Advertisement

ಬಡವರ ಮದುವೆ ಮನೆಗೆ ಉಚಿತ ಸುಣ್ಣ-ಬಣ್ಣ

06:48 AM Feb 14, 2019 | |

ಪುತ್ತೂರು: ಬಡ ಹೆಣ್ಣುಮಕ್ಕಳಿರುವ ಮದುವೆ ಮನೆಗೆ ಸುಣ್ಣ -ಬಣ್ಣ ಹಚ್ಚುವ ಕೆಲಸವನ್ನು ಉಚಿತವಾಗಿ ಮಾಡಿಕೊಡಲು ಯುವಕರ ತಂಡವೊಂದು ಮುಂದೆ ಬಂದಿದೆ.

Advertisement

ಹಳೆನೇರಂಕಿ-ಆತೂರು ಪರಿಸರದ ಈ ಯುವಕರ ತಂಡ ವೃತ್ತಿಯಲ್ಲಿ ಪೈಂಟಿಂಗ್‌ ಕೆಲಸಗಾರರು. ಬಡ ಕುಟುಂಬದ ಮದುವೆ ಸಮಾರಂಭಗಳಿಗೆ ತಮ್ಮಿಂದ ಧನಸಹಾಯ ನೀಡಲು ಸಾಧ್ಯವಿಲ್ಲ. ಆದ್ದರಿಂದ ಬೇರೆ ರೀತಿಯಲ್ಲಿ ಸಹಾಯ ಮಾಡಬಹುದೇ ಎನ್ನುವ ಆಲೋಚನೆ ಈ ಹಾದಿಯನ್ನು ತೋರಿಸಿಕೊಟ್ಟಿದೆ.

ಹಾರೀಸ್‌ ಹಳೆನೇರಂಕಿ, ಅಖಿಲ್‌ ಆತೂರು, ಅನ್ವರ್‌ ಆತೂರು ಹಾಗೂ ಸಾದೀಕ್‌ ಹಳೆನೇರಂಕಿ ಈ ತಂಡದ ಸದಸ್ಯರು. ಈ ನಾಲ್ವರೂ ಜತೆಯಾಗಿ ಕೆಲಸ ಮಾಡುತ್ತಾರೆ. ಇದರ ನಡುವೆ ಬಡವರಿಗೆ ಸಹಾಯ ಮಾಡಬೇಕು ಎನ್ನುವ ಆಲೋಚನೆ ಅವರ ಮನಸ್ಸಿನಲ್ಲಿ ಮೂಡಿದೆ. ಆದ್ದರಿಂದ ಒಂದು ಸಂದೇಶವನ್ನು ವಾಟ್ಸ್‌ ಆ್ಯಪ್‌ನಲ್ಲಿ ಹರಿಯ ಬಿಟ್ಟಿದ್ದಾರೆ. ಇದೀಗ ಈ ಸಂದೇಶ ವೈರಲ್‌ ಆಗಿದ್ದು, ಮಂಡ್ಯ, ಶಿವಮೊಗ್ಗದವರೆಗೂ ತಲುಪಿದೆ.

