿ ಬಗ್ಗೆ ಶ್ವೇತಪತ್ರ ಹೊರಡಿಸಿ. ಇಲ್ಲವಾದರೆ ಮುಂದಿನ ದಿನಗಳಲ್ಲಿ ನಾವೇ ಶ್ವೇತಪತ್ರ ಮಂಡಿಸುತ್ತೇವೆ ಎಂದಾಗ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ವಾಗ್ವಾದ ಪ್ರಾರಂಭವಾಯಿತು. “ಈ ರೀತಿ ಬಜೆಟ್‌ ಬದಲಾವಣೆ ಮಾಡುವುದಕ್ಕೆ ತಾಂತ್ರಿಕ ಸಮಸ್ಯೆ ಎಂದು ನೆಪ ಹೇಳಿದರು. ಅನುದಾನ ಕೇಳಿದ್ರೆ ನಾವೇ ಕೊಡುತ್ತಿದ್ದೆವು’ ಎಂದು ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಹೇಳಿದ್ದು, ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

Advertisement

ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜು ಮಾತನಾಡಿ, ನಮ್ಮ ಬಜೆಟ್‌ ಸರಿ ಇಲ್ಲ ಎಂದು ತಡೆಹಿಡಿದಿರುವುದಾಗಿ ಹೇಳಿದ್ದರು. ಆದರೆ, ಈಗ ನಾವು ಮಂಡಿಸಿದ್ದ ಬಜೆಟ್‌ ಮೊತ್ತಕ್ಕೇ ಅನುಮೋದನೆ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಳಿಯೇ ಇದ್ದು, ಬೆಂಗಳೂರಿನ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕಿದ್ದರೆ “ನಮ್ಮ ಮುಖ್ಯಮಂತ್ರಿ’ಗಳ ಬಳಿ ಕೇಳ್ಳೋಣ ಎಂದು ಬಿಜೆಪಿಯವರನ್ನು ಕೆಣಕಿದರು.

ಕಡತ ವಿಲೇವಾರಿ ಸರಳೀಕರಣ: ಬಿಬಿಎಂಪಿಯಲ್ಲಿ ಕಾಮಗಾರಿಗಳಿಗೆ ಸಂಬಂಧಿಸಿದ ಕಡತಗಳ ವಿಲೇವಾರಿ ವಿಧಾನವನ್ನು ಸರಳೀಕರಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಹೇಳಿದರು. ಟೆಂಡರ್‌ ಪ್ರಕ್ರಿಯೆಯ ಲೋಪಗಳನ್ನು ಸರಿಪಡಿಸಿ, ಕಡತ ವಿಲೇವಾರಿಗೆ ಅಧಿಕಾರಿಗಳ ಮಟ್ಟದಲ್ಲಿ ಕಾರ್ಯಾಗಾರ ನಡೆಸಲಾಗುವುದು. ಮೂರು ತಿಂಗಳಲ್ಲಿ ಕಾಮಗಾರಿಗಳಿಗೆ ಕಾರ್ಯಾದೇಶ ನೀಡಲು ಕ್ರಮ ಕೈಗೊಳ್ಳಲಾಗುವುದು. ತಾಂತ್ರಿಕ ಮತ್ತು ಆಡಳಿತಾತ್ಮಕ ಅನುಮೋದನೆ ಮೂಲಕ ಟೆಂಡರ್‌ ಪ್ರಕ್ರಿಯೆ ವಿಳಂಬ ತಡೆದು, ಗುತ್ತಿಗೆದಾರರಿಗೆ ಒಂದೇ ದಿನದಲ್ಲಿ ಕಾರ್ಯಾದೇಶ ಪತ್ರ ನೀಡಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next