ಶಿರಸಿ: ಜಿಲ್ಲೆಯಲ್ಲಿ ಅನಂತಮೂರ್ತಿ ಹೆಗಡೆ ಟ್ರಸ್ಟ್ ಮೂಲಕ ಗಮನ ಸೆಳೆಯುತ್ತಿರುವ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಅವರು ಇದೀಗ ಕುಶಲಕರ್ಮಿ ಹಾಗೂ ಸಾಹಸಿ ಕೊನೆಗೌಡರಿಗೆ ವಿಮೆ ಮಾಡಿಸಿಕೊಡುವ ಯೋಜನೆಗೆ ಚಾಲನೆ ನೀಡಿದ್ದಾರೆ.
ಅಡಿಕೆಯು ಬೆಳೆ ಜಿಲ್ಲೆಯ ಜೀವನಾಡಿ, ಕೊನೆ ಗೌಡರು ಕೊನೆ ಕೊಯ್ಯುವಾಗ, ಮದ್ದನ್ನು ಸಿಂಪಡಿಸುವಾಗ, ಮರದಿಂದ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಸಂಗಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಅನಾಹುತವನ್ನು ತಡೆಯುವುದು ಅಸಾಧ್ಯವಾದರೂ, ಅದರ ಪರಿಣಾಮವನ್ನು ಸಾಧ್ಯವದಷ್ಟು ಸಹಾಯ ಮಾಡುವುದು ನಮ್ಮ ಆಶಯವಾಗಿದ್ದು, ಇದಕ್ಕಾಗಿ ಈ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದಾಗಿ ತಿಳಿಸಿದ್ದಾರೆ.
ಭಾರತೀಯ ಅಂಚೆ ಇಲಾಖೆ ನೀಡುವ ಗ್ರೂಪ್ ಆಕ್ಸಿಡೆಂಟ್ ಗಾರ್ಡ್ ಪಾಲಿಸಿಯನ್ನು ಎಲ್ಲ ಕೊನೆಗೌಡರಿಗೂ ಮಾಡಿಸುವ ಯೋಜನೆಯನ್ನು ಟ್ರಸ್ಟ್ ಮೂಲಕ ಕೈಗೆತ್ತಿಕೊಳ್ಳುತ್ತಿದ್ದಾರೆ. ಈ ಆಕ್ಸಿಡೆಂಟ್ ಗಾರ್ಡ್ ಪಾಲಿಸಿಯು, ಅಪಘಾತದಿಂದ ಮರಣ, ಶಾಶ್ವತ ಅಂಗವೈಕಲ್ಯ, ಭಾಗಶಃ ಅಂಗವೈಕಲ್ಯಕ್ಕೆ 10 ಲ.ರೂ. ವಿಮೆ ಹೊಂದಿದೆ. ಮತ್ತು ಈ ಪಾಲಿಸಿಯಡಿಯಲ್ಲಿ 60 ಸಾವಿರ ರೂ. ತನಕ ಒಳರೋಗಿ ವೆಚ್ಚ, 30 ಸಾ.ರೂ.ವರೆಗೆ ಹೊರರೋಗಿ ವೆಚ್ಚ, 10 ದಿನಗಳವರೆಗೆ 1 ಸಾ.ರೂ. ದೈನಂದಿನ ಆಸ್ಪತ್ರೆ ನಗದು ನೆರವು, ಮೃತರ 2 ಮಕ್ಕಳಿಗೆ 1 ಲಕ್ಷ ರೂಪಾಯಿ ಶೈಕ್ಷಣಿಕ ನೆರವು, 25 ಸಾ.ರೂ. ವರೆಗೆ ಕುಟುಂಬ ಸಾರಿಗೆ ಪ್ರಯೋಜನ ಮತ್ತು 5 ಸಾ.ರೂ.ವರೆಗೆ ಅಂತಿಮ ಸಂಸ್ಕಾರದ ನೆರವಿನ ಸೌಲಭ್ಯವನ್ನು ಹೊಂದಿದೆ.
ಜಿಲ್ಲೆಯಾದ್ಯಂತ ಎಲ್ಲ ಕೊನೆಗೌಡರಿಗೆ ಈ ಪಾಲಿಸಿಯನ್ನು ಮಾಡಿಸುವ ಸಂಕಲ್ಪ ಮಾಡಿದ್ದು, ವಿಮಾ ದಾರ ಪಾವತಿಸುವ ಪಾವತಿಯನ್ನು ಟ್ರಸ್ಟ್ ಮೂಲಕ ಭರಿಸುವದಾಗಿ ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲ ಸಹಕಾರಿ ಸೇವಾ ಸಂಘ ಮತ್ತು ಪಂಚಾಯತಿಗಳಿಗೆ ತಲುಪಿ, ಸ್ಥಳೀಯ ಕೊನೆಗೌಡರ ವಿವರಗಳನ್ನು ಸಂಗ್ರಹಿಸಿ ಕೊಡುವಂತೆ ಮನವಿಯನ್ನು ಸಂಸ್ಥೆ ಮಾಡಿದ್ದು, ಜಿಲ್ಲೆಯ ಅಡಿಕೆ ತೋಟದ ಮಾಲಕರು, ನಿಮ್ಮ ಮನೆಗೆ ಬರುವ ಕೊನೆಗೌಡರಿಗೆ ಈ ಸೌಲಭ್ಯದ ವಿಚಾರವನ್ನು ತಿಳಿಸಿ, ಅವರ ವಿವರಗಳನ್ನು ಸ್ಥಳೀಯ ಪಂಚಾಯತಿ ಅಥವಾ ಸೇವಾ ಸಹಕಾರಿ ಸಂಘಕ್ಕೆ ತಲುಪಿಸಲು ಕೋರಿದ್ದಾರೆ. ನಮ್ಮ ಸಂಸ್ಥೆಯ ಸಿಬಂದಿ ಮತ್ತು ಅಂಚೆ ಕಚೇರಿ ಸಿಬಂದಿಗಳು ಅಲ್ಲಿಗೆ ಬಂದು, ಸಂಗ್ರಹಿಸಿದ ವಿವರಗಳನ್ನು ಸ್ವೀಕರಿಸಿ, ಪಾಲಿಸಿಯನ್ನು ಮಾಡಿಸುತ್ತಾರೆ. ಪಾಲಿಸಿ ಬಾಂಡ್ ಬಂದ ನಂತರ, ಎಲ್ಲ ಕೊನೆಗೌಡರಿಗೆ, ಔತಣಕೂಟ ಏರ್ಪಡಿಸಿ, ಗೌರವಿಸಿ, ಪಾಲಿಸಿ ಬಾಂಡನ್ನು ಹಸ್ತಾಂತರಿಸುತ್ತೇವೆ ಎಂದು ತಿಳಿಸಿದ್ದಾರೆ.
ಜತೆಗೆ ದಶಕಗಳಿಂದ ಸೇವೆ ಸಲ್ಲಿಸಿರುವ, ಹಿರಿಯ ಕೊನೆಗೌಡರನ್ನು ಗುರುತಿಸಿ, ಅವರ ಜೀವಮಾನದ ಸಾಧನೆಗಾಗಿ, ಸನ್ಮಾನ ಕಾರ್ಯಕ್ರಮವನ್ನೂ ನಡೆಸಲಿದ್ದೇವೆ ಎಂದು ಅನಂತಮೂರ್ತಿ ಹೆಗಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.