ಕಡು ಬಡತನವಿರುವ ಕುಟುಂಬದವರ ಮಾಹಿತಿ ನೀಡಿದರೆ, ಆ ಮನೆಯ ಮದುವೆ ಸಮಾರಂಭಕ್ಕಾಗಿ ಉಚಿತ ಪೈಂಟಿಂಗ್‌ ಕೆಲಸ ಮಾಡಿಕೊಡುತ್ತಾರೆ. ಇದಕ್ಕಾಗಿ ತಿಂಗಳಿನ 2-3 ದಿನಗಳನ್ನು ಮೀಸಲಿಟ್ಟಿದ್ದಾರೆ. ಪೈಂಟ್‌ ಅನ್ನು ಮನೆಯವರು ತಂದುಕೊಟ್ಟರೆ ಆಯಿತು. ಹಚ್ಚುವ ಕೆಲಸಕ್ಕೆ ಹಣ ನೀಡಬೇಕಾಗಿಲ್ಲ. ಹಾಗೆ ನೋಡುವುದಾದರೆ, ಪೈಂಟ್‌ಗಿಂತ ಅದನ್ನು ಹಚ್ಚುವ ಕೆಲಸಕ್ಕೆ ಹೆಚ್ಚು ಹಣ ಖರ್ಚಾಗುತ್ತದೆ. 10 ಸಾವಿರ ರೂ.ನ ಪೈಂಟ್‌ ಖರೀದಿ ಮಾಡಿದರೆ, ಕೆಲಸಗಾರರಿಗೆ 15 ಸಾವಿರ ರೂ. ನೀಡಬೇಕಾಗುತ್ತದೆ.

ಪೈಂಟ್‌ಗೆ ದಾನಿಗಳು
ಮದುವೆ ಮನೆಯಲ್ಲಿ ತೀರಾ ಬಡತನ ಇದ್ದು, ಪೈಂಟ್‌ ಖರೀದಿಗೂ ಹಣ ಹೊಂದಿಸಲು ಕಷ್ಟ ಪಡುವವರಿದ್ದಾರೆ. ಅಂತಹ ಸಂದರ್ಭವಿದ್ದರೆ, ಮನೆಯವರು ತಿಳಿಸಿದರೆ ದಾನಿಗಳನ್ನು ಸಂಪರ್ಕಿಸಬಹುದು ಎನ್ನುತ್ತಾರೆ ತಂಡದ ಹಾರೀಸ್‌. ಬಡವರಿಗೆ ಸಹಾಯ ಮಾಡಲು ದಾನಿಗಳು ಮುಂದೆ ಬರುತ್ತಾರೆ. ಅವರಿಂದ ಹಣ ಹೊಂದಿಸಿ ಕೊಂಡು, ಮನೆಯ ಪೈಂಟಿಂಗ್‌ ಉಚಿತವಾಗಿ ಮಾಡಲಾಗುವುದು ಎಂದು ಹೇಳುತ್ತಾರೆ.

Advertisement

ದೂರದೂರಿನಿಂದ ಕರೆ
ಸಂದೇಶ ಹರಿಯ ಬಿಟ್ಟು 2-3 ದಿನಗಳಲ್ಲಿ ದೂರದ ಊರುಗಳಿಂದ ಕರೆಗಳು ಬಂದಿವೆ. ಶಿವಮೊಗ್ಗ, ಮಂಡ್ಯದ ಜನರು ತಮ್ಮ ಊರಿನ ಬಡವರ ಮನೆಯ ಮದುವೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಇಷ್ಟು ದೂರ ಹೋಗಿ ಕೆಲಸ ನಿರ್ವಹಿಸುವುದು ಕಷ್ಟ. ತುಂಬಾ ಹಣ ಬೇಕಾಗುತ್ತದೆ. ಉಚಿತವಾಗಿ ಪೈಂಟಿಂಗ್‌ ಕೆಲಸ ನಿರ್ವಹಿಸುವುದು ದೊಡ್ಡ ವಿಷಯವಲ್ಲ. ಇನ್ನೂ ಕೆಲವರು ಬಸ್‌ನ ವೆಚ್ಚ ಭರಿಸುತ್ತೇವೆ ಎನ್ನುವವರಿದ್ದಾರೆ. ಆದರೆ ಈ ಬಗ್ಗೆ ಆಲೋಚನೆ ಮಾಡಿಲ್ಲ. ಸದ್ಯದ ಮಟ್ಟಿಗೆ ಪುತ್ತೂರು, ಉಪ್ಪಿನಂಗಡಿ, ಆತೂರು, ಕಡಬ ಆಸುಪಾಸಿನ ಕೆಲಸಗಳು ಸಿಕ್ಕಿದರೆ ಉತ್ತಮ ಎನ್ನುತ್ತಾರೆ ತಂಡದ ಸದಸ್ಯರು.

