Advertisement

Udupi, ದ.ಕ.ದಲ್ಲಿ 18 ವಾಹನಗಳಿಂದ ಉಚಿತ ಸೇವೆ; ಪಶುಸಂಜೀವಿನಿ ಕಾರ್ಯಾಚರಣೆಗೆ ಸಿದ್ಧ

12:28 AM Aug 17, 2023 | Team Udayavani |

ಕೋಟ: ಜಾನುವಾರುಗಳ ಆರೋಗ್ಯ ಹದಗೆಟ್ಟಾಗ 1962 ಸಹಾಯವಾಣಿಗೆ ಕರೆ ಮಾಡಿದರೆ ವಾಹನವೊಂದು ವೈದ್ಯರ ಸಮೇತ ಮನೆ ಬಾಗಿಲಿಗೆ ಆಗಮಿಸಿ ಉಚಿತ ಸೇವೆ ನೀಡುವ ಪಶುಸಂಜೀವಿನಿ ಯೋಜನೆ ರಾಜ್ಯಾದ್ಯಂತ ಅನುಷ್ಠಾನಗೊಳ್ಳುತ್ತಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 18 ವಾಹನಗಳು ಸೇವೆಗೆ ಸಿದ್ಧಗೊಂಡಿವೆ. ವಾರದಲ್ಲೇ ಸೇವೆ ಆರಂಭಗೊಳ್ಳುವ ನಿರೀಕ್ಷೆ ಇದೆ.

Advertisement

ಪಶುಪಾಲನೆ ಮತ್ತು ಪಶುವೈದ್ಯ ಇಲಾಖೆಯಲ್ಲಿ ಸಿಬಂದಿ ಕೊರತೆ ಇದ್ದು ವಿವಿಧ ಕಡೆಗಳಲ್ಲಿ ಸೇವೆ ಸರಿಯಾಗಿ ಸಿಗುವುದಿಲ್ಲ ಎನ್ನುವ ಕೂಗು ಆಗಾಗ ಕೇಳಿಬರುತ್ತದೆ. ಆದ್ದರಿಂದ ಜಾನುವಾರುಗಳಿಗೆ ತುರ್ತು ಚಿಕಿತ್ಸೆ ಅಗತ್ಯವಿದ್ದಾಗ 1962 ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಿದರೆ ಹತ್ತಿರದ ತಾಲೂಕು ಕೇಂದ್ರದ ವಾಹನಕ್ಕೆ ಕರೆ ವರ್ಗಾವಣೆಗೊಳ್ಳುತ್ತದೆ. ಅದರಲ್ಲಿನ ವೈದ್ಯರು, ಸಹಾಯಕರು ಧಾವಿಸಿ ಸ್ಥಳದಲ್ಲಿಯೇ ಚಿಕಿತ್ಸೆ ನೀಡುತ್ತಾರೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಅಗತ್ಯ ಸಲಹೆ-ಸೂಚನೆ ನೀಡುತ್ತಾರೆ.

ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸಾ ಘಟಕ, ಪ್ರಸೂತಿ ಮತ್ತು ಶಸ್ತ್ರ ಚಿಕಿತ್ಸಾ ಉಪಕರಣಗಳ ಕಿಟ್‌, ಮರಣೋತ್ತರ ಪರೀಕ್ಷೆ ಉಪಕರಣಗಳ ಕಿಟ್‌, ವಾಶ್‌ ಬೇಸಿನ್‌, ಆಮ್ಲಜನಕ ವ್ಯವಸ್ಥೆ ಹಾಗೂ ಓರ್ವ ವೈದ್ಯ, ಸಹಾಯಕ, ಚಾಲಕ ಕಮ್‌ ಡಿ ದರ್ಜೆ ನೌಕರ ವಾಹನದಲ್ಲಿರುತ್ತಾರೆ. ರಾಜ್ಯಕ್ಕೆ ಒಟ್ಟು 290 ವಾಹನಗಳು ಮಂಜೂರಾಗಿದ್ದು, ತಾಲೂಕಿಗೆ ಒಂದು ಹಾಗೂ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಹೆಚ್ಚುವರಿ ಒಂದು ವಾಹನ ನೀಡಲಾಗುತ್ತದೆ. ಉಡುಪಿ ಜಿಲ್ಲೆಗೆ 8, ದ.ಕ. ಜಿಲ್ಲೆಗೆ 10 ವಾಹನ ಆಗಮಿಸಿದೆ.

ಹೊರಗುತ್ತಿಗೆ
ಕೇಂದ್ರ ಸರಕಾರದ ಶೇ. 60 ಮತ್ತು ರಾಜ್ಯ ಸರಕಾರದ ಶೇ. 40 ಅನುದಾನದಲ್ಲಿ ಯೋಜನೆ ಕಾರ್ಯ ನಿರ್ವಹಿಸಲಿದೆ. ನಿರ್ವಹಣೆಯ ಹೊರಗುತ್ತಿಗೆಯನ್ನು ಮುಂಬಯಿ ಮೂಲದ ಎಜುಸ್ಪಾರ್ಕ್‌ ಇಂಟರ್‌ ನ್ಯಾಶನಲ್‌ ಖಾಸಗಿ ಕಂಪೆನಿಗೆ ಟೆಂಡರ್‌ ನೀಡಲಾಗಿದೆ. ಗುತ್ತಿಗೆದಾರರು ಆ್ಯಂಬುಲೆನ್ಸ್‌ಗೆ ಅಗತ್ಯವಿರುವ ಸಿಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿ ತರಬೇತಿ ನೀಡಲಿದ್ದಾರೆ. ನಿವೃತ್ತ ವೈದ್ಯರೂ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಲು ಅವಕಾಶವಿದೆ.

ಪಶುಸಂಜೀವಿನಿ ವಾಹನ ಜಿಲ್ಲೆಗೆ ಆಗಮಿಸಿದ್ದು, ಉಡುಪಿ ಜಿಲ್ಲೆಯ ಎಲ್ಲ ವಾಹನಗಳಿಗೆ ವೈದ್ಯರ ನೇಮಕ ನಡೆದಿದ್ದು, ದ.ಕ. ಜಿಲ್ಲೆಯ ಮೂಲ್ಕಿ, ಉಳ್ಳಾಲ, ಬೆಳ್ತಂಗಡಿ, ಕಡಬ, ಪುತ್ತೂರು ತಾಲೂಕಿನ ವಾಹನಕ್ಕೆ ವೈದ್ಯಾಧಿಕಾರಿ ನೇಮಕ ಬಾಕಿ ಇದೆ. ವಾರದಲ್ಲಿ ಕಾಯಾರಂಭಿಸುವ ನಿರೀಕ್ಷೆ ಇದ್ದು, ರೈತರು ಸೌಲಭ್ಯವನ್ನು ಪಡೆದುಕೊಳ್ಳಬಹುದು.
– ಡಾ| ಅರುಣ್‌ ಕುಮಾರ್‌ / ಡಾ| ಶಂಕರ್‌ ಶೆಟ್ಟಿ
ಉಪ ನಿರ್ದೇಶಕರು, ಪಶುಸಂಗೋಪನ ಇಲಾಖೆ, ದ.ಕ. ಮತ್ತು ಉಡುಪಿ

Advertisement

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next