ಸ್ಥಳೀಯ ಪೈಂಟರ್‌ಗಳ ಸಹಾಯ
ಮಂಗಳೂರು, ಬೆಳ್ತಂಗಡಿ ಮೊದಲಾದ ಪ್ರದೇಶಗಳಿಂದಲೂ ಹಳೆನೇರಂಕಿಯ ಪೈಂಟಿಂಗ್‌ ತಂಡಕ್ಕೆ ಕರೆಗಳು ಬಂದಿವೆ. ಅಷ್ಟು ದೂರ ಹೋಗಿ ಕೆಲಸ ಮಾಡುವುದು ಕಷ್ಟ. ಈ ವಿಷಯವನ್ನು ಸ್ಥಳೀಯ ಪೈಂಟರ್‌ಗಳ ಗಮನಕ್ಕೆ ತರಲಾಗಿದೆ. ಅಲ್ಲಿನ ಕೆಲಸಗಳನ್ನು ತಾವೇ ಉಚಿತವಾಗಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಮುಂದೆ ದೂರದ ಊರುಗಳಿಂದ ಕರೆಗಳು ಬಂದರೆ ಆಯಾ ಭಾಗದ ಪೈಂಟರ್‌ಗಳನ್ನು ಸಂಪರ್ಕಿಸಲೂ ತಂಡ ತೀರ್ಮಾನಿಸಿದೆ.

ಹಣವಿಲ್ಲ ಎಂದವರಿಗೆ ಸಹಾಯ ಹಸ್ತ
ಇದುವರೆಗೆ ತುಂಬಾ ಬಡತನವಿದ್ದ ಮನೆಗಳನ್ನು ಗಮನಿಸಿ, ಒಂದು ದಿನದ ಸಂಬಳ ಅಥವಾ ಸ್ವಲ್ಪ ಹಣವನ್ನು ಬಿಟ್ಟು ಬರುತ್ತಿದ್ದೆವು. ಇದಕ್ಕಿಂತ ಹೆಚ್ಚು ಸಹಾಯ ಮಾಡಲು ನಮ್ಮಿಂದ ಸಾಧ್ಯವಾಗಿಲ್ಲ. ಬಡವರು ಬಂದು ಹಣ ಬೇಕು ಎಂದು ಕೇಳಿದರೆ, ನಮ್ಮಲ್ಲಿ ಹಣವಿಲ್ಲ. ಆದ್ದರಿಂದ ಬಡವರ ಮನೆಗಳಿಗೆ ಉಚಿತವಾಗಿ ಪೈಂಟಿಂಗ್‌ ಮಾಡಿಕೊಡಲು ನಾವು ನಾಲ್ಕು ಜನ ತೀರ್ಮಾನಿಸಿದೆವು. ನಾವು ನಾಲ್ಕು ಮಂದಿಯೂ ಒಟ್ಟಿಗೇ ಕೆಲಸ ಮಾಡುತ್ತಿದ್ದೇವೆ. ವಾಟ್ಸ್‌ ಆ್ಯಪ್‌ ಸಂದೇಶ ಕಳುಹಿಸಿದ ಮೇಲೆ ಒಂದು ಮನೆಗೆ ಸುಣ್ಣ-ಬಣ್ಣ ಮಾಡಿಕೊಟ್ಟಿದ್ದೇವೆ.
-ಹಾರೀಸ್‌ ಹಳೆನೇರಂಕಿ,
ಪೈಂಟಿಂಗ್‌ ಕೆಲಸಗಾರ

ಗಣೇಶ್‌ ಎನ್‌. ಕಲ್ಲರ್ಪೆ 

Advertisement

Udayavani is now on Telegram. Click here to join our channel and stay updated with the latest news.

Next